Site icon TUNGATARANGA

  ಅಹಿಂಸೆಯ ತತ್ವವನ್ನು ಅಳವಡಿಸಿಕೊಂಡು ಲೋಕಕ್ಕೇ ಪ್ರತಿಪಾದಿಸಿದ ದೊಡ್ಡ ತತ್ವಜ್ಞಾನಿ ಮಹಾತ್ಮಾಗಾಂಧೀಜಿ : ಜಿಲ್ಲಾಧಿಕಾರಿ ಡಾ.ಸೆಲ್ವಮಣಿ

ಶಿವಮೊಗ್ಗ ಅಕ್ಟೋಬರ್ 02,
    ಅಹಿಂಸೆಯ ತತ್ವವನ್ನು ಅಳವಡಿಸಿಕೊಂಡು ಲೋಕಕ್ಕೇ ಪ್ರತಿಪಾದಿಸಿದ ದೊಡ್ಡ ತತ್ವಜ್ಞಾನಿ ಮಹಾತ್ಮಾಗಾಂಧೀಜಿಯವರು. ಅವರ ಈ ತತ್ವವನ್ನು ನಾವೆಲ್ಲ ಅಳವಡಿಸಿಕೊಂಡು ಇತರರಿಗೂ ಬೋಧಿಸೋಣ ಎಂದು ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಆರ್ ತಿಳಿಸಿದರು.
      ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರಪಾಲಿಕೆ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಶಿವಮೊಗ್ಗ ಇವರ ಸಂಯುಕ್ತಾಶ್ರಯದಲ್ಲಿ ಇಂದು ಅಂಬೇಡ್ಕರ್ ಭವನದಲ್ಲಿ ಏರ್ಪಡಿಸಲಾಗಿದ್ದ ಮಹಾತ್ಮಾ ಗಾಂಧೀಜಿಯವರ 154 ನೇ ಜಯಂತಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿಯವರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.


   ರಾಷ್ಟ್ರಪಿತ ಗಾಂಧೀಜಿಯವರು ಕೇವಲ ಸ್ವಾತಂತ್ರ್ಯ ಓರ್ವ ಹೋರಾಟಗಾರರಲ್ಲ. ಸತ್ಯ, ಅಹಿಂಸೆ, ಸಮಾನತೆ ಮಾರ್ಗದಲ್ಲಿ ಸಾಗಬೇಕೆಂದು ತೋರಿಸಿಕೊಟ್ಟ ತತ್ವಜ್ಞಾನಿಗಳು. ಸ್ವಾತಂತ್ರ್ಯ ಚಳವಳಿ ವೇಳೆ ಬ್ರಿಟಿಷರು ಗುಂಡಿಗಿಂತ ಗಾಂಧೀಜಿಯವರ ‘ಅಹಿಂಸಾ’ ತತ್ವಕ್ಕೆ ಹೆಚ್ಚು ಹೆದರುತ್ತಿದ್ದರು. ವಿದ್ಯಾರ್ಥಿಗಳೆಲ್ಲರೂ ವಿನ್ಸೆಂಟ್ ಚರ್ಚಿಲ್‍ರವರು ಗಾಂಧೀಜಿ ಬಗ್ಗೆ ಹೇಳಿರುವುದನ್ನು ಓದಬೇಕು.
     ಶಾಂತಿ, ಸರ್ಮಧರ್ಮ ಸಮಾನತೆಯಿಂದ ಸೌಹಾರ್ಧತೆ ನೆಲೆಸಬೇಕೆಂದು ಹೋರಾಡುತ್ತಿದ್ದ ಗಾಂಧಿಯವರು  ನನ್ನ ಜೀವನವೇ ನನ್ನ ಸಂದೇಶವೆಂಬಂತೆ ಬದುಕಿದವರು. ಅವರ ಸತ್ಯ ಮಾರ್ಗ ಮತ್ತು ಅಹಿಂಸೆಯ ತತ್ವಗಳನ್ನು ನಾವು ಅಳವಡಿಸಿಕೊಂಡು, ಸುತ್ತಮುತ್ತಲಿನವರಿಗೆ ಬೋಧಿಸಬೇಕು. ಬೇರೊಬ್ಬರಿಗೆ ಹಿಂಸೆ ಮಾಡಿದರೆ ಆ ಹಿಂಸೆ ಎಲ್ಲರ ಮೇಲೂ ಕೆಟ್ಟ ಪರಿಣಾಮ ಬೀರುತ್ತದೆ. ಅದನ್ನು ಗಮನದಲ್ಲಿಟ್ಟುಕೊಂಡು ಅಹಿಂಸೆಯ ಮಾರ್ಗದಲ್ಲಿ ನಾವೆಲ್ಲ ನಡೆಯೋಣ ಎಂದು ಕರೆ ಕೊಟ್ಟರು.


      ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಂಜುನಾಥ್ ಡಿ, ಉಪನ್ಯಾಸ ನೀಡಿ ಮಾತನಾಡಿ, ಮಹಾತ್ಮ ಅನ್ನಿಸಿಕೊಳ್ಳುವುದು ಸುಲಭದ ಕೆಲಸವಲ್ಲ. ಮಹಾತ್ಮನಾಗುವ ಹಿಂದೆ ಬಹಳ ದೊಡ್ಡ ತ್ಯಾಗ, ಬಲಿದಾನವಿರುತ್ತದೆ.


    ಇಡೀ ವಿಶ್ಚದಲ್ಲಿ ಒಬ್ಬ ನಾಯಕನ ಕುರಿತು ಅತಿ ಹೆಚ್ಚು ಸಾಹಿತ್ಯ ರಚನೆಯಾಗಿರುವುದು ಗಾಂಧೀಜಿ ಬಗ್ಗೆ ಎಂಬುದು ಹೆಮ್ಮೆ. ಅವರ ಜೀವನವೇ ತೆರೆದ ಪುಸ್ತಕವಿದ್ದಂತೆ. ಅವರೊಂದು ಬೆಳಕು. ನಮ್ಮ ಬದುಕಿಗೆ ಮಾತ್ರವಲ್ಲ ಇಡೀ ಜಗತ್ತಿಗೇ ಗಾಂಧೀಜಿಯವರು ಆದರ್ಶಪ್ರಾಯರಾಗಿದ್ದಾರೆ. ನಮ್ಮ ಸುತ್ತಲಿನ ಅನೇಕ ಸಮಸ್ಯೆಗಳಿಗೆ ಅವರು ಪರಿಹಾರವಾಗಿದ್ದಾರೆ.


