Site icon TUNGATARANGA

ಶಿಕ್ಷಕ ವೃತ್ತಿ ಅತ್ಯಂತ ಪವಿತ್ರ ಇಂತಹ ಗೌರವ ಇತರೆ ಯಾವ ಹುದ್ದೆಯಲ್ಲಿದ್ದವರಿಗೂ ಸಿಗುವುದಿಲ್ಲ: ಶಾಸಕ ಗೋಪಾಲಕೃಷ್ಣ ಬೇಳೂರು

ಸಾಗರ : ಶಿಕ್ಷಕ ವೃತ್ತಿ ಅತ್ಯಂತ ಪವಿತ್ರವಾದದ್ದು. ನಿಮ್ಮಿಂದ ಅಕ್ಷರ ಕಲಿತವರು ಸದಾ ನಿಮ್ಮನ್ನು ಸ್ಮರಿಸಿಕೊಳ್ಳುವ ಜೊತೆಗೆ ಸಿಕ್ಕಾಗ ಪಾದ ಮುಟ್ಟಿ ನಮಸ್ಕರಿಸಿ ತಮ್ಮ ಆಧರತೆಯನ್ನು ತೋರಿಸುತ್ತಾರೆ. ಇಂತಹ ಗೌರವ ಇತರೆ ಯಾವ ಹುದ್ದೆಯಲ್ಲಿದ್ದವರಿಗೂ ಸಿಗುವುದಿಲ್ಲ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ತಿಳಿಸಿದರು.


ಇಲ್ಲಿನ ನಗರಸಭೆ ರಂಗಮಂದಿರದಲ್ಲಿ ಮಂಗಳವಾರ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಮತ್ತು ಶಿಕ್ಷಕರ ದಿನಾಚರಣೆ ಅನುಷ್ಟಾನ ಸಮಿತಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಶಿಕ್ಷಕರ ದಿನಾಚರಣೆ ಉದ್ಘಾಟಿಸಿ, ನಿವೃತ್ತ ಮತ್ತು ಸಾಧಕ ಶಿಕ್ಷಕರನ್ನು ಸನ್ಮಾನಿಸಿ ಅವರು ಮಾತನಾಡುತ್ತಿದ್ದರು.


ಶಿಕ್ಷಿಸದೆ ಶಿಕ್ಷಣ ನೀಡಲು ಸಾಧ್ಯವಿಲ್ಲ. ಬದಲಾದ ದಿನಮಾನಗಳಲ್ಲಿ ಮಕ್ಕಳಿಗೆ ಹೊಡೆದರೆ ಪೋಷಕರು ಶಾಲೆಗೆ ಬಂದು ರಗಳೆ ಮಾಡುತ್ತಾರೆ. ನಿಮ್ಮ ಮಕ್ಕಳನ್ನು ತಿದ್ದಿತೀಡಿ ಭವಿಷ್ಯ ರೂಪಿಸುವ ಶಿಕ್ಷಕರ ಬಗ್ಗೆ ಗೌರವ ಇರಬೇಕು. ತಾಲ್ಲೂಕಿನಲ್ಲಿ ಉತ್ತಮ ಶಿಕ್ಷಕರಿದ್ದು ಗುಣಮಟ್ಟದ ಶಿಕ್ಷಣ ನೀಡುವ ಮೂಲಕ ಶೈಕ್ಷಣಿಕ ಕ್ಷೇತ್ರದ ಅಭಿವೃದ್ದಿಗೆ ತಮ್ಮನ್ನು ಸಮರ್ಪಿಸಿಕೊಂಡಿದ್ದಾರೆ. ಇಂದಿಗೂ ಗ್ರಾಮೀಣ ಭಾಗದಲ್ಲಿ ಮೂಡನಂಬಿಕೆಯಂತಹ ಕೆಟ್ಟ ಆಚರಣೆಗಳು ಅಸ್ತಿತ್ವದಲ್ಲಿದ್ದು, ಶಿಕ್ಷಕರು ಮಕ್ಕಳ ಮೂಲಕ ಪೋಷಕರ ಮನಪರಿವರ್ತನೆ ಮಾಡಿ, ಇದರ ಮೂಲೋಚ್ಛಾಟನೆಗೆ ಪ್ರಯತ್ನ ನಡೆಸಬೇಕು ಎಂದು ಕರೆ ನೀಡಿದರು.


