Site icon TUNGATARANGA

ಹಿರಿಯ ನಟ ದೊಡ್ಡಣ್ಣ ಜೊತೆಗೊಂದಿಷ್ಟು ನಿಮಿಷ/ ಮನದಾಳದ ಒಂದೆರಡು ಮಾತುಗಳು

ಕನ್ನಡ ಚಿತ್ರ ಜಗತ್ತಿನಲ್ಲಿ ತನ್ನದೇ ಮೂಲಕ ನಟನೆಯ ಮೂಲಕ ಕನ್ನಡ ಜಗತ್ತಿನ ಮನೆ ಮಾತಾಗಿರುವ ಹಿರಿಯ ಚಲನಚಿತ್ರ ನಟ ದೊಡ್ಡಣ್ಣ ಅವರ ಸರಳತೆ ಮೃದು ಸ್ವಭಾವ ಎಂತಹವರಿಗೂ ಇಷ್ಟವಾಗುತ್ತದೆಯಲ್ಲವೇ?
ಈಗಲೂ ಪ್ರತಿ ತಿಂಗಳ ಹುಣ್ಣಿಮೆಯ ದಿನ ಶಿವಮೊಗ್ಗದ ಅವಧೂತರ ಬಳಿ ಆಗಮಿಸುವ ದೊಡ್ಡಣ್ಣ ನಟನೆಯ ಜೊತೆಗೆ ತಮಗೆ ಬದುಕು ಕಟ್ಟಿ ಕೊಟ್ಟಿದ್ದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಯ ಬಗ್ಗೆ ಮಾತೃ ಹೃದಯ ಹೊಂದಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ನೀಡಿದ ಜವಾಬ್ದಾರಿಯ ಪಾತ್ರಗಳನ್ನು ಅಚ್ಚುಕಟ್ಟಾಗಿ ಮುಂದಿಡುತ್ತಿದ್ದ ದೊಡ್ಡಣ್ಣ ಹಾಸ್ಯ, ಖಳನಾಯಕ, ಹಾಗೆಯೇ ಮನೆ ಯಜಮಾನ ಪಾತ್ರದಲ್ಲಿ ಸಾಕಷ್ಟು ಪ್ರಭಾವಿ ನಟನಾಗಿ ಗುರುತಿಸಿಕೊಂಡಿದ್ದಾರೆ.


ಅವರ ಸಾಧನೆಯ ಹಾದಿ ಹಿಡಿದು ಹೇಳಲು ಒಂದಿಷ್ಟು ಪದಗಳು ಅಥವಾ ಒಂದಿಷ್ಟು ಪುಟಗಳು ಸಾಕಾಗುವುದಿಲ್ಲ. ಬದುಕಿನುದ್ದಕ್ಕೂ ಕಟ್ಟಿಕೊಂಡ ಕರ್ತವ್ಯದ ಜವಾಬ್ದಾರಿಯ ಜೊತೆ ನಟನೆಯ ಗೀಳಿನ ನಡುವೆ ರಂಗಭೂಮಿಯ ಪ್ರೀತಿ ಹಿರಿಯರಾದ ಈಗಲೂ ನವ ಯುವಕರಂತೆ ನಟನೆಯಲ್ಲಿ ತಮ್ಮತನವನ್ನೇ ಬಿಂಬಿಸುವ ಎಲ್ಲರ ಜನಮನ ಸೆಳೆಯುವ ಚಿತ್ರನಟ ದೊಡ್ಡಣ್ಣ “ತುಂಗಾತರಂಗ” ಅಂಗಳದೊಳಗೆ ಸಿಕ್ಕ ಕೆಲವೇ ನಿಮಿಷದಲ್ಲಿ ಮಾತನಾಡಿದಿಷ್ಟು..,


