Site icon TUNGATARANGA

ದ್ವೇಶದ ರಾಜಕಾರಣಕ್ಕಾಗಿ ಪಠ್ಯಪುಸ್ತಕ ಬದಲಿಸಿದ ರಾಜ್ಯಸರ್ಕಾರ: ಡಿಎಸ್ ಅರುಣ್ ಆಕ್ಷೇಪ

ಶಿವಮೊಗ್ಗ: ರಾಜ್ಯ ಸರ್ಕಾರ ಪಠ್ಯಪುಸ್ತಕ ಬದಲಾಣೆ ಮಾಡಿರುವುದು ದ್ವೇಷದ ರಾಜಕಾರಣವಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಡಿ.ಎಸ್. ಅರುಣ್ ದೂರಿದರು.


ಅವರು ಇಂದು ಬಿಜೆಪಿ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ವಿಧಾನ ಪರಿಷತ್ ಕಲಾಪದಲ್ಲಿ ನಾನು ಹಲವು ಪ್ರಶ್ನೆಗಳನ್ನು ಕೇಳಿದ್ದೆ.ಕೆಲವು ಪ್ರಶ್ನೆಗಳಿಗೆ ಸ್ಟಾರ್ ಸಿಕ್ಕಿತ್ತು. ಶೂನ್ಯ ವೇಳೆಯಲ್ಲಿ ಕೂಡ ಪ್ರಶ್ನೆಗಳನ್ನು ಕೇಳಿರುವೆ. ಪಠ್ಯ ಪುಸ್ತಕ ಬದಲಾವಣೆ ಸೇರಿದಂತೆ ಜಿಎಸ್ಟಿ, ಎಪಿಎಂಸಿ ಕಾಯಿದೆ, ಟ್ರೇಡ್ ಲೈಸೆನ್ಸ್ ಹೀಗೆ ಹಲವು ವಿಷಯಗಳಿಗೆ ಸಂಬಂಧಿಸಿದಂತೆ ಕಲಾಪದ ಚರ್ಚೆಯಲ್ಲಿ ಭಾಗವಹಿಸಿದ್ದೇನೆ ಎಂದರು.
ಮುಖ್ಯವಾಗಿ ಸರ್ಕಾರಕ್ಕೆ ನನ್ನ ಪ್ರಶ್ನೆ ಇದ್ದದ್ದು ಪಠ್ಯ ಪುಸ್ತಕಗಳನ್ನು ಬದಲಾವಣೆ ಮಾಡಿದ್ದು ಏಕೆ? ಯಾವ ಯಾವ ತರಗತಿಗಳಿಗೆ ಯಾವ ಯಾವ ಪಾಠವನ್ನು ಕೈಬಿಟ್ಟಿದ್ದೀರಿ, ಮತ್ತು ಹೊಸದಾಗಿ ಯಾವ ಪಠ್ಯವನ್ನು ಸೇರಿಸಿದ್ದೀರಿ. ಯಾವ ಕಾರಣಕ್ಕೆ ಸೇರಿಸಿದ್ದೀರಿ ಎಂದು ಕೇಳಿದ್ದೆ. ಸರ್ಕಾರ ಲಿಖಿತ ಉತ್ತರ ನನಗೆ ನೀಡಿದೆ ಎಂದರು.