ವಿಶೇಷ ಉಪನ್ಯಾಸ ನೀಡಿದ ಶಿವಮೊಗ್ಗ ಸಹ್ಯಾದ್ರಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಡಾ. ಶುಭ ಮರವಂತೆ, ವಿದ್ಯಾರ್ಥಿ ಮತ್ತು ಶಿಕ್ಷಕರ ನಡುವಿನ ಸಂಬಂಧ ಬದಲಾಗುತ್ತಿದೆ. ನಮ್ಮ ಬದುಕಿನ ಪ್ರಜ್ಞೆಯನ್ನು ಬಡಿದೆಬ್ಬಿಸುವ ಸಾರ್ಥಕ ಕೆಲಸ ಮಾಡುತ್ತಿರುವ ಶಿಕ್ಷಕ ಸಮೂಹವನ್ನು ಸೃಷ್ಟಿಸುವ ಕೆಲಸವಾಗಬೇಕು. ಬಂಡವಾಳಶಾಹಿಗಳ ನಿಯಂತ್ರಣಕ್ಕೆ ಶಿಕ್ಷಣ ವ್ಯವಸ್ಥೆ ಜಾರುತ್ತಿರುವುದು ಆತಂಕಕಾರಿ ಸಂಗತಿಯಾಗಿದೆ. ಖಾಸಗಿ ಶಾಲೆಗಳಿಗೆ ಸವಾಲು ಎನ್ನುವ ರೀತಿಯಲ್ಲಿ ಸರ್ಕಾರಿ ಶಾಲೆಗಳ ಶಿಕ್ಷಕರು ಕೆಲಸ ಮಾಡುತ್ತಿದ್ದಾರೆ. ಪ್ರತಿಭಾವಂತ ಶಿಕ್ಷಕರು ಎಲ್ಲಾದರೂ ಇದ್ದಾರೆಂದರೆ ಅದು ಸರ್ಕಾರಿ ಶಾಲೆಯಲ್ಲಿ ಮಾತ್ರ. ಎಲ್ಲ ಕ್ಷೇತ್ರ ಭ್ರಷ್ಟವಾಗುತ್ತಿರುವ ಕಾಲಘಟ್ಟದಲ್ಲಿ ಶಿಕ್ಷಣ ಕ್ಷೇತ್ರ ಮಾತ್ರ ತನ್ನ ಪಾವಿತ್ರ್ಯತೆ ಉಳಿಸಿಕೊಳ್ಳಲು ಪ್ರಯತ್ನ ನಡೆಸುತ್ತಿದೆ. ಸೃಜನಶೀಲತೆ, ಕ್ರಿಯಾತ್ಮಕ ಮನಸ್ಸುಗಳುಳ್ಳ ಮಕ್ಕಳನ್ನು ನಿರ್ಮಿಸುತ್ತಿರುವ ಶಿಕ್ಷಕ ಸಮೂಹ ಸದಾ ಸ್ಮರಣೀಯವಾದದ್ದು ಎಂದರು.


ಇದೇ ಸಂದರ್ಭದಲ್ಲಿ ನಿವೃತ್ತ ಶಿಕ್ಷಕರನ್ನು, ಶೇ. ೧೦೦ ಫಲಿತಾಂಶ ಪಡೆದ ಶಾಲೆಗಳನ್ನು, ಎಸ್.ಎಸ್.ಎಲ್.ಸಿ.ಯಲ್ಲಿ ಅತಿಹೆಚ್ಚು ಅಂಕಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.


ವೇದಿಕೆಯಲ್ಲಿ ತಾಲ್ಲೂಕು ಪಂಚಾಯ್ತಿ ಇ.ಓ. ನಾಗೇಶ್ ಬ್ಯಾಲಾಳ್, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಜಿ.ಪರಮೇಶ್ವರಪ್ಪ, ವಿವಿಧ ಶಿಕ್ಷಕರ ಸಂಘದ ಅಧ್ಯಕ್ಷರುಗಳಾದ ಕೆ.ಜಗನ್ನಾಥ್, ಲಕ್ಷ್ಮಣ್ ಆರ್. ನಾಯ್ಕ್, ಪ್ರೇಮಕುಮಾರಿ, ಮಹಾಬಲೇಶ್ವರ ಜಿ., ಪ್ರಭು ಇ.ಎನ್., ಸುಬ್ರಹ್ಮಣ್ಯ ಟಿ.ಪಿ. ಗುರುರಾಜ್, ಪ್ರಸನ್ನ, ವಿಕ್ಟೋರಿಯಾ ಫಟಾರ್ಡೋ ಇನ್ನಿತರರು ಹಾಜರಿದ್ದರು. ಶಾಲಿನಿ ಮತ್ತು ಸಂಗಡಿಗರು ಪ್ರಾರ್ಥಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಪರುಶುರಾಮಪ್ಪ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಡಾ. ಅನ್ನಪೂರ್ಣ ವಂದಿಸಿದರು. ವೀರಭದ್ರಪ್ಪ ಮತ್ತು ರಮೇಶ್ ನಿರೂಪಿಸಿದರು

Exit mobile version