1968 ರಿಂದ 88 ರವರೆಗೆ ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿರುವ ಕಬ್ಬಿಣ ಕಾರ್ಖಾನೆಯಲ್ಲಿ ಕೆಲಸ ಮಾಡಿದ್ದಾರೆ. ಅಲ್ಲಿನ ಎಲ್ಲಾ ವಿಭಾಗಗಳಲ್ಲಿ ನುರಿತ ತಂತ್ರಜ್ಞರಂತೆ ಕೆಲಸ ಮಾಡಿರುವ ದೊಡ್ಡಣ್ಣ ಮಾತಿನ ನಡುವೆ ಅಲ್ಲಿ ಕಸಗುಡಿಸಿದ್ದೇನೆ ಚಹಾ ಕೊಟ್ಟಿದ್ದೇನೆ. ಅದು ನನ್ನ ತಾಯಿ ಇದ್ದಂತೆ ಎಂದು ಅಷ್ಟೇ ಪ್ರೀತಿಯಾಗಿ ಹೇಳುತ್ತಾರೆ.
ಹಿರಿಯ ಚಿತ್ರನಟರಾದರೂ ಸಹ ಒಂದಿಷ್ಟು ಅಹಂಕಾರವಿಲ್ಲದೇ ಎಲ್ಲರೊಂದಿಗೆ ನಗುನಗುತ್ತಾ ಮಾತನಾಡುವ ದೊಡ್ಡಣ್ಣ ಅಂದಿನ ತಮ್ಮ ಭದ್ರಾವತಿಯ ಹಳೆಯ ಗೆಳೆಯರ ಪ್ರೀತಿ-ವಿಶ್ವಾಸದೊಂದಿಗೆ ಈಗಲೂ ಸಮಯ ವಿನಿಯೋಗಿಸುತ್ತಾ ತಮ್ಮನ್ನು ತಾವು ತೊಡಗಿಸಿಕೊಂಡ ಬಗ್ಗೆ ಹರುಷ ವ್ಯಕ್ತಪಡಿಸುತ್ತಾರೆ.
ಈ ಕಾರ್ಖಾನೆಯ ಕೆಲಸ ನಾನು ನಿಜಕ್ಕೂ ಮರೆಯದಂತ ದಿನಗಳವು. ಅಂದು ಸುಮಾರು 20 ಸಾವಿರದಷ್ಟು ಕಾರ್ಮಿಕರು ಕೆಲಸ ಮಾಡುತ್ತಿದ್ದೆವು ಬೆಳಿಗ್ಗೆ ಸಂಜೆ ಹಾಗೂ ರಾತ್ರಿಯ ಮೂರು ಶಿಫ್ಟ್ಗಳಲ್ಲಿ ಕೆಲಸ ಮಾಡುವ ಭಾಗ್ಯ ನಮ್ಮದಾಗಿತ್ತು ಎಂದೇ ಎಂದು ಹೇಳುವ ದೊಡ್ಡಣ್ಣ ಚಲನಚಿತ್ರದ ರಂಗದ ಮೂಲಕ ಬದುಕು ಕಟ್ಟಿಕೊಳ್ಳುವ ಹಂತದಲ್ಲಿ ಬೆಳೆದಾಗ ಇದರಲ್ಲಿಯೂ ನಾನು ಬದುಕು ರೂಪಿಸಿಕೊಳ್ಳಬಹುದು ಎಂಬ ದೃಢ ನಿರ್ಧಾರ ಪಕ್ವವಾದ ನಂತರ ಚಿತ್ರರಂಗಕ್ಕೆ ಬಂದದ್ದು ಎನ್ನುತ್ತಾರೆ.


