Site icon TUNGATARANGA

ಶೈಲೇಶಚಂದ್ರ ವರದಿಯನ್ನು ಸಂಪೂರ್ಣವಾಗಿ ಅನುಷ್ಟಾನಗೊಳಿಸುವಂತೆ ಆಗ್ರಹಿಸಿ| ಅಂಚೆ ನೌಕರರ ಸಂಘದ ವತಿಯಿಂದ ಪ್ರತಿಭಟನೆ

ಸಾಗರ : ಗ್ರಾಮೀಣ ಅಂಚೆ ನೌಕರರ ವಿವಿಧ ಬೇಡಿಕೆಗಳನ್ನು ಈಡೇರಿಸಿ ಮತ್ತು ಶೈಲೇಶಚಂದ್ರ ವರದಿಯನ್ನು ಸಂಪೂರ್ಣವಾಗಿ ಅನುಷ್ಟಾನಗೊಳಿಸುವಂತೆ ಆಗ್ರಹಿಸಿ ಬುಧವಾರ ಅಂಚೆ ನೌಕರರ ಸಂಘದ ವತಿಯಿಂದ ಪ್ರಧಾನ ಅಂಚೆ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.


ಈ ಸಂದರ್ಭದಲ್ಲಿ ಮಾತನಾಡಿದ ಸಂಘದ ಶಿವಮೊಗ್ಗ ವಿಭಾಗದ ಉಪಾಧ್ಯಕ್ಷ ಮಂಜಪ್ಪ ಕೆ.ಎಲ್. ಅಂಚೆ ನೌಕರರನ್ನು ಕೇಂದ್ರ ಸರ್ಕಾರ ಜೀತದಾಳುಗಳಂತೆ ದುಡಿಸಿಕೊಳ್ಳುತ್ತಿದೆ. ದುಡಿಮೆಗೆ ತಕ್ಕ ಸಂಬಳ ಕೊಡದೆ ಸತಾಯಿಸುತ್ತಿದೆ. ಗ್ರಾಮೀಣ ಅಂಚೆ ನೌಕರರಿಗೆ ೮ ಗಂಟೆಗಳ ಕೆಲಸ ನೀಡುವ ಜೊತೆಗೆ ಪಿಂಚಣಿ ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ನೀಡಬೇಕು. ಸೇವಾ ಹಿರಿತನದ ಆಧಾರದಲ್ಲಿ ಜಿಡಿಎಸ್ ನೌಕರರಿಗೆ ವಿಶೇಷ ಇಂಕ್ರಿಮೆಂಟ್ ನೀಡಬೇಕು ಎಂದು ಒತ್ತಾಯಿಸಿದರು.


ಇತ್ತೀಚಿನ ದಿನಗಳಲ್ಲಿ ಅಂಚೆ ನೌಕರರಿಗೆ ಅವೈಜ್ಞಾನಿಕ ಗುರಿಯನ್ನು ನಿಗಧಿಪಡಿಸಲಾಗುತ್ತಿದ್ದು ಇದನ್ನು ತಕ್ಷಣ ನಿಲ್ಲಿಸಬೇಕು. ಗುಂಪು ವಿಮೆಯನ್ನು ರೂ. ೫ಲಕ್ಷದವರೆಗೆ ಹೆಚ್ಚಿಸಬೇಕು. ಅವೈಜ್ಞಾನಿಕ ಗುರಿ ಸಾಧಿಸದೆ ಇರುವ ಜಿಡಿಎಸ್ ನೌಕರರಿಗೆ ನೀಡುತ್ತಿರುವ ಕಿರುಕುಳವನ್ನು ನಿಲ್ಲಿಸಬೇಕು. ಜಿ.ಡಿ.ಎಸ್. ಗ್ರಾಜ್ಯುಯಿಟಿ ಹಣವನ್ನು ೫ ಲಕ್ಷ ರೂ.ವರೆಗೆ ಹೆಚ್ಚಿಸಬೇಕು. ಜಿಡಿಎಸ್ ಮತ್ತು ಕುಟುಂಬದ ಸದಸ್ಯರಿಗೆ ವೈದ್ಯಕೀಯ ಸೌಲಭ್ಯ ಒದಗಿಸುವ ಜೊತೆಗೆ ೧೮೦ ದಿನಗಳ ರಜೆ ಉಳಿಸಿಕೊಳ್ಳಲು ಅವಕಾಶ ಕಲ್ಪಿಸಬೇಕು ಎಂದು ಒತ್ತಾಯಿಸಿದರು.


ಸಂಘದ ಸಹ ಕಾರ್ಯದರ್ಶಿ ಸುಬ್ರಹ್ಮಣ್ಯ ಕಾರ್ಗಲ್ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ನೆಟ್‌ವರ್ಕ್ ಸಮಸ್ಯೆಯಿಂದ ಅಂಚೆ ನೌಕರರು ಕೆಲಸ ಮಾಡಲು ಆಗುತ್ತಿಲ್ಲ. ಖಾಯಂ ನೌಕರರಿಗೆ ಸಿಗುವ ಸವಲತ್ತುಗಳು ಇಲಾಖೇತರ ನೌಕರರಿಗೆ ಸಿಗುತ್ತಿಲ್ಲ. ನಮ್ಮಿಂದ ಕೆಲಸ ಮಾಡಿಸಿಕೊಂಡು ಖಾಯಂ ನೌಕರರು ಹೆಸರು ಗಳಿಸುತ್ತಿದ್ದಾರೆ. ಯಾವುದೇ ಸೌಲಭ್ಯ ಕೊಡದೆ ಹೆಚ್ಚು ಕೆಲಸ ಮಾಡಿಸಿಕೊಳ್ಳುತ್ತಿದ್ದಾರೆ. ಆದ್ದರಿಂದ ಇಲಾಖೇತರ ನೌಕರರನ್ನು ನೌಕರರು ಎಂದು ಪರಿಗಣಿಸಲು ಮನವಿ ಮಾಡಿದರು.


ಈ ಸಂದರ್ಭದಲ್ಲಿ ವೆಂಕಟೇಶ್ ಎಚ್.ಜಿ. ಶಶಿಕಲಾ, ಚಂದ್ರಕಲಾ, ರಾಜೇಂದ್ರ ಇನ್ನಿತರರು ಹಾಜರಿದ್ದರು

Exit mobile version