ಶಿವಮೊಗ್ಗ, ಅ.2:
ಶಾಂತಿನಗರವಾದ ರಾಗಿಗುಡ್ಡದ ಎರಡು ಕೋಮುಗಳ ಹಲವರು ನಡೆಸಿದ ಗಲಾಟೆಗೆ ಸಂಬಂಧಿಸಿದಂತೆ ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್ ಹಾಗೂ ಜಿಲ್ಲೆಯ ಪೊಲೀಸ್ ಅಧಿಕಾರಿಗಳ ಜಾಣನಡೆಯ ಶಿಸ್ತುಕ್ರಮ ಪ್ರಶಂಸನೀಯವಾಗಿದೆ.
ಅಲ್ಲಿ ಹಾಕಿದ್ದ ಪ್ಲೆಕ್ಸಿಯಲ್ಲಿನ ಪ್ರಚೋದನಾಕಾರಿ ವಿಷಯ ಗುರುತಿಸಿದ ಜಿಲ್ಲಾ ಪೊಲೀಸ್ ಇಲಾಖೆ ತಾನೇ ಕ್ರಮಕೈಗೊಂಡಿದ್ದನ್ನು ವಿರೋಧಿಸಿದ ಕೆಲವರ ವರ್ತನೆಯಿಂದ ಇಂತಹ ಗಲಾಟೆಯಾಗಿದ್ದು, ಕೆಲವರ ಸುಳ್ಳು ಸುದ್ದಿ ಹರಡುವಿಕೆಯೂ ಇದಕ್ಕೆ ಪುಷ್ಟಿ ನೀಡಿದ್ದು ದುರಂತ.
ಕೋಮುಭಾವನೆ ಉದ್ರೇಕಗೊಳಿಸುವ ಪ್ಲೆಕ್ ಅಳವಡಿಕೆ ಸರಿಪಡಿಸಲು ಸೂಚಿಸಿದ್ದ ಪೊಲೀಸ್ ಇಲಾಖೆ ಹಿಂದೂಮಹಾಸಭಾ, ಓಂ ಗಣಪತಿ, ಈದ್ ಮಿಲಾದ್ ಮೆರವಣಿಯನ್ನೂ ಶಾಂತಿಯುತವಾಗಿ ಅನುವು ಮಾಡಿಕೊಟ್ಟಿದ್ದರೂ ಕೊನೆ ಹಂತದಲ್ಲಿ ನಡೆದ ಈ ಘಟನೆ ಸಿಹಿಮೊಗೆಗೆ ಕಳಂಕ ತರುವ ವಿಷಯವೇ ಹೌದು. ಈ ಸಂದರ್ಭದಲ್ಲಿ ಎಸ್ಪಿ, ಎಎಸ್ಪಿ, ಡಿವೈಎಸ್ಪಿ ಅವರು ಸ್ಥಳದಲ್ಲಿ ಮೊಕ್ಕಾಂ ಹೂಡಿ ಶಾಂತಿ ತರುವಲ್ಲಿ ಯಶಸ್ವಿಯಾಗಿದ್ದನ್ನು ಶಿವಮೊಗ್ಗ ಶಾಸಕ ಚನ್ನಬಸಪ್ಪ ಸೇರಿದಂತೆ ಎಲ್ಲಾ ಜನಪ್ರತಿನಿಧಿಗಳು ಪ್ರಶಂಸಿದ್ದಾರೆ.
ಎಸ್ಪಿ ಮಿಥುನ್ ಕುಮಾರ್ ಹೇಳಿದ್ದಿಷ್ಟು:
ರಾಗಿಗುಡ್ಡದಲ್ಲಿ ಈದ್ ಮಿಲಾದ್ ಮೆರವಣಿಗೆ ಸಂದರ್ಭದಲ್ಲಿ ಕಿಡಿಗೇಡಿಗಳು ಕಲ್ಲು ತೂರಿದ್ದಾರೆ. ಇದರ ನಂತರ ವಾತಾವರಣ ಪ್ರಕ್ಷುಬ್ಧಗೊಂಡಿತ್ತು ಎಂದು ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್ ಗಲಭೆ ಕುರಿತು ಪ್ರತಿಕ್ರಿಯೆ ನೀಡಿದರು.
ಮಾಧ್ಯಮಗಳಿಗೆ ಮಾಹಿತಿ ನೀಡಿದ ಅವರು, ಸ್ಥಳಕ್ಕೆ ಹೋದಾಗ ಕೆಲವರು ನಮ್ಮ ಮಾತಿಗೆ ಒಪ್ಪಿದ್ರು, ಆದರೆ ಕೆಲವರು ಒಪ್ಪಲಿಲ್ಲ. ಹುಡುಗರ ಗುಂಪೊಂದು ದಾಂಧಲೆಗೆ ಸಿದ್ಧತೆ ಮಾಡಿಕೊಂಡಿತ್ತು. ಕೆಲವರು ದಾಂಧಲೆ ನಡೆಸಿದರು. ನಾವು ಹೆಚ್ಚುವರಿ ಬಲ ನಿಯೋಜಿಸಿದ್ದರಿಂದ ಪರಿಸ್ಥಿತಿ ಹತೋಟಿಗೆ ಬಂತು ಎಂದರು.
144 ಸೆಕ್ಷನ್ ಕೂಡ ಆ ಪ್ರದೇಶದಲ್ಲಿ ಜಾರಿ ಮಾಡಿದ್ದೆವು. ಈಗ ಪರಿಸ್ಥಿತಿ ಹತೋಟಿಯಲ್ಲಿದೆ. ಯಾವುದೇ ತೊಂದರೆ ಆಗಿಲ್ಲ. ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಗಾಯಗೊಂಡವರು, ಆಸ್ತಿಪಾಸ್ತಿ ಹಾನಿಗೊಳಗಾದವರು ದೂರು ಕೊಡುವಂತೆ ಹೇಳಿದ್ದೇವೆ ಎಂದು ತಿಳಿಸಿದರು.
ಕೆಲವರನ್ನು ಈಗಾಗಲೇ ವಶಕ್ಕೆ ತೆಗೆದುಕೊಂಡಿದ್ದೇವೆ. ಎಷ್ಟು ಜನ ವಶಕ್ಕೆ, ಎಷ್ಟು ದೂರುಗಳು ದಾಖಲಾಗಿವೆ ಎಂಬ ಮಾಹಿತಿ ನಂತರ ನೀಡಲಾಗುತ್ತದೆ. ಕೆಲ ಸಾರ್ವಜನಿಕರು ಸಹಿತ ಪೊಲೀಸರಿಗೂ ಗಾಯಗಳಾಗಿವೆ. ಅವರನ್ನೆಲ್ಲ ಆಸ್ಪತ್ರೆಗೆ ದಾಖಲಿಸಲಾಗಿದೆ. ದುಷ್ಕರ್ಮಿಗಳ ಕೃತ್ಯವನ್ನು ವಿಡಿಯೋಗಳಲ್ಲಿ ಪರಿಶೀಲಿಸಲಾಗುತ್ತಿದೆ. ತಪ್ಪಿತಸ್ಥರ ಮೇಲೆ ಶಿಕ್ಷೆ ಆಗುವಂತೆ ಕ್ರಮಕೈಗೊಳ್ಳುತ್ತೇವೆ. ಕೆಲವೊಂದನ್ನ ಪೊಲೀಸರೇ ದೂರು ದಾಖಲಿಸಿಕೊಂಡಿದ್ದಾರೆ. ಕೆಲವೊಂದು ದೂರನ್ನ ಸಾರ್ವಜನಿಕರು ನೀಡಿದ್ದಾರೆ ಎಂದರು.
ಸುಳ್ಳು ಸುದ್ದಿ, ವದಂತಿಗಳನ್ನು ನಂಬಬೇಡಿ, ಶಿವಮೊಗ್ಗ ನಗರ ಶಾಂತವಾಗಿದೆ: ಪೊಲೀಸ್ ಇಲಾಖೆ
ರಾಗಿಗುಡ್ಡದಲ್ಲಿ ನಡೆದ ಘಟನೆ ಸಂಪೂರ್ಣ ನಿಯಂತ್ರಣದಲ್ಲಿದ್ದು, ಶಾಂತವಾಗಿದ್ದು ಪೋಲಿಸರು. Rapid ಆ್ಯಕ್ಷನ್ ಪೋರ್ಸ್ ತುಕಡಿಗಳನ್ನು ನಿಯೋಜಿಸಲಾಗಿದ್ದು, ಸಾರ್ವಜನಿಕರು ಯಾವುದೇ ಸುಳ್ಳುಸುದ್ದಿ, ವದಂತಿಗಳನ್ನು ನಂಬಬಾರದು, ನಗರ ಸಂಪೂರ್ಣ ಶಾಂತವಾಗಿದೆ ಎಂದು ಜಿಲ್ಲಾ ಪೋಲಿಸ್ ಪ್ರಕಟಣೆ ತಿಳಿಸಿದೆ.
