ಶಿವಮೊಗ್ಗ : ಜೀವನದ ಸರ್ವತೋಮುಖ ಅಭಿವೃದ್ಧಿಗೆ ಕ್ರೀಡೆ ಅತ್ಯಗತ್ಯ ಎಂದು ರಾಷ್ಟ್ರೀಯ ಶಿಕ್ಷಣ ಸಮಿತಿ ಕಾರ್ಯದರ್ಶಿ ಎಸ್.ಎನ್.ನಾಗರಾಜ ಅಭಿಪ್ರಾಯಪಟ್ಟರು.
ಇಂದು ನಗರದ ನೆಹರು ಕ್ರೀಡಾಂಗಣದಲ್ಲಿ ಶಿವಮೊಗ್ಗ ತಾಲ್ಲೂಕು ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ರಾಷ್ಟ್ರೀಯ ಶಿಕ್ಷಣ ಸಮಿತಿ, ಜೆಪಿಎನ್ ಪ್ರೌಢಶಾಲೆಯ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ಶಿವಮೊಗ್ಗ ತಾಲ್ಲೂಕು ಅನುದಾನಿತ ಪ್ರೌಢಶಾಲೆಗಳ ಕ್ರೀಡಾಕೂಟ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಶರೀರ ಸಧೃಡವಾದಂತೆ ಮನಸ್ಸು ಸಧೃಡವಾಗುತ್ತಾ ಹೋಗುತ್ತದೆ. ಇಂತಹ ಸಧೃಡತೆ ಅನೇಕ ಸಾಧನೆಗಳನ್ನು ಸಾಧಿಸುವ ಶಕ್ತಿಯಾಗಿ ರೂಪಗೊಳ್ಳಲಿದೆ. ನಮ್ಮ ನಡುವೆ ಇರುವ ದೇಶಿಯ ಕ್ರೀಡೆಗಳ ಮಹತ್ವ ಅರಿತು ಸಕ್ರಿಯರಾಗಿ ಭಾಗವಹಿಸಿ ಎಂದು ಹೇಳಿದರು.
ಎನ್ಇಎಸ್ ನಿರ್ದೇಶಕರಾದ ಟಿ.ಆರ್.ಅಶ್ವಥನಾರಾಯಣ ಶೆಟ್ಟಿ ಮಾತನಾಡಿ , ಆರೋಗ್ಯವಂತ ವಾತಾವರಣ ನಿರ್ಮಾಣಕ್ಕೆ ಆರೋಗ್ಯವಂತ ಜೀವನ ಮುಖ್ಯ. ಕ್ರೀಡಾ ಚಟುವಟಿಕೆಗಳ ತೊಡಗಿಸಿಕೊಳ್ಳುವಲ್ಲಿ ಮಕ್ಕಳು ಹಿಂದುಳಿಯುತ್ತಿದ್ದಾರೆ. ಪೋಷಕರು ತಮ್ಮ ಮಕ್ಕಳು ಬಾಲ್ಯದಿಂದಲೇ ಕ್ರೀಡೆಯಲ್ಲಿ ಆಸಕ್ತಿಯನ್ನು ಬೆಳೆಸುವಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಪಿ.ನಾಗರಾಜ್ ಮಾತನಾಡಿ, ಕ್ರೀಡೆಯಲ್ಲಿನ ಭಾಗವಹಿಸುವಿಕೆ ಬಹಳ ಮುಖ್ಯ. ಜೀವನದ ಪ್ರತಿ ಹಂತದಲ್ಲಿ ಎದುರಾಗುವ ಸವಾಲುಗಳನ್ನು ಕ್ರೀಡಾ ಮನೋಭಾವದಿಂದ ಎದುರಿಸಿ. ಮಾನವೀಯತೆ, ಸ್ನೇಹಯುತ ವ್ಯಕ್ತಿತ್ವ ನಿಮ್ಮದಾಗಲಿ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಜೆಪಿಎನ್ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಇಮ್ತಿಯಾಜ್ ಅಹಮದ್ ಅಧ್ಯಕ್ಷತೆ ವಹಿಸಿದ್ದರು. ತಾಲ್ಲೂಕು ದೈಹಿಕ ಶಿಕ್ಷಣ ಅಧಿಕಾರಿ ನಿರಂಜನ ಮೂರ್ತಿ, ಎನ್ಇಎಸ್ ಕುಲಸಚಿವರಾದ ಪ್ರೊ.ಎನ್.ಕೆ.ಹರಿಯಪ್ಪ, ತಾಲ್ಲೂಕು ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷರಾದ ಕಾಳಾನಾಯ್ಕ್, ಕಾರ್ಯದರ್ಶಿ ಮಹೇಶ್ ಹುಲ್ಲತ್ತಿ ಉಪಸ್ಥಿತರಿದ್ದರು. ಅನುದಾನಿತ ಪ್ರೌಢಶಾಲೆಗಳ 28 ಶಾಲೆಗಳ ವಿದ್ಯಾರ್ಥಿಗಳು ಕ್ರೀಡಾಕೂಟದಲ್ಲಿ ಭಾಗವಹಿಸಿದ್ದರು.