Site icon TUNGATARANGA

ಶಿವಮೊಗ್ಗ ಟಾಪ್-3 ನ್ಯೂಸ್

ವಿದ್ಯುತ್ ದರ ಏರಿಕೆಗೆ ಜಿಲ್ಲಾ ಕಾಂಗ್ರೆಸ್ ಪ್ರತಿಭಟನೆ

ರಾಜ್ಯ ಸರ್ಕಾರ ವಿದ್ಯುತ್ ದರ ಏರಿಕೆ ಮಾಡಿರುವುದನ್ನು ವಿರೋಧಿಸಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ಇಂದು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪ್ರತಿಭಟನಾ ಧರಣಿ ನಡೆಸಿ ಜಿಲ್ಲಾಡಳಿತದ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.

ಶಿವಮೊಗ್ಗ: ರಾಜ್ಯ ಸರ್ಕಾರ ವಿದ್ಯುತ್ ದರ ಏರಿಕೆ ಮಾಡಿರುವುದನ್ನು ವಿರೋಧಿಸಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ಇಂದು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪ್ರತಿಭಟನಾ ಧರಣಿ ನಡೆಸಿ ಜಿಲ್ಲಾಡಳಿತದ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.
ಒಂದು ವರ್ಷದಿಂದ ಕೊರೋನಾ ಮಹಾಮಾರಿಯ ಹೊಡೆತಕ್ಕೆ ಸಿಲುಕಿ ಇಡೀ ದೇಶವೇ ತಲ್ಲಣಗೊಂಡಿರುತ್ತದೆ. ತೀವ್ರ ಆರ್ಥಿಕ ಕುಸಿತ, ವ್ಯಾಪಕ ನಿರುದ್ಯೋಗ, ರೈತರ ಬವಣೆ, ಮುಚ್ಚುತ್ತಿರುವ ಸಣ್ಣ ಕೈಗಾರಿಕೆಗಳು, ದುಡಿಮೆ ಇಲ್ಲದೇ ಕೈಯಲ್ಲಿ ಕಾಸಿಲ್ಲದೇ ಕಂಗಾಲಾಗಿರುವ ಇಂತಹ ಪರಿಸ್ಥಿತಿಯಲ್ಲಿ ರಾಜ್ಯಸರ್ಕಾರ ಏಕಾಏಕಿ ವಿದ್ಯುತ್ ಏರಿಕೆ ಮಾಡಿರುವುದನ್ನು ಪ್ರತಿಭಟನಾಕಾರರು ತೀವ್ರವಾಗಿ ಖಂಡಿಸಿದರು.
ಇಂತಹ ಪರಿಸ್ಥಿತಿಯಲ್ಲಿ ಸರ್ಕಾರವು ನಿಯಂತ್ರಣದಲ್ಲಿರುವ ಸೇವೆಯಲ್ಲಿ ರಾಜ್ಯದ ಜನತೆಗೆ ರಿಯಾಯಿತಿ ನೀಡುವುದು ಜನಪರ ಸರ್ಕಾರದ ಆಧ್ಯತೆಯಾಗಿದೆ. ಆದರೆ ರಿಯಾಯಿತಿ ನೀಡಬೇಕಾದ ಸರ್ಕಾರವೇ ನ.೧ ರಿಂದ ವಿದ್ಯುತ್ ದರ ಪರಿಷ್ಕರಿಸಿ ಸರಾಸರಿ ಶೇ.೫.೪ರಂತೆ ಅಂದರೆ ಯುನಿಟ್‌ಗೆ ೪೦ ಪೈಸೆಯಂತೆ ಹೆಚ್ಚಳ ಮಾಡಿ ಆದೇಶ ಹೊರಡಿಸಿದೆ ಎಂದು ಆರೋಪಿಸಿದರು.