ಈ ಲಿಖಿತ ಉತ್ತರವನ್ನು ಮನನವಿಟ್ಟು ಓದಿದಾಗ ಇದು ಸಂಪೂರ್ಣ ರಾಜಕೀಯಪ್ರೇರಿತವಾಗಿದೆ ಮತ್ತು ದ್ವೇಷದ ರಾಜಕಾರಣ ಇದರಲ್ಲಿ ಅಡಗಿದೆ ಎಂದು ಸ್ಪಷ್ಟವಾಗಿ ಅನಿಸಿದೆ. ೬ರಿಂದ ೧೦ನೇ ತರಗತಿಯ ಕನ್ನಡ ಭಾಷೆಗೆ ಸಂಬಂಧಿಸಿದಂತೆ ೯ ಪಠ್ಯಗಳನ್ನು, ಸಮಾಜ ವಿಜ್ಞಾನಕ್ಕೆ ಸಂಬಂಧಿಸಿದಂತೆ ೯ ಪಠ್ಯಗಳನ್ನು ತಿದ್ದುಪಡಿ ಮಾಡಲಾಗಿದೆ. ಮುಖ್ಯವಾಗಿ ಚಕ್ರವರ್ತಿ ಸೂಲಿಬೆಲೆ, ಶತಾವಧಾನಿ ಗಣೇಶ್, ಡಾ. ಕೆ.ಬಿ. ಹೆಡ್ಗೆವಾರ್ ಅವರ ಪಠ್ಯಗಳನ್ನು ತೆಗೆದುಹಾಕಲಾಗಿದೆ ಎಂದರು.


ಚಕ್ರವರ್ತಿ ಸೂಲಿಬೆಲೆ ಅವರು ರಾಷ್ಟ್ರಪ್ರೇಮ ಕುರಿತಂತೆ ಬರೆದಿದ್ದರು. ಹೆಡ್ಗೆವಾರ್ ಅವರು ಅಮರಪುತ್ರರು ಎಂಬ ಪಠ್ಯವನ್ನು ಬರೆದಿದ್ದರು. ಶತಾವಧಾನಿ ಗಣೇಶ್ ಅವರು ಕೂಡ ದೇಶಪ್ರೇಮ ಕುರಿತು ಮಕ್ಕಳ ಮನಸ್ಸಿನ ಭಾವನೆಗಳನ್ನು ಕುರಿತು ಬರೆದಿದ್ದಾರೆ. ಆದರೆ ಸರ್ಕಾರ ಈ ಮೂವರ ಪಠ್ಯಗಳನ್ನು ಕೂಡ ಬದಲಾವಣೆ ಮಾಡಿ ಉರುಸಿನಲ್ಲಿ ಭಾವೈಕ್ಯತೆ, ನೆಹರು ಮಗಳಿಗೆ ಬರೆದ ಪತ್ರ, ಯುದ್ಧ ಮುಂತಾದ ಪಠ್ಯಗಳನ್ನು ಸೇರಿಸಿದ್ದಾರೆ. ಈ ಎಲ್ಲಾ ಪಠ್ಯಗಳು ತುಷ್ಟೀಕರಣದ ಪಾಠಗಳಾಗಿವೆ. ಇವುಗಳನ್ನು ಬದಲಾವಣೆ ಮಾಡುವ ಮೂಲಕ ರಾಗ, ದ್ವೇಷ ಮೂಡಿಸಿದ್ದಾರೆ ಎಂದು ಆರೋಪಿಸಿದರು.


ಯಾವುದೇ ಪಠ್ಯ ಬದಲಾವಣೆ ಮಾಡುವುದು ಕ್ಯಾಬಿನೆಟ್‌ನಲ್ಲಿ ಅಲ್ಲ. ಅದು ಬದಲಾವಣೆ ಆಗಬೇಕು ಎಂದರೆ ಶಿಕ್ಷಣ ತಜ್ಞರ ಸಮಿತಿ ರಚನೆಯಾಗಬೇಕು. ಆ ಸಮಿತಿಯಲ್ಲಿ ಯಾವ ಪಠ್ಯ ಬೇಕು, ಯಾವುದ ಬೇಡ ಎಂಬ ತೀರ್ಮಾನ ಆಗಬೇಕು. ನಂತರ ಪಠ್ಯ ಪುಸ್ತಕಗಳ ಬದಲಾವಣೆ ಆಗಬೇಕು. ಆದರೆ ಇದ್ಯಾವುದನ್ನೂ ಮಾಡದ ರಾಜ್ಯ ಸರ್ಕಾರ ಬದಲಾವಣೆ ಮಾಡುವ ಮೂಲಕ ಅಸಹಿಷ್ಣುತೆ ಮೂಡಿಸಿದೆ. ಕೂಡಲೇ ಮೊದಲಿದ್ದ ಪಠ್ಯವನ್ನೇ ಮಕ್ಕಳಿಗೆ ಬೋಧಿಸಬೇಕು ಎಂದು ಒತ್ತಾಯಿಸಿದರು.


