II ನೇ ಸಂಸ್ಥಾಪನಾ ದಿನಾಚರಣೆ
ಕೃಷಿಕರ ವಿಶ್ವವಿದ್ಯಾಲಯವಾಗಿ ಬೆಳೆಯಬೇಕು
ಶಿವಮೊಗ್ಗ ಸೆ.21:
ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯವು ಕೇವಲ ವಿದ್ಯಾರ್ಥಿಗಳಿಗೆ ಮಾತ್ರವಲ್ಲ, ಕೃಷಿಕರ ವಿಶ್ವವಿದ್ಯಾಲಯವಾಗಿ ಬೆಳೆಯಬೇಕು ಎಂದು ಮಾಜಿ ವಿಧಾನ ಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ಹೇಳಿದರು.
ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಶಿವಮೊಗ್ಗ, ಇರುವಕ್ಕಿ
ಆವರಣ ಇಲ್ಲಿ ಆಯೋಜಿಸಲಾಗಿದ್ದ ವಿಶ್ವವಿದ್ಯಾಲಯದ 11ನೇ ಸಂಸ್ಥಾಪನಾ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತಾಡಿದರು.
ರೈತರು ಭೂಮಿಯನ್ನು ಉಳುಮೆ ಮಾಡುತ್ತಿದ್ದಾರೆ. ಯಾವ ಭೂಮಿಯಲ್ಲಿ ಎಂತಹ ಬೆಳೆಯನ್ನು ಬೆಳೆಯಬೇಕೆಂಬ ಪರಿಜ್ಞಾನ, ಮಾಹಿತಿ ನೀಡಲು ಪಂಚಾಯಿತಿವಾರು ಕನಿಷ್ಟ 50 ಜನರಿಗೆ ಕಾರ್ಯಾಗಾರಗಳನ್ನು ವಿಶ್ವ ವಿದ್ಯಾಲಯ ಕೈಗೊಳ್ಳಬೇಕು. ರೈತರ ಇಳುವರಿ ಹೆಚ್ಚಿಸಬೇಕು. ಈ ನಿಟ್ಟಿನಲ್ಲಿ ಸಂಶೋಧನೆ, ಪ್ರಯೋಗಗಳನ್ನು ಕೈಗೊಂಡಲ್ಲಿ ರೈತರು ಸಹ ಕೈ ಜೋಡಿಸುತ್ತಾರೆ.
ಈ ವಿಶ್ವವಿದ್ಯಾಲಯಕ್ಕಾಗಿ ದುಡಿದ, ದುಡಿಯುತ್ತಿರುವ ಎಲ್ಲರಿಗೂ ಅಭಿನಂದನೆಗಳು. ಅಧಿಕಾರಿಗಳು, ಶಿಕ್ಷಕರು ವಿದ್ಯಾರ್ಥಿಗಳ ಶ್ರಮದಿಂದ ಇನ್ನೂ ಚೆನ್ನಾಗಿ ವಿವಿ ಬೆಳೆಯಬೇಕು. ಈ ನಿಟ್ಟಿನಲ್ಲಿ ಬೋಧಕ ಬೋಧಕೇತರ ವರ್ಗದವರು ಇಲ್ಲಿಯೇ ವಾಸಿಸುವಂತಾದರೆ ವಿವಿ ಕುರಿತಾದ ಆಸಕ್ತಿ , ಒಲವು ಹೆಚ್ಚುತ್ತದೆ. ಅಭಿವೃದ್ಧಿಗೆ ಸಹಕಾರಿಯಾಗುತ್ತದೆ. ಆದ್ದರಿಂದ ಮಾನ್ಯ ಮುಖ್ಯಮಂತ್ರಿಗಳು, ಕೃಷಿ ಸಚಿವರನ್ನು ಭೇಟಿಯಾಗಿ ವಸತಿ ಗೃಹಗಳನ್ನು ನೀಡಲು ಮನವಿ ಮಾಡುತ್ತೇನೆ ಎಂದರು.
ನಾನೂ ಕೃಷಿಕನಾಗಿದ್ದೆ. ನನಗೆ ಎಲ್ಲ ರೀತಿಯ ಕೃಷಿ ಚಟುವಟಿಕೆಗಳ ಜ್ಞಾನ ಇದೆ. ವಿವಿ ಆಯೋಜಿಸುವ ಕೃಷಿ ಮೇಳಗಳಲ್ಲಿ ರೈತರು ಪಾಲ್ಗೊಂಡು ವೈಜ್ಞಾನಿಕ ಕೃಷಿ ಪದ್ಧತಿ, ಹೊಸ ಸಂಶೋಧನೆಗಳ ಕುರಿತು ತಿಳಿದುಕೊಂಡು ಅಳವಡಿಸಿಕೊಳ್ಳಬೇಕು ಎಂದ ಅವರು ಕೃಷಿ ವಿವಿ ಬೆಳೆಯಬೇಕು ಇದರಿಂದ ರೈತರಿಗೆ ಅನುಕೂಲವಾಗುತ್ತದೆ ಎಂದರು.
