Site icon TUNGATARANGA

ಜೆ.ಎನ್.ಎನ್.ಸಿ.ಇ : ಪ್ರಥಮ ವರ್ಷದ ಬಿಇ ವಿದ್ಯಾರ್ಥಿಗಳಿಗೆ ಓರಿಯಂಟೇಷನ್ ಕಾರ್ಯಕ್ರಮ |ಕಲ್ಪನಾ ದಾರಿದ್ರ್ಯದಿಂದ ಹೊರಬರಬೇಕಿದೆ

ಶಿವಮೊಗ್ಗ : ನಮ್ಮ ಪೂರ್ವಜರು ಹಾಕಿ ಕೊಟ್ಟ ಶಿಕ್ಷಣ ಪದ್ದತಿ ನಾವೀನ್ಯ ಚಿಂತನೆಗಳನ್ನು ಮರೆಯುತ್ತಿದ್ದು ಆಧುನಿಕತೆಯ ಭರದಲ್ಲಿರುವ ನಾವೂ ಕಲ್ಪನಾ ದಾರಿದ್ರ್ಯದಿಂದ ಹೊರಬರಬೇಕಿದೆ ಎಂದು ಧಾರವಾಡ ಭಾರತೀಯ ತಂತ್ರಜ್ಞಾನ ಸಂಸ್ಥೆಯ ನಿರ್ದೇಶಕರಾದ ವೆಂಕಪಯ್ಯ.ಆರ್.ದೇಸಾಯಿ ಅಭಿಪ್ರಾಯಪಟ್ಟರು.

ನಗರದ ಜೆ.ಎನ್.ಎನ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಶುಕ್ರವಾರ ಪ್ರಥಮ ವರ್ಷದ ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ್ದ ಓರಿಯಂಟೇಷನ್ ಕಾರ್ಯಕ್ರಮ ಹಾಗೂ ಅಭಿಯಂತರರ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.

ಪೂರ್ವಜರು ಅಖಂಡ ಶಿಲೆಗಳನ್ನು ವೈಜ್ಞಾನಿಕವಾಗಿ ಕೊರೆದು  ಸುಂದರ ದೇವಾಲಯಗಳನ್ನು ನಿರ್ಮಾಣ ಮಾಡಿದ್ದಾರೆ. ಸಾವಿರ ವರ್ಷಗಳ ಹಿಂದೆಯೇ ನಾಲ್ಕು ತಲೆಮಾರುಗಳು ಅದ್ಭುತ ಚಿಂತನೆಗಳೊಂದಿಗೆ ಅತ್ಯುತ್ತಮ ಕಲಾ ಕೃತಿಗಳನ್ನು, ಕಟ್ಟಡ ದೇವಾಲಯಗಳನ್ನು ಸೃಷ್ಟಿಸಿದ ಉದಾಹರಣೆಗಳಿವೆ. ಈ ಎಲ್ಲಾ ವಿಷಯಗಳು ನಮ್ಮ ಪೂರ್ವಜರ ನಾವೀನ್ಯ ಅಭಿಯಂತರ ಚಿಂತನೆಗಳಿಗೆ ಕೈಗನ್ನಡಿಯಾಗಿದೆ.

ಹೊಸತಲೆಮಾರಿನ ನಾವೀನ್ಯ ಚಿಂತನೆಗಳಲ್ಲಿ ಪರಿಸರದ ನಡುವಿನ ಅನೇಕ ಸವಾಲುಗಳಿಗೆ ತಾಂತ್ರಿಕ ಪರಿಹಾರ ನೀಡಲಾಗುತ್ತಿದೆ. ಟಾಟಾ ಕಂಪನಿ ತನ್ನ ಸಂಪೂರ್ಣ ಕಾರ್ಖಾನೆಗಳ ಪ್ರಾಂಗಣದಲ್ಲಿ ಸ್ವಯಂ ವಿದ್ಯುತ್ ಉತ್ಪಾದನೆ ಮತ್ತು ನೀರುರಹಿತ ಶೌಚಾಲಯಗಳನ್ನು ನಿರ್ಮಾಣ ಮಾಡಿದ್ದಾರೆ.