ಶಾಸಕ ಚನ್ನಬಸಪ್ಪರ ಮಾತು:
ರಾಗಿಗುಡ್ಡದಲ್ಲಿ ಗಲಾಟೆ ಪ್ರಕರಣ ಕುರಿತಂತೆ ಎಸ್ಪಿಯವರೊಂದಿಗೆ ಮಾತನಾಡಿದ್ದೇನೆ. ರಾಗಿಗುಡ್ಡದಲ್ಲಿ ಸ್ಥಳಕ್ಕೆ ಭೇಟಿ ನೀಡಿದಾಗ ಮಾಧ್ಯಮಗಳಿಗೆ ಮಾತನಾಡಿದ ಅವರು ಮೆರವಣಿಗೆ ಹೋಗುವ ವೇಳೆ ಹಿಂದೆಗಡೆಯಿಂದ ಬಂದು ಒಂದು ಗುಂಪು ಈ ರೀತಿ ಮಾಡಿದೆ. ಕೆಲು ಜನರಿಗೆ ಹಾಗೂ ಇಬ್ಬರು ಪೊಲೀಸರಿಗೆ ಹೊಡೆತ ಬಿದ್ದಿದೆ ಎಂದು ತಿಳಿದುಬಂದಿದೆ ಎಂದು ಶಾಸಕ ಚನ್ನಬಸಪ್ಪ ಹೇಳಿದರು.
ಹಬ್ಬ ಶಾಂತಿಯುತವಾಗಿ ನಡೆದಿದೆ. ಪೊಲೀಸರ ಕ್ರಮ ಉತ್ತಮವಾಗಿದೆ. ಆದರೆ ಇಲ್ಲಿ ಕೆಎ 35, ಕೆಎ 17 ಮತ್ತು ಯುಪಿಯಿಂದ ವಾಹನಗಳು ಏಕೆ ಬಂದವು. ಅದನ್ನು ಪತ್ತೆ ಹಚ್ಚಬೇಕಿದೆ.
ಈ ರೀತಿಯ ವಾಹನಗಳನ್ನ ಹೊರಗೆ ಹೋಗದ ರೀತಿ ನೋಡಿಕೊಳ್ಳಬೇಕು. ಯಾರು ಹೊಡೆದ್ರು, ಯಾಕೆ ಹೊಡೆದ್ರು ಗೊತ್ತಾಗಬೇಕು. ಗಣಪತಿ ಮೆರವಣಿಗೆ, ಈದ್ ಮಿಲಾದ್ ಮೆರವಣಿಗೆ ಚನ್ನಾಗಿ ಆಗಿದೆ. ಮುಗಿದ ನಂತರ ಈ ರೀತಿ ನಡೆದಿದೆ ಎಂದರು.
ಅನೇಕ ಮನೆಗಳು, ವಾಹನಗಳು ಜಖಂ ಆಗಿದೆ. ಮನೆಯಲ್ಲಿದ್ದವರು ಭಯದ ವಾತಾವರಣ ಇದೆ. ಪೊಲೀಸ್ ಇಲಾಖೆ ಬಂದೋಬಸ್ತ್ ಮಾಡಿದೆ. ಹೊರಗಡೆಯಿಂದ ಬಂದವರು ಯಾರೋ ಈ ರೀತಿ ಮಾಡಿದ್ದಾರೆ ಎಂದು ಅನುಮಾನ ವ್ಯಕ್ತಪಡಿಸಿದರು.
ಸದ್ಯಕ್ಕೆ ಪರಿಸ್ಥಿತಿ ಶಾಂತಿಯುತವಾಗಿದೆ. ನಾಗರೀಕರು ಹೆದರುವ ಅವಶ್ಯಕತೆ ಇಲ್ಲ. ನಿಮಗೆ ಏನಾದರೂ ತೊಂದರೆ ಆಗಿದ್ದರೆ ನಮ್ಮ ಗಮನಕ್ಕೆ ತನ್ನಿ. ನಾವು ನಿಮ್ಮ ಜೊತೆ ಇದ್ದೇವೆ. ಮೂರು ವರ್ಷದಿಂದ ಶಾಂತವಾಗಿದ್ದ ನಗರದಲ್ಲಿ ಮತ್ತೆ ಇಂತಹ ಘಟನೆ ನಡೆಯಬಾರದಿತ್ತು ಎಂದರು.
ಕೆಲವರು ಮನೆಗೆ ನುಗ್ಗಿ ಹೊಡೆಯುತ್ತಾರೆ ಅಂದ್ರೆ ಇದು ಪೂರ್ವ ನಿಯೋಜಿತ ಕೃತ್ಯ ಅನಿಸುತ್ತದೆ. ಶಾಂತಿನಗರ ಶಾಂತಿಯುತವಾಗಿ ಇರುವಂತಹ ಕೆಲಸ ನಾವು ಮಾಡ್ತೇವೆ. ಎಲ್ಲರೂ ಧೈರ್ಯವಾಗಿರಿ ಯಾರು ಹೆದರಬೇಡಿ, ಯಾರೋ ಹೊರಗಡೆಯಿಂದ ಬಂದಿದ್ದಾರೆಂದರೆ ಅವರನ್ನು ಸುಮ್ಮನೆ ಬಿಡೊಲ್ಲ. ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳುತ್ತದೆ ಎಂದರು.