Site icon TUNGATARANGA

ಗಾಂಧೀಜಿಯ ವಿಚಾರಗಳು ಸಾರ್ವಕಾಲಿಕ :ಪ್ರೊ. ಕೆ.ಬಿ. ಧನಂಜಯ 

ಶಿವಮೊಗ್ಗ : ಪ್ರಪಂಚಾದ್ಯಂತ ಸ್ವೀಕೃತವಾದ ಗಾಂಧಿಯನ್ನು ಇಂದಿನ ತಲೆಮಾರು ತುಂಬ ಹಗುರವಾಗಿ ಕಾಣುತ್ತಿರುವುದು ವಿಷಾದನೀಯ ಸಂಗತಿ ಎಂದು ಸಹ್ಯಾದ್ರಿ ಕಲಾ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಪ್ರೊ. ಧನಂಜಯ ಕೆ.ಬಿ. ಅಭಿಪ್ರಾಯಪಟ್ಟರು. 

ಸಹ್ಯಾದ್ರಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜು ಹಾಗೂ ಕಲಾ ಕಾಲೇಜಿನ ವತಿಯಿಂದ ಇಂದು ಹಮ್ಮಿಕೊಳ್ಳಲಾದ ಗಾಂಧಿ ಮತ್ತು ಶಾಸ್ತ್ರಿ ಜಯಂತಿ ಕಾರ್ಯಕ್ರಮ‌ದಲ್ಲಿ ವಿಶೇಷ ಉಪನ್ಯಾಸ ನೀಡಿದರು. 

ಮಾನವೀಯತೆಯ ಪ್ರತೀಕ ಗಾಂಧಿ ಆಗಿದ್ದರು. ಅಂಥ ವ್ಯಕ್ತಿಯನ್ನು ಗುಂಡಿಟ್ಟು ಕೊಂದ ನಾಡು ನಮ್ಮದು. ಇದಕ್ಕೆ ನಾವು ತಲೆ ತಗ್ಗಿಸಬೇಕು. ಆದರೆ ಕೊಂದ ವ್ಯಕ್ತಿಯನ್ನೇ ವಿಜೃಂಭಿಸುತ್ತಿರುವ ನಾವು ಮಾನವೀಯ‌ತೆಯಿಂದ ಬಹುದೂರ ಸಾಗಿದ್ದೇವೆ ಎಂದರು. 

ಅರೆಬೆತ್ತಲೆಯ ಫಕೀರನಾಗಿ ಜಗತ್ತಿಗೆ ಶಾಂತಿ ಸಂದೇಶವನ್ನು ಸಾರಿದವರು ಗಾಂಧಿ. ಜಗತ್ತಿನ ಬಹುತೇಕ ರಾಷ್ಟ್ರ‌ಗಳು ಇಂದು ಗಾಂಧಿಯ ವಿಚಾರಧಾರೆಯನ್ನು ಅನುಸರಿಸುತ್ತಿವೆ. ಗಾಂಧಿಯನ್ನು ಭಾರತೀಯರು ಕುಬ್ಜವಾಗಿ ನೋಡದೆ, ವಿಶಾಲ ಮನೋಭಾವ‌ದಿಂದ ನೋಡುವ ಅಗತ್ಯ ಇಂದು ಇದೆ ಎಂದು ಪ್ರತಿಪಾದಿಸಿದರು. 

ಕಾರ್ಯಕ್ರಮ‌ದಲ್ಲಿ ಸಹ್ಯಾದ್ರಿ ಕಲಾ ಕಾಲೇಜಿನ ವಿದ್ಯಾರ್ಥಿ ಕ್ಷೇಮಾಧಿಕಾರಿ ಡಾ. ಕೆ. ಚಂದ್ರಪ್ಪ ಗಾಂಧಿ ವಿಚಾರ ಕುರಿತು, ಸಹ್ಯಾದ್ರಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನ ವಿದ್ಯಾರ್ಥಿ ಕ್ಷೇಮಾಧಿಕಾರಿ ಡಾ. ಕುಂದನ್ ಬಸವರಾಜ ಅವರು ಶಾಸ್ತ್ರಿಯವರ ವಿಚಾರ ಕುರಿತು ಮಾತನಾಡಿದರು. 

ಸಹ್ಯಾದ್ರಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜು ಹಾಗೂ ಕಲಾ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಎಂ.ಕೆ.ವೀಣಾ ಅವರು ಕಾರ್ಯಕ್ರಮ‌ದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವಾಣಿಜ್ಯ ಕಾಲೇಜಿನ ಎನ್ಎಸ್ಎಸ್ ಅಧಿಕಾರಿ ಡಾ. ಶುಭಾ ಮರವಂತೆ ಸ್ವಾಗತ ಕೋರಿದರು. ಕಲಾ ಕಾಲೇಜಿನ ಎನ್ಎಸ್ಎಸ್ ಅಧಿಕಾರಿ ಡಾ. ಪ್ರಕಾಶ್ ಮರ್ಗನಳ್ಳಿ ವಂದಿಸಿದರು. ಡಾ. ಎಚ್.ಎಸ್. ಕೃಪಾಲಿನಿ ಮತ್ತು ಎನ್ಎಸ್ಎಸ್ ವಿದ್ಯಾರ್ಥಿಗಳಿಂದ ಭಜನಾ ಕಾರ್ಯಕ್ರಮ ನಡೆಯಿತು.

Exit mobile version