Site icon TUNGATARANGA

ಸರ್.ಎಂ.ವಿ. ಸದಾ ಸ್ಮರಣೀಯರು, ರಾಜ್ಯ – ದೇಶಕ್ಕೆ ಅವರ ಕೊಡುಗೆ ಅನನ್ಯ – ಡಿಸಿಎಂ ಡಿ.ಕೆ. ಶಿವಕುಮಾರ್

ಬೆಂಗಳೂರು, ಸೆ, 15: ದೇಶದ ಶ್ರೇಷ್ಠ ಇಂಜಿನಿಯರ್ ಸರ್‌.ಎಂ. ವಿಶ್ವೇಶ್ವರಯ್ಯ ಅವರು ಸದಾ ಸ್ಮರಣೀಯರು ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಹೇಳಿದರು.

ನಗರದ ಕೆ. ಆರ್. ವೃತ್ತದ ಬಳಿ ಸರ್. ಮೋಕ್ಷಗುಂಡಂ ವಿಶ್ವೇಶ್ವರಾಯ ಅವರ 163 ನೇ ಜನ್ಮದಿನದ ಹಿನ್ನೆಲೆಯಲ್ಲಿ ಅವರ ಪುತ್ಥಳಿಗೆ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ, ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರೊಂದಿಗೆ ಡಿ.ಕೆ. ಶಿವಕುಮಾರ್ ಮಾಲಾರ್ಪಣೆ ಮಾಡಿದರು.

ನಂತರ ಮಾತನಾಡಿದ ಅವರು, ವಿಶೇಷವಾಗಿ ಬೆಂಗಳೂರಿನ ಜನ ಸರ್‌.ಎಂ.ವಿ ಅವರನ್ನು ನೆನಪಿಸಿಕೊಳ್ಳಬೇಕು. ಅವರ ದೂರದೃಷ್ಟಿಯಿಂದಾಗಿ ನಗರದ ಜನತೆಗೆ ಕಾವೇರಿ ನೀರು ದೊರೆತಿದೆ. ಜೊತೆಗೆ ಅವರ ದೂರಗಾಮಿ ವಿದ್ಯುತ್‌ ಯೋಜನೆಗಳ ಫಲವನ್ನು ನಾವು ಅನುಭವಿಸುತ್ತಿದ್ದೇವೆ. ಕರ್ನಾಟಕ ಹಾಗೂ ದೇಶಕ್ಕೆ ಅವರು ನೀಡಿದ ಕೊಡುಗೆ ಅನನ್ಯ ಎಂದರು.

ಕರ್ನಾಟಕ ಇಂಜಿನಿಯರ್‌ ಗಳ ಒಕ್ಕೂಟದ ಅಧ್ಯಕ್ಷರಾದ ವೆಂಕಟಶಿವರೆಡ್ಡಿ ಮಾತನಾಡಿ, ಕರ್ನಾಟಕದ ಇಂಜಿನಿಯರ್‌ ಗಳು ಸರ್.ಎಂ.ವಿ ಅವರನ್ನು ಪ್ರೇರಣೆಯಾಗಿಟ್ಟುಕೊಂಡು ಅವರು ಹಾಕಿಕೊಟ್ಟ ಮಾರ್ಗದಲ್ಲಿ ಸಾಗುತ್ತಿದ್ದೇವೆ. ಮುಂಬರುವ ದಿನಗಳಲ್ಲಿ ಅಂಬೇಡ್ಕರ್‌, ಗಾಂಧಿ ಜಯಂತಿ ಮಾದರಿಯಲ್ಲಿ ಸರ್ಕಾರವೇ ವಿಶ್ವೇಶ್ವರಯ್ಯ ಜಯಂತಿ ಆಚರಣೆ ಮಾಡಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಕರ್ನಾಟಕ ಇಂಜಿನಿಯರ್‌ ಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿಗಳಾದ ಕೆ.ಟಿ ನಾಗರಾಜ್‌, ಒಕ್ಕೂಟದ ಉಪಾಧ್ಯಕ್ಷರಾದ ಡಿ.ಕೆ ದೇವರಾಜ್‌, ಕೆ.ಇ.ಬಿ ಇಂಜಿನೀಯರ್ಸ್‌ ಅಸೋಸಿಯೇಷನ್‌ ಪ್ರಧಾನ ಕಾರ್ಯದರ್ಶಿ ಕೆ.ಎಲ್‌ ಸುಧಾಕರ್‌ ರೆಡ್ಡಿ, ಉಪಾಧ್ಯಕ್ಷ ಶಿವಾನಂದ ಹೂಗಾರ, ಲೋಕೋಪಯೋಗಿ ಇಲಾಖೆಯ ಇಂಜಿನಿಯರ್‌ ಗಳ ಅಧ್ಯಕ್ಷ ಕೃಷ್ಣಮೂರ್ತಿ, ತಾಂತ್ರಿಕ ಇಲಾಖೆಗಳ ಪ್ರಧಾನ ಕಾರ್ಯದರ್ಶಿಗಳು, ಕಾರ್ಯದರ್ಶಿಗಳು, ಮುಖ್ಯ ಇಂಜಿನಿಯರಗಳು ಹಾಗೂ ಸರ್ಕಾರದ ತಾಂತ್ರಿಕ ಇಲಾಖೆ, ಮಂಡಳಿ, ನಿಗಮಗಳ ಎಲ್ಲ ಇಂಜಿನೀಯರುಗಳು ಭಾಗವಹಿಸಿದ್ದರು.

Exit mobile version