ಶಿವಮೊಗ್ಗ: ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ವತಿಯಿಂದ ಸೆ.೧೫ರ ಬೆಳಿಗ್ಗೆ ೧೦-೩೦ಕ್ಕೆ ಸಂಘದ ಶಾಂತಲಾ ಸ್ಪೆರೋಕ್ಯಾಸ್ಟ್ ಸಭಾಂಗಣದಲ್ಲಿ ಇಂಜಿನಿಯರ್ಸ್ ಡೇ ಮತ್ತು ಸರ್‌ಎಂ. ವಿಶ್ವೇಶ್ವರಯ್ಯನವರ ಜನ್ಮ ದಿನಾಚರಣೆ, ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಎನ್. ಗೋಪಿನಾಥ್ ಹೇಳಿದರು.
ಅವರು ಇಂದು ವಾಣಿಜ್ಯ ಮತ್ತು ಕೈಗಾರಿಕಾ ಸಂಘದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ವಿಶ್ವೇಶ್ವರಯ್ಯನವರು ಈ ದೇಶ ಕಂಡ ಅತ್ಯಂತ ಸಮರ್ಥ ಆಡಳಿತಗಾರ. ಇವರ ಜನ್ಮ ದಿನಾಚರಣೆಯನ್ನು ನಮ್ಮ ಕೈಗಾರಿಕಾ ಸಂಘ ಪ್ರತಿ ವರ್ಷವೂ ಆಚರಿಸುತ್ತಾ ಬಂದಿದೆ ಎಂದರು.
ಸಂಘವು ಕೈಗಾರಿಕಾ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಕಂಪನಿಗಳಿಗೆ ಹಾಗೂ ವೈಯಕ್ತಿಕವಾಗಿ ಸಾಧನೆ ಮಾಡಿದ ಗಣ್ಯರಿಗೆ ವಿಶೇಷ ಸನ್ಮಾನ ಕಾರ್ಯಕ್ರಮ ಹಾಗೂ ವಾಣಿಜ್ಯ ಪ್ರಶಸ್ತಿ ಪಡೆದವರಿಗೆ ಅಭಿನಂದನೆಯನ್ನು ಸಲ್ಲಿಸಲಾಗುವುದು.
ಈ ಬಾರಿ ನಿದಿಗೆ ಕೈಗಾರಿಕಾ ವಸಾಹತುವಿನ ಮೆ. ಪ್ರಣವ್ ಪ್ಯಾಕೇಜಿಂಗ್ ಪ್ರೈವೇಟ್ ಲಿಮಿಟೆಡ್ ಕಲ್ಲೂರು ಮಂಡ್ಲಿ ಕೈಗಾರಿಕಾ ವಸಾಹತಿನ ಮೆ. ಶಿವಾಜಿ ಆಗ್ರೋ ಕಾಂಪೊನೆಂಟ್ಸ್, ಆಟೋ ಕಾಂಪ್ಲೆಕ್ಸ್‌ನ ಮೆ. ಎನ್.ಎನ್. ಇಂಜಿನಿಯರಿಂಗ್ಸ್‌ಗೆ ಈ ಸಾಲಿನ ಹೆಮ್ಮೆಯ ವಾಣಿಜ್ಯ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದರು.
ಹಾಗೆಯೇ ಮಾಚೇನಹಳ್ಳಿಯ ಪ್ರಾರ್ಥನಾ ಇಂಜಿನಿಯರಿಂಗ್ ಸಂಸ್ಥೆಯಲ್ಲಿ ಸೂಪರ್ ವೈಸರ್ ಆಗಿ ಕೆಲಸ ಮಾಡುತ್ತಿರುವ ಕಾರ್ಮಿಕ ಕೆ. ವೇದನಾಥನ್ ಮತ್ತು ವೋಲ್‌ಮ್ಯಾಕ್ ಕಾಪೊನೆಂಟ್ಸ್‌ನಲ್ಲಿ ಕೆಲಸ ಮಾಡುತ್ತಿರುವ ವೀರೇಂದ್ರ ಅವರಿಗೆ ಅತ್ಯುತ್ತಮ ಕಾರ್ಮಿಕ ಪ್ರಶಸ್ತಿ ನೀಡ ಗೌರವಿಸಲಾಗುವುದು ಎಂದರು.
ಕಾರ್ಯದರ್ಶಿ ವಸಂತ್ ಹೋಬಳಿದಾರ್ ಮಾತನಾಡಿ, ಇಂಜಿನಿಯರ್ಸ್ ದಿನಾಚರಣೆಯ ಸಮರಂಭವನ್ನು ಜಿಲ್ಲಾಧಿಕಾರಿ ಡಾ. ಆರ್. ಸೆಲ್ವಮಣಿ ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ದ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯನ್ ಫೌಂಡ್ರಿಮೆನ್‌ನ ರಾಷ್ಟ್ರೀಯ ಅಧ್ಯಕ್ಷ ಡಿ.ಎಸ್. ಚಂದ್ರಶೇಖರ್ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಎನ್. ಗೋಪಿನಾಥ್ ಅಧ್ಯಕ್ಷತೆ ವಹಿಸುವರು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಕೈಗಾರಿಕಾ ಸಂಘದ ಪದಾಧಿಕಾರಿಗಳಾದ ಬಿ. ಗೋಪಿನಾಥ್, ಜಿ. ವಿಜಯಕುಮಾರ್, ಎಂ. ರಾಜು, ಬಿ.ಆರ್. ಸಂತೋಷ್ ಪ್ರದೀಪ್, ಪರಮೇಶ್ವರ, ಟಿ.ಆರ್. ಅಶ್ವತ್ಥನಾರಾಯಣ ಶೆಟ್ಟಿ, ಡಿ.ಎಂ. ಶಂಕರಪ್ಪ ಇದ್ದರು.