ಜಪಾನ್ ಪ್ರತಿಯೊಂದು ಶಾಲೆಯಲ್ಲಿ ಸ್ವಯಂ ಸ್ವಚ್ಚತಾ ಯೋಜನೆಗಳನ್ನು ರೂಪಿಸಿದ್ದಾರೆ. ಹೈನುಗಾರಿಕೆ, ಕೃಷಿ, ತೋಟಗಾರಿಕೆ, ಜಾತಕ ಫಲದ ಕಂಡುಕೊಳ್ಳುವಿಕೆ ಹೀಗೆ ಎಲ್ಲಾ ಹಂತಗಳಲ್ಲಿ ನಾವೀನ್ಯತೆ ಅಳವಡಿಸಿಕೊಳ್ಳುವ ಅವಕಾಶವನ್ನು ಅಭಿಯಂತರರು ಮಾಡಬಹುದಾಗಿದೆ. ಹನಿ ನೀರಾವರಿ ಮೂಲಕ ಕಡಿಮೆ ಮಳೆ ಬೀಳುವ ಸ್ಥಳದಲ್ಲಿಯು ಹೆಚ್ಚಿನ ಇಳುವರಿ ಪಡೆಯಬಹುದಾದ ಪ್ರಯೋಗ ಇಸ್ರೇಲ್ ಮಾಡಿ ಯಶಸ್ವಿಯಾಗಿದ್ದಾರೆ.

ನಮ್ಮ ಪೂರ್ವಜರು ಬಿಟ್ಟುಹೋಗಿರುವ ಅದ್ಭುತ ಉದಾಹರಣೆಗಳಿಂದ ಪ್ರೇರಣೆ ಪಡೆಯಿರಿ. ಪೂರ್ವಜರ ಚಿಂತನೆಗಳೊಂದಿಗೆ ಹೊಸತಲೆಮಾರಿನ ನಾವೀನ್ಯ ಪ್ರಯೋಗಗಳು ನಿಮ್ಮದಾಗಲಿ.

ಹುದ್ದೆಯ ಹಿಂದೆ ಬಿದ್ದಂತಹ ವ್ಯಕ್ತಿತ್ವಗಳೇ ಹೆಚ್ಚಿರುವವರ ನಡುವೆ, ಸರ್.ಎಂ.ವಿಶ್ವೇಶ್ವರಯ್ಯ ಅವರ ವ್ಯಕ್ತಿತ್ವಕ್ಕೆ ಅನೇಕ ಹುದ್ದೆಗಳು ಅರಸಿ ಬಂದವು. ಅಂತಹ ವೈಶಿಷ್ಟ್ಯ ಪೂರ್ಣ ಅದ್ಭುತ ವ್ಯಕ್ತಿತ್ವ ವಿಶ್ವೇಶ್ವರಯ್ಯ ಅವರದಾಗಿತ್ತು ಎಂದು ಹೇಳಿದರು.

ಪ್ರಾಸ್ತಾವಿಕ ಮಾತುಗಳನ್ನಾಡಿದ ಎನ್ಇಎಸ್ ಕಾರ್ಯದರ್ಶಿ ಎಸ್.ಎನ್.ನಾಗರಾಜ ಮಾತನಾಡಿ, ಗಾಂಧೀಜಿಯವರ ಕರೆಯ ಮೇರೆಗೆ ಸ್ಥಾಪಿಸಲ್ಪಟ್ಟ ಎನ್ಇಎಸ್ ಸಂಸ್ಥೆ ಎಲ್ಲರಿಗೂ ಕೈಗೆಟುಕುವ ರೀತಿಯಲ್ಲಿ ಶಿಕ್ಷಣ ನೀಡುತ್ತ ಬಂದಿದೆ. ಕಾಲಕ್ಕೆ ತಕ್ಕಂತೆ ಹೊಸ ತಾಂತ್ರಿಕ ವಿಷಯಗಳನ್ನು ಅಳವಡಿಸಿಕೊಂಡು ಬರುತ್ತಿದೆ. ಕಾಲೇಜಿಗೆ ದಾಖಲಾತಿ ಮಾಡಿದ ಮಾತ್ರಕ್ಕೆ ಪೋಷಕರು ಜವಾಬ್ದಾರಿಯಿಂದ ನುಣುಚಿಕೊಳ್ಳಬೇಡಿ. ಮಕ್ಕಳ ಪ್ರತಿಯೊಂದು ವಿದ್ಯಾಭ್ಯಾಸದ ನಡೆಗೆ ಗಮನಹರಿಸಲು ಕಾಲೇಜಿನ ಮೆಂಟಾರ್ ವ್ಯವಸ್ಥೆಗಳನ್ನು ಬಳಸಿಕೊಳ್ಳಿ ಎಂದು ಹೇಳಿದರು.

