Site icon TUNGATARANGA

ತಂತ್ರಜ್ಞಾನದ ಮೂಲ ನೀತಿ ತತ್ವಗಳನ್ನು ಅರಿತು |ಸಮಾಜದ ಉನ್ನತಿಗಾಗಿ ತಂತ್ರಜ್ಞಾನಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಿ : ಎಸ್.ಎನ್.ನಾಗರಾಜ

ಶಿವಮೊಗ್ಗ : ತಂತ್ರಜ್ಞಾನದ ಮೂಲ ನೀತಿ ತತ್ವಗಳನ್ನು ಅರಿತು ಸಮಾಜದ ಉನ್ನತಿಗಾಗಿ ತಂತ್ರಜ್ಞಾನಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಿ ಎಂದು ರಾಷ್ಟ್ರೀಯ ಶಿಕ್ಷಣ ಸಮಿತಿ ಕಾರ್ಯದರ್ಶಿ ಎಸ್.ಎನ್.ನಾಗರಾಜ ಹೇಳಿದರು.

ನಗರದ ಜೆ.ಎನ್.ಎನ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಪ್ಲೇಸ್ಮೆಂಟ್ ಸೆಲ್‌ ವತಿಯಿಂದ ಹನಿವೆಲ್ ಕಂಪನಿ‌ ಮತ್ತು ಭಾರತ ಸರ್ಕಾರದ ಐಸಿಟಿ ಅಕಾಡೆಮಿಯ ಸಹಯೋಗದಲ್ಲಿ ನೂತನವಾಗಿ ಸ್ಥಾಪಿಸಿರುವ ಸೆಂಟರ್ ಫಾರ್ ಎಕ್ಸಲೆನ್ಸ್ ಪ್ರಾಂಗಣ ಹಾಗೂ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ್ದ ಸೈಬರ್ ಸೆಕ್ಯುರಿಟಿ ಕುರಿತ ಕಾರ್ಯಾಗಾರ ಉದ್ದೇಶಿಸಿ ಮಾತನಾಡಿದರು.

ವಿಜ್ಞಾನಿ ಐನ್ ಸ್ಟೀನ್ ದ್ರವ್ಯರಾಶಿ ಮತ್ತು ಶಕ್ತಿ ಕುರಿತ‌ ಸಮಾನತೆಯನ್ನು ಕಂಡು ಹಿಡಿದಾಗ ಇಡೀ ವಿಶ್ವಕ್ಕೆ ಅಚ್ಚಳಿಯದ ಅನ್ವೇಷಣೆಯಾಗಿ ರೂಪಗೊಂಡಿತ್ತು. ಅದೇ ಸಮಾನತೆಯ ಸಮೀಕರಣವನ್ನು ಬಾಂಬ್ ತಯಾರಿಯಂತಹ ದುಶ್ಕೃತ್ಯಕ್ಕೆ ಬಳಸಿದ್ದು ಆತಂಕಕಾರಿ. ನಮ್ಮ ನಡುವೆ ನಡೆಯುವ ತಾಂತ್ರಿಕ ಅನ್ವೇಷಣೆಗಳನ್ನು ಸಮಾಜದ ಅಭಿವೃದ್ಧಿಗಾಗಿ ಮಾತ್ರ ಬಳಸುವಂತೆ ಎಚ್ಚರ ವಹಿಸಬೇಕಿದೆ. 

ಸೈಬರ್ ಕ್ಷೇತ್ರ ಸದಾ ಒಂದಿಲ್ಲೊಂದು ಭದ್ರತಾ ಸವಾಲುಗಳನ್ನು ಎದುರಿಸುತ್ತಲೆ ಬರುತ್ತಿದೆ. ಯುವ ಸಮೂಹ ಅಂತಹ ಸವಾಲುಗಳನ್ನು ಪರಿಹರಿಸುವತ್ತ ಯೋಜಿಸಬೇಕಿದೆ. ತಾಂತ್ರಿಕ ಜ್ಞಾನದ ಜೊತೆಗೆ ಭಾರತ ಸರ್ಕಾರ ನೂತನವಾಗಿ ಅನುಷ್ಠಾನಗೊಳಿಸಿರುವ ಸೈಬರ್ ಭದ್ರತಾ ನಿಯಮಾವಳಿಗಳನ್ನು, ಕಾನೂನಿತ್ಮಾಕ ವಿಚಾರಗಳನ್ನು ಅರಿಯಿರಿ ಎಂದು ಕಿವಿಮಾತು ಹೇಳಿದರು.