ಇತ್ತೀಚೆಗೆ ಚಿತ್ರರಂಗದ ಜೊತೆ ಬಿಡುವಿಲ್ಲದ ಕೆಲಸದ ನಡುವೆ ಕಿರು ಚಿತ್ರಗಳಲ್ಲೂ ಅದರಲ್ಲೂ ಕಲರ್ಸ್ ಕನ್ನಡದಲ್ಲಿ ಬರುವ ಕೆಂಡಸಂಪಿಗೆ ಬಗ್ಗೆ ಅತ್ಯಂತ ಪ್ರೀತಿಯಿಂದ ಮಾತನಾಡುತ್ತಾರೆ. ನಿಮಗೆ ಆ ಪಾತ್ರದಲ್ಲಿನ ಮರೆವಿನ ಕಾಯಿಲೆ ಇದೆ ಎಂಬ ಪ್ರಶ್ನೆಗೆ ಹೌದು ಆ ಕಿರುಚಿತ್ರ ನಟನೆಯ ನಡುವೆ ಸಾಕಷ್ಟು ಬಾರಿ ಮೊಬೈಲ್ ಎಲ್ಲಿಟ್ಟಿದ್ದೇನೆ ಎಂಬುದೇ ಮರೆತು ಹೋಗುತ್ತದೆ ಎಂದು ನಗೆಯಾಡುತ್ತಾರೆ.
ಕೆಂಡಸಂಪಿಗೆಯಲ್ಲಿ ದೊಡ್ಡಣ್ಣನ ಪಾತ್ರದಲ್ಲಿ ಮನೆ ಯಜಮಾನ ಹೇಗಿರಬೇಕು ಎಂಬುದನ್ನು ನೋಡಬಹುದು. ಕುಟುಂಬ ಉಳಿಸುವ ಶಕ್ತಿ, ತಗೆದುಕೊಳ್ಳುವ ನಿರ್ಧಾರ, ದೃಢತೆಯ ಪಾತ್ರವನ್ನು ಅತ್ಯಂತ ಯಶಸ್ವಿಯಾಗಿ ಜನರ ಮುಂದೆ ನೀಡಿರುವುದು ಮತ್ತೊಂದು ವಿಶೇಷ.
ಈಗ ಕಿರು ಚಿತ್ರದ ಜೊತೆ ಮತ್ತೊಂದೆರಡು ಸಿನಿಮಾಗಳ ಪಾತ್ರದ ಜವಾಬ್ದಾರಿಯನ್ನು ಹೊತ್ತಿರುವ ಬಗ್ಗೆ ಹೆಮ್ಮೆಯಿಂದಲೇ ಹೇಳಿಕೊಳ್ಳುತ್ತಾರೆ. ಸಾಕಷ್ಟು ಕೆಲಸಗಳಿದ್ದರೆ ನಾವು ಆರಾಮಾಗಿ ಇರಬಹುದು ಎಂಬುದು ಅವರ ಮಾತು. ಈ ನಡುವೆ ಭದ್ರಾವತಿ ವಿಐ ಎಸ್ ಎಲ್ ಕಾರ್ಖಾನೆಯನ್ನು ತಾಯಿಯಂತೆ ಪ್ರೀತಿಸುವ ದೊಡ್ಡಣ್ಣ ತಮ್ಮ ಸ್ನೇಹಿತರ ಜೊತೆಗೂಡಿ ಕಾರ್ಖಾನೆಗೆ 100 ವರ್ಷ ತುಂಬಿದ ಸಡಗರದಲ್ಲಿ ಶತಮಾನೋತ್ಸವವನ್ನು ಆಚರಿಸಲು ಮುಂದಾಗಿದ್ದಾರೆ. ಈ ವಯಸ್ಸಿನಲ್ಲೂ ಸದಾ ಚಟುವಟಿಕೆಯಲ್ಲಿರುವ ದೊಡ್ಡಣ್ಣ ಕೇವಲ ನಟನಾಗಿ ಗುರುತಿಸಿಕೊಳ್ಳದೆ ನಮ್ಮ ನಡುವಿನ ಪ್ರೀತಿಯ ದೊಡ್ಡಣ್ಣನಾಗಿಯೇ ಕಾಣಸಿಗುತ್ತಾರೆ.

Exit mobile version