ಶಿವಮೊಗ್ಗ, ಸೆಪ್ಟೆಂಬರ್ 12,
2023-24 ನೇ ಸಾಲಿನಲ್ಲಿ ತೋಟಗಾರಿಕೆ ಇಲಾಖೆ ವತಿಯಿಂದ ಪ್ರಧಾನಮಂತ್ರಿ ಕೃಷಿ ಸಂಚಾಯಿ ಯೋಜನೆಯಡಿ ಸೌಲಭ್ಯ ನೀಡಲು ಅರ್ಹ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಇತರೆ ವರ್ಗದ ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ.
ತೋಟಗಾರಿಕೆ ಬೆಳೆಯನ್ನು ಬೆಳೆಯುತ್ತಿದ್ದು (ಕಾಫಿ, ಟೀ ಹಾಗೂ ರಬ್ಬರ್ ಬೆಳೆಗಳನ್ನು ಹೊರತುಪಡಿಸಿ) ಹನಿ ನೀರಾವರಿ ಅಳವಡಿಸಿದ ಎಲ್ಲಾ ವರ್ಗದ ಫಲಾನುಭವಿಗೆ ಗರಿಷ್ಟ 5 ಹೆಕ್ಟೇರ್ ಪ್ರದೇಶದವರೆಗೆ ಸಹಾಯಧನ ನೀಡಲಾಗುವುದು.
ತರಕಾರಿ ಮತ್ತು ಹೂ ಬೆಳೆಗಳಿಗೆ ಗರಿಷ್ಟ 2 ಹೆಕ್ಟೇರ್ ಪ್ರದೇಶಕ್ಕೆ ಸಹಾಯಧನ ನೀಡಲಾಗುವುದು. ಸೂಕ್ಷ್ಮ ನೀರಾವರಿ ಘಟಕ ಅಳವಡಿಸಿದ ಅರ್ಹ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ರೈತ ಫಲಾನುಭವಿಗಳಿಗೆ
ಮೊದಲ 2 ಹೆಕ್ಟೇರ್ ಪ್ರದೇಶದವರೆಗೆ ಶೇ.90 ರಷ್ಟು ಮತ್ತು ಇತರೆ ವರ್ಗದ ರೈತ ಫಲಾನುಭವಿಗಳಿಗೆ ಮೊದಲ 2 ಹೆಕ್ಟೇರ್ ಪ್ರದೇಶದವರೆಗೆ ಶೇ.75 ರಷ್ಟು ಸಹಾಯಧನ ಲಭ್ಯವಿರುತ್ತದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಇತರೆ ರೈತ ಫಲಾನುಭವಿಗಳಿಗೆ 2 ಹೆಕ್ಟೇರ್ ಮೇಲ್ಪಟ್ಟು 3 ಹೆಕ್ಟೇರ್‍ಗೆ ಶೇ.45 ರಷ್ಟು ಸಹಾಯಧನ ನೀಡಲು ಅವಕಾಶ ಕಲ್ಪಿಸಲಾಗಿದೆ.
ಈ ಹಿಂದೆ ಅರ್ಜಿ ಸಲ್ಲಿಸಿ ಸಹಾಯಧನ ಪಡೆಯದಿದ್ದಲ್ಲಿ ಅಂತಹ ಅರ್ಜಿಗಳನ್ನು ಪ್ರಸಕ್ತ ವರ್ಷ ಸಹಾಯಧನಕ್ಕೆ ಪರಿಗಣಿಸುವುದಿಲ್ಲ. ಇಲಾಖೆಯಿಮದ ಅನುಮೋದಿತ ಕಂಪನಿಗಳ ಮಾಹಿತಿ ಹಾಗು
ಹೆಚ್ಚಿನ ವಿವರಗಳನ್ನು ಆಯಾ ಹೋಬಳಿ ರೈತ ಸಂಪರ್ಕ ಕೇಂದ್ರದ ಸಹಾಯಕ ತೋಟಗಾರಿಕಾ ಅಧಿಕಾರಿಗಳು ಅಥವಾ ಕಚೇರಿಯಿಂದ ಪಡೆಯಬಹುದು ಎಂದು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ತಿಳಿಸಿದ್ದಾರೆ.