Site icon TUNGATARANGA

ಶಿವಮೊಗ್ಗದಲ್ಲಿ ಕಾರ್ಮಿಕ ಸಂಘಟನೆಗಳಿಂದ ಮುಷ್ಕರ

ಶಿವಮೊಗ್ಗ: ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ಇಂದು ಕರೆ ನೀಡಿದ್ದ ಅಖಿಲ ಭಾರತ ಸಾರ್ವತ್ರಿಕ ಮುಷ್ಕರಕ್ಕೆ ನಗರದಲ್ಲಿಯೂ ವ್ಯಾಪಕ ಬೆಂಬಲ ವ್ಯಕ್ತವಾಗಿದ್ದು, ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಮಹಾವೀರ ವೃತ್ತದಿಂದ ಜಿಲ್ಲಾಧಿಕಾರಿಗಳ ಕಛೇರಿಯವರೆಗೆ ಬೃಹತ್ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳ ಮೂಲಕ ಪ್ರಧಾನ ಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ರೈತ ವಿರೋಧಿ ಕಾನೂನುಗಳನ್ನು ವಾಪಾಸ್ ಪಡೆಯಬೇಕು, ಎಲ್ಲ ಸಂಸದೀಯ ಮತ್ತು ಸಾಂವಿಧಾನಿಕ ಕಾರ್ಯವಿಧಾನಗಳನ್ನುಉಲ್ಲಂಘಿಸಿ ಶೇ.೭೦ರಷ್ಟು ಗ್ರಾಮೀಣ ಜನತೆ ಅವಲಂಬಿಸಿದ ಕೃಷಿಯನ್ನು ಕಾರ್ಪೋರೇಟ್ ಕಂಪೆನಿಗಳ ಪರವಾಗಿ ಮಾಡಲು ಎಲ್ಲ ಸುಧಾರಣಾ ಕೃಷಿ, ಗುತ್ತಿಗೆ ಬೀಜ, ಅರಣ್ಯ ಹಕ್ಕು ಕಾಯ್ದೆಗೆ ತಿದ್ದುಪಡಿ ಮತ್ತು ಪ್ರಾದೇಶಿಕಸಮಗ್ರ ಆರ್ಥಿಕ ಸಹಭಾಗಿತ್ವಕ್ಕೆ ಕೇಂದ್ರ ಸರ್ಕಾರ ಸಹಿ ಹಾಕಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕೊರೋನಾಗಿಂತ ಮೊದಲೇ ಇದ್ದ ಆರ್ಥಿಕ ಹಿಂಜರಿತ, ಕೊರೋನಾದಿಂದ ಉಂಟಾದ ಸಂಕಷ್ಟ ಉದ್ಯೋಗಗಳ ಮೇಲೆ ಪರಿಣಾಮ ಬೀರಿ ೧೫ ಕೋಟಿ ಜನ ಬದುಕು ಕಳೆದುಕೊಂಡು ಬೀದಿಪಾಲಾಗಿದ್ದಾರೆ ಎಂದು ದೂರಿದರು.
ಭಾರತದಲ್ಲಿ ಬಂಡವಾಳ ಕೇಂದ್ರೀಕರಣದ ದೊಡ್ಡ ಆರ್ಥಿಕ ಅಸಮಾನತೆಗಳು ಹೆಚ್ಚಿವೆ. ಕೊರೋನಾ ಸಮಯದಲ್ಲಿ ಅಸಂಘಟಿತ ಕ್ಷೇತ್ರದ ಕಾರ್ಮಿಕರು ಸೇವಾವಲಯದಲ್ಲಿ ದುಡಿಯುವ ಸ್ಕೀಂ ನೌಕರರು, ಉತ್ಪಾದನೆ ವಲಯದ ಕಾರ್ಮಿಕರು, ಸ್ವ ಉದ್ಯೋಗಸ್ಥರು, ಸಾರಿಗೆ ವಲಯದಲ್ಲಿ ದುಡಿಯುವವರು, ಖಾಯಂ ಅಲ್ಲದ ವಿಭಾಗಗಳಲ್ಲಿ ದುಡಿಯುವವರು, ಕೃಷಿ ಕೂಲಿಕಾರರು, ಬಡ ರೈತರು ಬದುಕು ಕಳೆದುಕೊಂಡಿದ್ದಾರೆ ಎಂದು ದೂರಿದರು.