       ಇಂತಹ ನಾಯಕನ ಕುರಿತು ಅಧ್ಯಯನ, ಓದಿನ ಕೊರತೆ ಇದೆ. ಒಬ್ಬರ ಬಗ್ಗೆ ಏನೂ ಅಧ್ಯಯನ ನಡೆಸದೆ, ತಿಳಿಯದೆ ಟೀಕೆ ಮಾಡುವುದು, ತಪ್ಪಾಗಿ ಮಾತನಾಡುವುದು ಸರಿಯಲ್ಲ. ಓದಿನ ಅರಿವಿನ ಕೊರತೆಯನ್ನು ನೀಗಿಸಬೇಕು. ವಿದ್ಯಾರ್ಥಿಗಳು ಬಾಫೂಜಿ ಬಗ್ಗೆ ಚೆನ್ನಾಗಿ ಅಧ್ಯಯನ ಮಾಡಬೇಕು. ತಮ್ಮ ನಡೆ-ನುಡಿಯಲ್ಲಿ ಅಹಿಂಸೆಯನ್ನು ಅಳವಡಿಸಿಕೊಂಡಿದ್ದ ಬಾಪೂಜಿಯವರು ವಿದ್ಯಾರ್ಥಿಗಳಿಗೂ ಹೊಡೆಯದೆ, ಹಿಂಸೆ ಮಾಡದೆ ವಿದ್ಯೆ ಕಲಿಸಬೇಕು ಎನ್ನುತ್ತಿದ್ದರು. ಒಂದೊಮ್ಮೆ ಶಿಕ್ಷಿಸಲೇ ಬೇಕಾದಲ್ಲಿ ತಂದೆಯ ಪ್ರೀತಿಯ ಅಂತಃಕರಣದಿಂದ ಶಿಕ್ಷಿಸಬೇಕೆನ್ನುತ್ತಿದ್ದರು.
     ಜಿಲ್ಲೆಯಲ್ಲಿ ಎರಡು ಬಾರಿ ಶಾಸಕಿಯಾಗಿದ್ದ ಸ್ವಾತಂತ್ರ್ಯ ಹೋರಾಟಗಾರ್ತಿ ರತ್ನಮ್ಮ ಮಾಧವಾಚಾರ್‍ರವರು ತಮ್ಮ ಬಾಣಂತನವನ್ನು ಜೈಲಿನಲ್ಲಿಯೇ ಕಳೆದಿದ್ದರು ಎನ್ನುವ ವಿಷಯ ಎಷ್ಟೋ ಜನರಿಗೆ ಗೊತ್ತಿಲ್ಲ. ಜಿಲ್ಲೆಯ, ನಾಡಿದ, ದೇಶದ ಹೋರಾಟಗಾರರು ಹಾಗೂ ಗಾಂಧಿ ಕುರಿತು ಹೆಚ್ಚೆಚ್ಚು ಓದಿ ತಿಳಿದುಕೊಳ್ಳಬೇಕು ಎಂದರು.    


       ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ಸರ್ವಧರ್ಮ ಪ್ರಾರ್ಥನೆ ಮಾಡಲಾಯಿತು. ಶ್ರೀ ಮಂಜುನಾಥ ಭಟ್‍ರವರು ಭಗವದ್ಗೀತೆಯನ್ನು, ಶ್ರೀ ಲತೀಫ್ ಸಾ ಅದಿರವರು ಖುರಾನ್‍ನ್ನು ಹಾಗೂ ಫಾ.ಸ್ಟ್ಯಾನಿ ಡಿ’ಸೋಜ ರವರು ಬೈಬಲ್ ಪಠನ ಮಾಡಿದರು.
     ಮಹಾತ್ಮಾಗಾಂಧಿ ಜಯಂತಿ ಪ್ರಯುಕ್ತ ಗಾಂಧಿ ಜೀವನ ಕುರಿತು ಪ್ರೌಢಶಾಲೆ, ಪದವಿಪೂರ್ವ ಮತ್ತು ಪದವಿ/ಸ್ನಾತಕೋತ್ತರ ವಿಭಾಗದ ವಿದ್ಯಾರ್ಥಿಗಳಿಗೆ ಆಯೋಜಿಸಲಾಗಿದ್ದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ನಗದು ಬಹುಮಾನ ಮತ್ತು ಪ್ರಶಸ್ತಿ ಪತ್ರಗಳನ್ನು ವಿತರಿಸಲಾಯಿತು.
     ಕಾರ್ಯಕ್ರಮದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ(ಪ್ರ) ಮಾರುತಿ ಆರ್ ಸ್ವಾಗತಿಸಿದರು. ಅಲ್ಪಸಂಖ್ಯಾತರ ಇಲಾಖೆಯ ತಾಲ್ಲೂಕು ವಿಸ್ತರಣಾಧಿಕಾರಿ ಶ್ರೀಪತಿ ನಿರೂಪಿಸಿದರು.
       ಜಿ.ಪಂ ಉಪ ಕಾರ್ಯದರ್ಶಿ ಸುಜಾತ ಕೆ.ಆರ್, ಡಿಡಿಪಿಯು ಕೃಷ್ಣಪ್ಪ, ಡಿಡಿಪಿಐ ಸಿ.ಆರ್.ಪರಮೇಶ್ವರಪ್ಪ, ಇತರೆ ಅಧಿಕಾರಿಗಳು ಪಾಲ್ಗೊಂಡಿದ್ದರು.

Exit mobile version