ಮುಖ್ಯಮಂತ್ರಿಗಳ ಹತ್ತಿರ ಒಂದು ತಂಡವಿದೆ. ಅದು ಎಡಪಂಥೀಯ ತಂಡ. ಈ ತಂಡದ ಮಾತನ್ನು ಮುಖ್ಯಮಂತ್ರಿ ಕೇಳುತ್ತಾರೆ. ಸಾಹಿತಿಗಳ ಈ ಎಡಪಂಥೀಯ ತಂಡ ಶಿಕ್ಷಣ ತಜ್ಞರಲ್ಲ. ಅವರಿಗೆ ಶಿಕ್ಷಣದ ಬಗ್ಗೆ ಅರಿವೂ ಇಲ್ಲ. ಆದರೆ ಮುಖ್ಯಮಂತ್ರಿಗಳಿಗೆ ಸಲಹೆ ಕೊಡುವುದರಲ್ಲಿ, ಎಡಪಂಥೀಯ ಚಿಂತನೆಗಳನ್ನು ಮಕ್ಕಳಿಗೆ ಮೂಡಿಸುವಲ್ಲಿ ಕೆಲಸ ಮಾಡುತ್ತಾರೆ. ಇವರ ಮಾತನ್ನು ಕೇಳಿದ ಮುಖ್ಯಮಂತ್ರಿ ಮತ್ತು ಶಿಕ್ಷಣ ಮಂತ್ರಿ ಇಂತಹ ಅನಾರೋಗ್ಯದ ನಿರ್ಧಾರ ತೆಗೆದುಕೊಂಡು ಮಕ್ಕಳಿಗೆ ಅನ್ಯಾಯ ಮಾಡುತ್ತಾರೆ ಎಂದು ದೂರಿದರು.


ಹಾಗೆಯೇ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಕೂಡ ತೆಗೆದುಹಾಕಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಲಕ್ಷಾಂತರ ಶಿಕ್ಷಣ ತಜ್ಞರ ಅಭಿಪ್ರಾಯ ಸಂಗ್ರಹಿಸಿ ಖಾಸಗಿ ಶಾಲೆಗಳಷ್ಟೇ ಸರ್ಕಾರಿ ಶಾಲೆಗಳು ಕೂಡ ಬೆಳೆಯಬೇಕು ಎಂಬ ಹಲವು ಸದುದ್ದೇಶದಿಂದ ಎನ್‌ಇಪಿಯನ್ನು ಜಾರಿಗೊಳಿಸಲಾಗಿದೆ. ಆದರೆ ಸರ್ಕಾರ ಇದನ್ನು ತೆಗೆದು ಹಾಕುವತ್ತ ಕೆಲಸ ಮಾಡುತ್ತಿದೆ. ಈ ಬಗ್ಗೆ ನಾವು ಸುಮ್ಮನಿರುವುದಿಲ್ಲ ಜನಜಾಗೃತಿ ಮೂಡಿಸುತ್ತೇವೆ. ಜನರೇ ಇಂತಹ ವಿಷಯಗಳಿಗೆ ಸರ್ಕಾರಕ್ಕೆ ತಕ್ಕ ಬುದ್ಧಿ ಕಲಿಸುತ್ತಾರೆ ಎಂದರು.
ಪತ್ರಿಕಾ ಗೋಷ್ಠಿಯಲ್ಲಿ ಶಾಸಕ ಎಸ್.ಎನ್. ಚನ್ನಬಸಪ್ಪ, ಮೇಯರ್ ಶಿವಕುಮಾರ್, ಚಂದ್ರಶೇಖರ್, ಕೆ.ವಿ.ಅಣ್ಣಪ್ಪ ಇದ್ದರು.

Exit mobile version