ಜಾಗತಿಕ ಹಸಿವಿನ ಸೂಚ್ಯಂಕದಲ್ಲಿ ಭಾರತ ೧೦೭ ದೇಶಗಳ ಪೈಕಿ ೯೪ನೇ ಸ್ಥಾನದಲ್ಲಿದೆ. ಲಕ್ಷಗಟ್ಟಲೆ ಜನ ಹಸಿವಿನಿಂದ ಸಾಯುತ್ತಿರುವುದಷ್ಟೇ ಅಲ್ಲದೇ ಶ್ರಮಶಕ್ತಿಗೆ ಅಪಾಯವಾಗುತ್ತಿದೆ. ಕೇಂದ್ರೀಯ ಗೋದಾಮುಗಳಲ್ಲಿ ಕೊಳೆಯುತ್ತಿರುವ ೭೭ ಮಿಲಿಯನ್ ಟನ್ ಆಹಾರ ಧಾನ್ಯವನ್ನು ಅಗತ್ಯ ಇರುವವರಿಗೆ ಯಾವುದೇ ಷರತ್ತು ಇಲ್ಲದೇ ಹಂಚಿಕೆ ಮಾಡಬೇಕು. ಜನರನ್ನು ಹಸಿವಿನಿಂದ ಮುಕ್ತಗೊಳಿಸಬೇಕು ಎಂದು ಒತ್ತಾಯಿಸಿದರು.
ಸಾರ್ವಜನಿಕ ವಲಯದ ಸೇವಾ ಸಂಸ್ಥೆಗಳ ಖಾಸಗೀಕರಣ ನಿಲ್ಲಿಸಬೇಕು. ಲಾಭದಾಯಕವಾಗಿ ನಡೆಯುವ ಸಂಸ್ಥೆಗಳನ್ನು ಬಂಡವಾಳಗಾರರಿಗೆ ಧಾರೆಎರೆಯಲಾಗುತ್ತಿದೆ. ೮೦ ಲಕ್ಷ ಕೋಟಿ ಠೇವಣಿದಾರರು ಇರುವ ರಾಷ್ಟ್ರೀಕೃತ ಬ್ಯಾಂಕುಗಳನ್ನು ೧೦ ಲಕ್ಷ ಕೋಟಿ ವಸೂಲಾಗದ ಸಾಲದ ಪ್ರಮಾಣವನ್ನುಮನ್ನಾ ಮಾಡುವ ತಂತ್ರಗಾರಿಕೆಯಿಂದ ೩೨ ರಾಷ್ಟ್ರೀಕೃತ ಬ್ಯಾಂಕುಗಳನ್ನು ಸೇರಿಸಿ ೧೨ ಬ್ಯಾಂಕುಗಳಾಗಿ ಪರಿವರ್ತಿಸಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಜಗತ್ತಿನಲ್ಲಿಯೇ ಅತಿದೊಡ್ಡ ಸಂಪರ್ಕ ಜಾಲ ಹೊಂದಿರುವ ದೇಶದ ಪ್ರತಿಷ್ಟಿತ ೧೦೯ ರೈಲು ನಿಲ್ದಾಣಗಳನ್ನು ಖಾಸಗೀಕರಿಸಿ, ೧೫೭ ಖಾಸಗಿ ರೈಲು ಬಿಡುವ ನಿರ್ಧಾರದಿಂದ ರೈಲ್ವೆ ಪ್ರಯಾಣಿಕರ ಟಿಕೆಟ್‌ಗೆ ಸಿಗುತ್ತಿದ್ದ ಸಬ್ಸಿಡಿ ರದ್ದಾಗಿ ಉದ್ಯೋಗ ನಷ್ಟವಾಗುವ ಅಪಾಯ ಎದುರಾಗಿದೆ. ವಿಮಾನ ನಿಲ್ದಾಣ, ಬಂದರು, ಹಡಗು ಕಟ್ಟೆ ಲಾಭಗಳಿಸುವ ಸರ್ಕಾರಿ ಸಂಸ್ಥೆ, ಕಲ್ಲಿದ್ದಲು ಗಣಿಗಳು, ಬಿಪಿಸಿಎಲ್ ರಕ್ಷಣಾ ವಲಯದ ೪೧ ಫ್ಯಾಕ್ಟರಿಗಳು, ಬಿಎಸ್‌ಎನ್‌ಎಲ್, ಏರ್ ಇಂಡಿಯಾ ಸೇರಿದಂತೆ ೫೫ ಪಿಎಸ್‌ಯುಗಳನ್ನು ಖಾಸಗೀಕರಣದ ಹುನ್ನಾರಕ್ಕೆ ಒಡ್ಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಾರ್ವಜನಿಕ ವಲಯದ ಸೇವಾ ಸಂಸ್ಥೆಗಳ ಖಾಸಗೀಕರಣ ನಿಲ್ಲಿಸಬೇಕು. ಅಗತ್ಯವಿರುವವ ರಿಗೆ ತಿಂಗಳಿಗೆ ೧೦ ಕೆಜಿ ಉಚಿತ ಪಡಿತರ ನೀಡಬೇಕು, ಆದಾಯತೆರಿಗೆ ರಹಿತ ಕುಟುಂಬಗಳಿಗೆ ೭೫೦೦ ರೂ. ಪಾವತಿಸಬೇಕು, ರೈತ ವಿರೋಧಿ ಕಾನೂನುಗಳನ್ನು ವಾಪಾಸ್ ಪಡೆಯಬೇಕು, ಕಾರ್ಮಿಕರನ್ನು ಗುಲಾಮರನ್ನಾಗಿಸುವ ಕಾನೂನುಗಳನ್ನು ಕೈಬಿಡಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಲಾಯಿತು.
ಕಾರ್ಮಿಕ ಸಂಹಿತೆಗಳ ವಾಪಸ್ಸಾತಿ, ರೈತ ವಿರೋಧಿ ಎಪಿಎಂಸಿ ಕಾಯ್ದೆ,ಭೂಸುಧಾರಣೆ ಕಾಯ್ದೆ, ಕೃಷಿ ಸಂಬಂಧಿತ ಕಾನೂನು ತಿದ್ದುಪಡಿ ಕೈಬಿಡಬೇಕು, ಸಾರ್ವಜನಿಕ ಉದ್ದಿಮೆಗಳ ಖಾಸಗೀಕರಣ ಕೈಬಿಡಬೇಕು ಎಂದು ಒತ್ತಾಯಿಸಿದರು.
ಐಎನ್‌ಟಿಯುಸಿ, ಸಿಐಟಿಯು , ಬ್ಯಾಂಕ್ ನೌಕರರ ಸಂಘ, ಬಿಸಿಯೂಟ ನೌಕರರ ಸಂಘ, ರಾಜ್ಯ ರೈತ ಸಂಘ, ಔಷಧ ಮಾರಾಟ ಪ್ರತಿನಿಧಿಗಳ ಸಂಘ, ಗ್ರಾ.ಪಂ.ನೌಕರರ ಸಂಘ, ಕೆಎಸ್‌ಆರ್‌ಟಿಸಿ ನೌಕರರ ಸಂಘ, ವಿಐಎಸ್‌ಎಲ್ ಗುತ್ತಿಗೆ ನೌಕರರ ಸಂಘ, ಡಿಎಸ್‌ಎಸ್ ಸೇರಿದಂತೆ ಅನೇಕ ಸಂಘಟನೆಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದವು.
ಪ್ರತಿಭಟನೆಯಲ್ಲಿ ವಿವಿಧ ಸಂಘಟನೆಗಳ ಪ್ರಮುಖರಾದ ಹೆಚ್.ಆರ್.ಬಸವರಾಜಪ್ಪ, ಎಂ.ನಾರಾಯಣ್, ಕೆ.ಎಲ್.ಅಶೋಕ್, ಜಾರ್ಜ್‌ಸಾಲ್ಡಾನಾ, ತೀ.ನಾ.ಶ್ರೀನಿವಾಸ್, ಅನಿಲ್ ಕುಮಾರ್, ಹನುಮಮ್ಮ, ಅಕ್ಕಮ್ಮ, ಪ್ರಶಾಂತ್, ಅಶೋಕ್, ರಾಜು, ಜನಾರ್ಧನ್, ತುಳಸಿ, ಶಿವಶಂಕರ್, ಸುರೇಶ್, ಚಂದ್ರಪ್ಪ, ಹಾಲೇಶಪ್ಪ ಸೇರಿದಂತೆ ಹಲವರಿದ್ದರು.

Exit mobile version