ಭವಿಷ್ಯದಲ್ಲಿ ಉಕೃೃಷ್ಟ ವಾದ ವಿಶ್ವವಿದ್ಯಾಲಯವಾಗಿ ಬೆಳೆಯಬೇಕು. ಈ ನೆಲ, ಮಣ್ಣು ನೋಡಿ ವಿದ್ಯಾರ್ಥಿಗಳಿಗೆ ಹೆಚ್ಚಿನ ಆಸಕ್ತಿ ಮೂಡಬೇಕು ಎಂದರು.
ಪ್ರಗತಿಪರ ರೈತರಾದ ದೊಡ್ಡಗೌಡ ಸಿ ಪಾಟೀಲ್ ಮಾತನಾಡುತ್ತಾ 7 ಜಿಲ್ಲೆಗಳ ವ್ಯಾಪ್ತಿ ಹೊಂದಿರುವ ಈ ವಿಶ್ವವಿದ್ಯಾನಿಲಯ ವೈವಿಧ್ಯತೆ ಹೊಂದಿದೆ. ವಿವಿ ಗೆ ಮೊದಲ ಹಂತದಲ್ಲಿ ರೂ. 150 ಮತ್ತು ನಂತರ ರೂ.38 ಕೋಟಿ ಅನುದಾನ ಮಾತ್ರ ಬಿಡುಗಡೆಯಾಗಿದೆ. ವಿವಿ ಅಭಿವೃದ್ದಿಗೆ ಹೆಚ್ಚಿನ ಅನುದಾನದ ಅವಶ್ಯಕತೆ ಇದೆ . ಇತ್ತೀಚೆಗೆ 108 ಪ್ರೊಫೆಸರ್ ನೇಮಕ ಆಗಿದೆ.
ಬರಗಾಲದಿಂದ ರೈತರು ತತ್ತರಿಸುತ್ತಿರುವ ಈ ಸಂದರ್ಭದಲ್ಲಿ ರೈತರಿಗೆ ಮಾರ್ಗದರ್ಶನ ಮಾಡುವ ಜವಾಬ್ದಾರಿ ವಿವಿ ಮೇಲಿದೆ. ಬೆಳೆ,ರೋಗ ನಿವ೯ಹಣೆ ಕುರಿತು ತಿಳಿಸಬೇಕು.ರೈತರ ಜೀವನ ಹಸನು ಮಾಡಲು ಪ್ರಯತ್ನಿಸಬೇಕು.
ವಿವಿ ಯಲ್ಲಿ ರೈತರ ಮಕ್ಕಳಿಗೆ ಶೇ.50 ಮೀಸಲಾತಿ ಇದೆ. ಇಂಜಿನಿಯರಿಂಗ್ ಗಿಂತ ಕೃಷಿ ವಿಜ್ಞಾನಕ್ಕೆ ಹೆಚ್ಚಿನ ಬೇಡಿಕೆ ಇದೆ. ಈ ನಿಟ್ಟಿನಲ್ಲಿ ವಿಶ್ವವಿದ್ಯಾನಿಲಯ ಬೆಳೆಯಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ.ಆರ್.ಸಿ ಜಗದೀಶ ಮಾತನಾಡಿದರು.
ಕಾರ್ಯಕ್ರಮದಲ್ಲಿ ವಿಶಿಷ್ಟ ಸಾಧನೆ ಮಾಡಿದ ಅತ್ಯುತ್ತಮ ಶಿಕ್ಷಕರು, ವಿಜ್ಞಾನಿಗಳು, ಸಿಬ್ಬಂದಿಗಳಿಗೆ ಪ್ರಶಸ್ತಿ ವಿತರಣೆ ಮಾಡಲಾಯಿತು. ಹಾಗೂ ನಿವೃತ್ತರಾದ ಶಿಕ್ಷಕ, ಸಿಬ್ಬಂದಿ ವರ್ಗವನ್ನು ಗೌರವಿಸಲಾಯಿತು.
ವಿವಿ ಕುಲಸಚಿವ ಡಾ. ಕೆ.ಸಿ.ಶಶಿಧರ್ ಸ್ವಾಗತಿಸಿದರು. ವ್ಯವಸ್ಥಾಪನಾ ಮಂಡಳಿ ಸದಸ್ಯರು ಹಾಗೂ ಪ್ರಗತಿಪರ ರೈತರಾದ ವೀರಭದ್ರಪ್ಪ ಪೂಜಾರಿ, ಶಿಕ್ಷಣ ತಜ್ಞ ಪಿ ಕೆ.ಬಸವರಾಜ ಮಾತನಾಡಿದರು. ಪ್ರಗತಿಪರ ರೈತರಾದ ನಾಗರಾಜ್, ಕೃಷಿ ಉದ್ದಿಮೆದಾರ ಬಿ. ಕೆ. ಕುಮಾರಸ್ವಾಮಿ, ಅಧಿಕಾರಿ ವರ್ಗದವರು, ಸಿಬ್ಬಂದಿಗಳು ಪಾಲ್ಗೊಂಡಿದ್ದರು.