************************************************

ರ‍್ಯಾಂಕ್ ವಿಜೇತರಿಗೆ ಎನ್ಇಎಸ್ ಚಿನ್ನದ ಪದಕ:

ಪ್ರಸ್ತುತ ವರ್ಷದಿಂದ ಎನ್ಇಎಸ್ ಅಮೃತಮಹೋತ್ಸವ ಸವಿನೆನಪಿನಲ್ಲಿ ಎನ್ಇಎಸ್ ವಿದ್ಯಾ ಸಂಸ್ಥೆಗಳಲ್ಲಿ ವಿಶ್ವವಿದ್ಯಾಲಯದ ಪ್ರಥಮ ರ‍್ಯಾಂಕ್ ಪಡೆದ ವಿದ್ಯಾರ್ಥಿಗಳಿಗೆ ಎನ್ಇಎಸ್ ಅಮೃತ ಚಿನ್ನದ ಪದಕ ನೀಡಿ ಪುರಸ್ಕರಿಸಲಾಗುವುದು ಎಂದು ಎನ್ಇಎಸ್ ಸಹ ಕಾರ್ಯದರ್ಶಿ ಡಾ.ಪಿ.ನಾರಾಯಣ್ ಘೋಷಿಸಿದರು.

************************************************

ಕಾರ್ಯಕ್ರಮದಲ್ಲಿ ಎನ್ಇಎಸ್ ಅಧ್ಯಕ್ಷರಾದ ಜಿ.ಎಸ್.ನಾರಾಯಣರಾವ್ ಅಧ್ಯಕ್ಷತೆ ವಹಿಸಿದ್ದರು. ಸಹ ಕಾರ್ಯದರ್ಶಿ ಡಾ.ಪಿ.ನಾರಾಯಣ್, ಖಜಾಂಚಿ ಡಿ.ಜಿ.ರಮೇಶ್, ನಿರ್ದೇಶಕರಾದ ಟಿ.ಆರ್.ಅಶ್ವಥನಾರಾಯಣ ಶೆಟ್ಟಿ, ಎನ್.ಟಿ.ನಾರಾಯಣರಾವ್, ಹೆಚ್.ಸಿ.ಶಿವಕುಮಾರ್, ಮಧುರಾವ್, ಎಂ.ಆರ್.ಸೀತಾಲಕ್ಷ್ಮೀ, ಕುಲಸಚಿವರಾದ ಪ್ರೊ.ಎನ್.ಕೆ.ಹರಿಯಪ್ಪ, ಶೈಕ್ಷಣಿಕ ಆಡಳಿತಾಧಿಕಾರಿ ಎ.ಎನ್.ರಾಮಚಂದ್ರ, ಪ್ರಾಂಶುಪಾಲರಾದ ಡಾ.ಪಿ.ಮಂಜುನಾಥ ವೇದಿಕೆಯಲ್ಲಿ ಉಪಸ್ಥಿತರಿದ್ದರು. 

ಇದೇ ವೇಳೆ ಕಂಪ್ಯೂಟರ್ ಸೈನ್ಸ್ ಎಂಜಿನಿಯರಿಂಗ್ ವಿಭಾಗದಲ್ಲಿ ರಾಜ್ಯಕ್ಕೆ ಪ್ರಥಮ ರ‍್ಯಾಂಕ್ ಹಾಗೂ ಆರು ಚಿನ್ನದ ಪದಕ ಪಡೆದ ವಿದ್ಯಾರ್ಥಿನಿ ಪಾರ್ವತಿ ಸಲೆರಾ ಹಾಗೂ ಎಲೆಕ್ಟ್ರಾನಿಕ್ಸ್ ಅಂಡ್ ಟೆಲಿಕಮ್ಯುನಿಕೇಷನ್ ಎಂಜಿನಿಯರಿಂಗ್ ವಿಭಾಗದಲ್ಲಿ ಒಂಬತ್ತನೇ ರ‍್ಯಾಂಕ್ ಪಡೆದ ಸ್ಮೃತಿ.ಕೆ.ವಂತಕರ್ ಅವರನ್ನು ಅಭಿನಂದಿಸಲಾಯಿತು.

Exit mobile version