Site icon TUNGATARANGA

ವಾಸವಿ ಪಬ್ಲಿಕ್ ಶಾಲೆಯಲ್ಲಿ ಪರಿಸರ ಗಣಪತಿ ಸಾರ್ವಜನಿಕರಿಗೆ ವಿತರಣೆ | ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಶಾಲೆಯ ಆವರಣದಲ್ಲಿ ಕೃತಕ ಕೆರೆ ನಿರ್ಮಿಸಿ ಗಣಪತಿ ವಿಸರ್ಜನೆಗೆ ಅವಕಾಶ: ಎಸ್.ಕೆ. ಶೇಷಾಚಲ

ಶಿವಮೊಗ್ಗ: ಕೋಟೆ ರಸ್ತೆಯಲ್ಲಿರುವ ವಾಸವಿ ಪಬ್ಲಿಕ್ ಶಾಲೆಯಲ್ಲಿ ಕಳೆದ ೮ ವರ್ಷಗಳಿಂದ ಪರಿಸರ ಸಂರಕ್ಷಣೆಗೋಸ್ಕರ ಪರಿಸರಸ್ನೇಹಿ ಗಣಪತಿಗಳನ್ನು ಸಾರ್ವಜನಿಕರಿಗೆ ನೀಡುವ ಕಾರ್ಯಕ್ರಮ ಹಮ್ಮಿಕೊಂಡು ಬರುತ್ತಿದ್ದು, ಈ ವರ್ಷವೂ ಸಹ ನೂರು ಪರಿಸರಸ್ನೇಹಿ ಗಣಪತಿಗಳನ್ನು ವಿತರಿಸಲಾಗುವುದು ಎಂದು ಶಾಲೆಯ ಕಾರ್ಯದರ್ಶಿ ಎಸ್.ಕೆ. ಶೇಷಾಚಲ ತಿಳಿಸಿದರು.


ಅವರು ಇಂದು ಮೀಡಿಯಾ ಹೌಸ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಶಾಲೆಯಲ್ಲಿ ಪರಿಸರಸ್ನೇಹಿ ಗಣಪತಿಯನ್ನು ಪ್ರತಿಷ್ಠಾಪಿಸುವುದರ ಮೂಲಕ ಪ್ರತಿವರ್ಷ ಹಬ್ಬ ಆಚರಿಸಲಾಗುತ್ತದೆ ಎಂದರು.


ನದಿಯ ನೀರು ಹಾಳಾಗದಂತೆ ಹಾಗೂ ಜಲಚರ ಜೀವಿಗಳು ನಾಶವಾಗುವುದನ್ನು ತಡೆಗಟ್ಟಲು ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಶಾಲೆಯ ಆವರಣದಲ್ಲಿ ಪ್ರತಿವರ್ಷ ಕೃತಕ ಕೆರೆ ನಿರ್ಮಿಸಿ ಹಬ್ಬದ ದಿನ ಸುಮಾರು ೨೦೦ ಗಣಪತಿ ವಿಸರ್ಜನೆಗೆ ಅವಕಾಶ ಮಾಡಿಕೊಡಲಾಗುತ್ತಿದೆ ಎಂದರು.


ಶಾಲೆಯ ಸುತ್ತಮುತ್ತ ಇರುವ ಮನೆಗಳಲ್ಲಿ ಪ್ರತಿಷ್ಠಾಪಿಸುವ ಗಣಪತಿಯ ವಿಸರ್ಜನೆಗೆ ಈಗಾಗಲೇ ಜಾಗೃತಿ ಮೂಡಿಸಿದ್ದು, ಪರಿಸರಸ್ನೇಹಿ ಗಣಪತಿಯನ್ನು ಪ್ರತಿಷ್ಠಾಪಿಸುವಂತೆ ಶಾಲೆಯ ರೋಟರಿ ಇಂಟರ‍್ಯಾಕ್ಟ್ ಕ್ಲಬ್‌ನ ಸದಸ್ಯರು ಮನೆ ಮನೆಗೆ ತೆರಳಿ ಮನವಿ ಮಾಡುತ್ತಿದ್ದಾರೆ ಎಂದರು.


ಸುಮಾರು ೧೦೦ಕ್ಕೂ ಹೆಚ್ಚು ಪರಿಸರಸ್ನೇಹಿ ಗಣಪತಿ ಮೂರ್ತಿಯನ್ನು ವಿತರಿಸಲಾಗುತ್ತಿದ್ದು, ೧ ಮೂರ್ತಿಗೆ ೧೫೦ ರೂ. ಬೆಲೆ ನಿಗದಿ ಮಾಡಿದ್ದು, ಸೆ.೧೨ರಿಂದ ವಿತರಿಸಲಾಗುವುದು. ಹಬ್ಬದ ಮೊದಲ ದಿನ ರಾತ್ರಿ ೮-೩೦ರಿಂದ ೧೧-೩೦ರವರೆಗೆ ಕೃತಕ ಕೆರೆಯಲ್ಲಿ ವಿಸರ್ಜನೆ ಮಾಡಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಮೊ: ೯೯೧೬೫ ೧೪೦೬೬ರಲ್ಲಿ ಸಂಪರ್ಕಿಸಬಹುದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಶಾಲೆಯ ಅಧ್ಯಕ್ಷ ಬಿ.ಎಲ್. ಶ್ಯಾಮಸುಂದರ್, ಎಸ್.ನಾಗರಾಜ್, ಸೌಮ್ಯ, ರೋಟರಿ ಇಂಟರ‍್ಯಾಕ್ಟ್ ಕ್ಲಬ್‌ನ ಸದಸ್ಯರಾದ ತನುಶ್ರೀ, ಚೇತನ್, ಚಿನಿಶಾ ಉಪಸ್ಥಿತರಿದ್ದರು.

Exit mobile version