Site icon TUNGATARANGA

ಅಪಘಾತದಲ್ಲಿ ಮೃತಪಟ್ಟ ತಾಯಿ ನಾಯಿ: ಅನಾಥ ಮರಿಗಳನ್ನು ಪೋಷಿಸುತ್ತಿರುವ ಪಶು ಇಲಾಖೆಯ ಪರಿವೀಕ್ಷಕ ವಿ.ರಂಗಪ್ಪ


ಶಿವಮೊಗ್ಗ: ಮರಿಗಳಿಗೆ ಜನ್ಮವಿತ್ತು ಒಂದು ದಿನದ ನಂತರ ಆಹಾರ ಅರಸಿಕೊಂಡು ಹೊರಟಿದ್ದ ಬೀದಿ ನಾಯಿಯೊಂದು ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದರಿಂದ ಇದರ ಮರಿಗಳು ಅನಾಥವಾಗಿದ್ದವು. ಈ ಮರಿಗಳಿಗೆ ಪಶು ಆಸ್ಪತ್ರೆಯ ಆವರಣದಲ್ಲಿ ಆಶ್ರಯ ನೀಡಿ ಸಿರಿಂಜಿನ ಮೂಲಕ ಅವುಗಳಿಗೆ ಹಾಲುಣಿಸಿ ಸಲಹುತ್ತಿರುವ ಪಶು ಸಂಗೋಪನಾ ಇಲಾಖೆಯ ಅಧಿಕಾರಿಯೊಬ್ಬರ ಮಾನವೀಯತೆ ಹಾಗೂ ಸಾಮಾಜಿಕ ಹೋರಾಟಗಾರ ಕೃಷ್ಣಪ್ಪ ಅವರ ಕಾಳಜಿ, ಪ್ರಾಣಿ ಪ್ರೇಮಕ್ಕೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.


ರಿಪ್ಪನ್‌ಪೇಟೆಯ ಪಶು ಆಸ್ಪತ್ರೆಯಲ್ಲಿ ಹಿರಿಯ ಪಶು ವೈದ್ಯಕೀಯ ಪರಿವೀಕ್ಷಕರಾಗಿ ಕಾರ್ಯನಿರ್ವಹಿಸುತ್ತಿರುವ ವಿ.ರಂಗಪ್ಪ ಮಾನವೀಯತೆ ಮೆರೆಯುತ್ತಿರುವ ವ್ಯಕ್ತಿ. ಕಳೆದ ವಾರ ಬೀದಿನಾಯಿಯೊಂದು ಪುಟ್ಟ ಮರಿಗಳನ್ನು ಅಗಲಿ ಅಪಘಾತದಲ್ಲಿ ಮೃತಪಟ್ಟಿರುವ ಸಂಗತಿ ಸಾಮಾಜಿಕ ಹೋರಾಟಗಾರ ಕೃಷ್ಣಪ್ಪ ಅವರ ಗಮನಕ್ಕೆ ಬಂದಿತು.


ಕೂಡಲೇ ಸ್ಥಳಕ್ಕೆ ತೆರಳಿದ ಅವರು ನಾಯಿ ಸತ್ತ ಜಾಗದ ಸುತ್ತಮುತ್ತ ಮರಿಗಳಿಗಾಗಿ ಸಾಕಷ್ಟು ಹುಡುಕಾಡಿದರು. ಪ್ರಾರಂಭದಲ್ಲಿ ಸುಲಭವಾಗಿ ಮರಿಗಳ ಸುಳಿವು ದೊರೆಯಲಿಲ್ಲವಾದರೂ ಅಂತಿಮವಾಗಿ ಪೊದೆಯೊಂದರಲ್ಲಿ ಇದ್ದ ಪುಟ್ಟ ಮರಿಗಳನ್ನು ಕೃಷ್ಣಪ್ಪ ಪತ್ತೆ ಮಾಡಿದರು.
ಹಸಿವಿನಿಂದ ಕುಯ್‌ಗುಡುತ್ತಿದ್ದ ನಾಯಿ ಮರಿಗಳು ಅನ್ಯಾಯವಾಗಿ ಜೀವ ಕಳೆದುಕೊಳ್ಳುವ ಪರಿಸ್ಥಿತಿ ಸೃಷ್ಟಿಯಾಗಿತ್ತು. ಆಗ ಕೃಷ್ಣಪ್ಪ ಈ ವಿಷಯವನ್ನು ಹಿರಿಯ ಪಶು ವೈದ್ಯಕೀಯ ಪರಿವೀಕ್ಷಕ ವಿ.ರಂಗಪ್ಪನವರ ಗಮನಕ್ಕೆ ತಂದರು. ಇದಕ್ಕೆ ಕೂಡಲೇ ಸ್ಪಂದಿಸಿದ ಅವರು ಮರಿಗಳನ್ನು ತಮ್ಮ ಆಸ್ಪತ್ರೆಗೆ ತರುವಂತೆ ಕೃಷ್ಣಪ್ಪನವರಿಗೆ ತಿಳಿಸಿದರು.