ಐಸಿಟಿ ಅಕಾಡೆಮಿಯ ಕರ್ನಾಟಕ ರಾಜ್ಯ ಮುಖ್ಯಸ್ಥ ವಿಷ್ಣುಪ್ರಸಾದ್ ಮಾತನಾಡಿ, ಸೈಬರ್ ಸೆಕ್ಯುರಿಟಿ ವಿಷಯ ಸಂಬಂಧಿತ ಅಧ್ಯಯನದಿಂದ ಅನೇಕ ಉದ್ಯೋಗವಕಾಶ ಪಡೆಯಲು ಸಾಧ್ಯವಾಗಲಿದೆ. ಐಟಿ ಕ್ಷೇತ್ರದಲ್ಲಿನ ಉದ್ಯೋಗವಕಾಶಗಳಲ್ಳಿ ಏರಿಳಿತಗಳು ‌ಸಹಜ. ನಿರ್ದಿಷ್ಟ ತಾಂತ್ರಿಕ ವಿಷಯಾನುಸಾರ ಅಧ್ಯಯನ, ಉತ್ತಮ ಕೌಶಲ್ಯತೆ ಮತ್ತು ಜ್ಞಾನ ಹೊಂದಿದವರು ಎಂದಿಗೂ‌ ಇಂತಹ ಏರಿಳಿತಗಳ ಬಗ್ಗೆ ಆತಂಕ ಪಡಬೇಕಾಗಿಲ್ಲ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಜೆ.ಎನ್.ಎನ್ ಎಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲರಾದ ಡಾ.ಪಿ.ಮಂಜುನಾಥ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ಪ್ಲೇಸ್ಮೆಂಟ್ ಅಧಿಕಾರಿ ಜಿ.ಸುರೇಶ್, ಐಸಿಟಿ ಅಕಾಡೆಮಿ ಸಂವಹನಾಧಿಕಾರಿ ಜಕಾವುಲ್ಲ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಚಿತ್ರ 1 : ಹನಿವೆಲ್ ಮತ್ತು ಐಸಿಟಿ ಅಕಾಡೆಮಿಯ ವತಿಯಿಂದ ಜೆ.ಎನ್.ಎನ್ ಎಂಜಿನಿಯರಿಂಗ್ ಕಾಲೇಜಿಗೆ ಸದಸ್ಯತ್ವ ಪ್ರಮಾಣ ಪತ್ರವನ್ನು ಐಸಿಟಿ ಅಕಾಡೆಮಿಯ ಕರ್ನಾಟಕ ರಾಜ್ಯ ಮುಖ್ಯಸ್ಥ ವಿಷ್ಣುಪ್ರಸಾದ್ ಅವರು ಎನ್ಇಎಸ್ ಕಾರ್ಯದರ್ಶಿ ಎಸ್.ಎನ್.ನಾಗರಾಜ ಅವರಿಗೆ ಹಸ್ತಾಂತರಿಸಿದರು. ಕಾಲೇಜಿನ ಪ್ರಾಂಶುಪಾಲರಾದ ಡಾ.ಪಿ.ಮಂಜುನಾಥ, ಪ್ಲೇಸ್ಮೆಂಟ್ ಅಧಿಕಾರಿ ಜಿ.ಸುರೇಶ್, ಐಸಿಟಿ ಅಕಾಡೆಮಿಯ ಜಕಾವುಲ್ಲ ಚಿತ್ರದಲ್ಲಿದ್ದಾರೆ.

Exit mobile version