ಮರಿಗಳನ್ನು ತಂದ ನಂತರ ಅಂದಿನಿಂದ ಇಂದಿನವರೆಗೂ ರಂಗಪ್ಪನವರು ಸಿರಿಂಜಿನ ಮೂಲಕ ಹಾಲುಣಿಸುತ್ತಾ ಅವುಗಳ ಜೀವ ರಕ್ಷಿಸಿದ್ದಾರೆ. ಅಲ್ಲದೆ ರಟ್ಟಿನ ಪೆಟ್ಟಿಗೆಯಿಂದ ಗೂಡು ಮಾಡಿಟ್ಟು ಪೋಷಿಸುತ್ತಿದ್ದಾರೆ. ೪ ಹೆಣ್ಣು, ೧ ಗಂಡು ಸೇರಿದಂತೆ ಒಟ್ಟು ೫ ಮರಿಗಳು ಲವಲವಿಕೆಯಿಂದ ಇವೆ. ಇವುಗಳಲ್ಲಿ ೩ ಮರಿಗಳು ಇಂದು ಮಂಗಳವಾರ ಕಣ್ಣು ಬಿಟ್ಟಿವೆ. ಎಲ್ಲಾ ಮರಿಗಳು ಆರೋಗ್ಯಯುತವಾಗಿದ್ದು ಸ್ವಂತ ಶಕ್ತಿಯ ಮೇಲೆ ಆಹಾರ ಪಡೆಯುವ ಹಂತದವರೆಗೂ ಈ ಮರಿಗಳನ್ನು ಪೋಷಿಸಲು ರಂಗಪ್ಪ ಮತ್ತು ಕೃಷ್ಣಪ್ಪ ಸನ್ನದ್ಧರಾಗಿದ್ದಾರೆ. ಅವುಗಳ ರಕ್ಷಣೆಯ ಹೊಣೆ ಹೊತ್ತಿದ್ದಾರೆ.
ಮೂಲತಃ ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕಿನ ಬೆಟ್ಟ ಕಡೂರಿನವರಾಗಿರುವ ಹಿರಿಯ ಪಶು ವೈದ್ಯಕೀಯ ಪರಿವೀಕ್ಷಕ ವಿ.ರಂಗಪ್ಪ ಕಳೆದ ೧೧ ವರ್ಷಗಳಿಂದ ರಿಪ್ಪನ್‌ಪೇಟೆಯ ಪಶು ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದು ಉತ್ತಮ ಸೇವೆಯ ಮೂಲಕ ಜನ ಮನ್ನಣೆಗಳಿಸಿದ್ದಾರೆ. ಇವರು ಈ ಹಿಂದೆ ಹುಂಚ, ಕೆಂಚನಾಲ, ನೆವಟೂರಿನ ಪಶು ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸಿದ್ದರು.


ಕೆಲಸದ ಒತ್ತಡದ ನಡುವೆಯೂ ನಾಯಿ ಮರಿಗಳ ಆರೈಕೆಯಲ್ಲಿ ತೊಡಗಿರುವ ರಂಗಪ್ಪನವರ ಕಾರ್ಯಕ್ಕೆ ಮತ್ತು ಇವರಿಗೆ ಸಹಕರಿಸುತ್ತಿರುವ ಸಾಮಾಜಿಕ ಹೋರಾಟಗಾರ ಕೃಷ್ಣಪ್ಪನವರ ಕಾಳಜಿ, ಕಳಕಳಿಗೆ ಜನರಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದ್ದು, ಇವರು ನಾಯಿ ಮರಿ ಪೋಷಿಸುತ್ತಿರುವ ವಿಡಿಯೋ ಸಾಕಷ್ಟು ವೈರಲ್ ಆಗಿದೆ.

Exit mobile version