ರಾಜ್ಯದ ಜನರು ಎಂದೂ ಕಂಡರಿಯದ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿ ಹತಾಶರಾಗಿರುವ ಸಂದರ್ಭದಲ್ಲಿ ಜನ ದಿನನಿತ್ಯದ ಬದುಕಿಗೆ ಅನಿವಾರ್ಯವಾಗಿರುವ ವಿದ್ಯುತ್ ದರವನ್ನು ಏರಿಸಿರುವ ಕ್ರಮವು ಅಕ್ಷ್ಯಮ್ಯ, ಅಧರ್ಮ, ಜನವಿರೋಧಿ ಮತ್ತು ಅಮಾನವೀಯ. ಇದು ರಾಜ್ಯದ ಜನರ ಜೀವನದ ಮೇಲೆ ನಡೆಸಿದ ಕ್ರೂರ ಪ್ರಹಾರವಾಗಿದೆ ಎಂದು ದೂರಿದರು.
ಕಾಂಗ್ರೆಸ್ ಪಕ್ಷವು ಅಧಿಕಾರದಲ್ಲಿದ್ದಾಗ ಜನಪರವಾಗಿದ್ದು, ಜನರ ಆಶೋತ್ತರಗಳಿಗೆ ಸ್ಪಂದಿಸಿ ಅವನ್ನು ನೆರವೇರಿಸುವ ಯೋಜನೆಗಳನ್ನು ಜಾರಿಗೊಳಿಸಿದೆ. ವಿಷಮ ಸ್ಥಿತಿಗಳಲ್ಲಿ ಜನರಿಗೆ ಪರಿಹಾರ ನೀಡಿದೆ. ಈಗ ವಿರೋಧಪಕ್ಷವಾಗಿ ವಿದ್ಯುತ್ ದರ ಏರಿಕೆಯ ಕಠೋರವಾದ ಜನವಿರೋಧಿ ಕೃತ್ಯಕ್ಕೆ ಸರ್ಕಾರ ಮುಂದಾಗಿರುವಾಗ ಅದನ್ನು ಸಹಿಸಿಕೊಂಡು ಸುಮ್ಮನಿರಲು ಸಾಧ್ಯವಿಲ್ಲ.

ಸಂವಿಧಾನದತ್ತ ಅಧಿಕಾರವನ್ನು ಚಲಾಯಿಸಿ ರಾಜ್ಯ ಸರ್ಕಾರ ವಿದ್ಯುತ್ ದರ ಏರಿಕೆ ಆದೇಶವನ್ನು ತಕ್ಷಣದಿಂದಲೇ ಹಿಂಪಡೆಯುವಂತೆ ರಾಜ್ಯಪಾಲರು ಸರ್ಕಾರಕ್ಕೆ ಆದೇಶ ನೀಡುವ ಮೂಲಕ ರಾಜ್ಯದ ಅಸಹಾಯಕ ಜನತೆಗೆ ನ್ಯಾಯ ಒದಗಿಸಿಕೊಡಬೇಕೆಂದು ಮನವಿಯಲ್ಲಿ ಕೋರಲಾಗಿದೆ.
ಪ್ರತಿಭಟನೆಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎಸ್.ಸುಂದರೇಶ್, ಮಾಜಿ ಶಾಸಕ ಕೆ.ಬಿ.ಪ್ರಸನ್ನಕುಮಾರ್, ಜಿ.ಪಂ. ಉಪಾಧ್ಯಕ್ಷೆ ವೇದಾ ವಿಜಯಕುಮಾರ್, ಪಾಲಿಕೆ ಸದಸ್ಯರಾದ ರಮೇಶ್ ಹೆಗ್ಡೆ, ಹೆಚ್.ಸಿ.ಯೋಗೀಶ್, ಯಮುನಾ ರಂಗೇಗೌಡ, ಮೆಹಕ್ ಷರೀಫ್, ಮುಖಂಡರುಗಳಾದ ಇಸ್ಮಾಯಿಲ್ ಖಾನ್, ಎನ್.ರಮೇಶ್, ಎಸ್.ಪಿ.ಶೇಷಾದ್ರಿ, ಎಲ್.ರಾಮೇಗೌಡ, ಸಿ.ಎಸ್.ಚಂದ್ರಭೂಪಾಲ್, ಚಂದನ್, ವಿಶ್ವನಾಥ್ ಕಾಶಿ, ಯು.ಶಿವಾನಂದ್, ಸಿ.ಜೆ.ಮಧುಸೂದನ್, ಹೆಚ್.ಪಿ.ಗಿರೀಶ್, ಕೆ.ರಂಗನಾಥ್ ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು.

ಸ್ಕಾಲರ್‌ಶಿಫ್ ಕೊಡಿ ವಿದ್ಯಾರ್ಥಿ ಆಂದೋಲನ

ಶಿವಮೊಗ್ಗ: ಸ್ಕಾಲರ್‌ಶಿಪ್ ಮಂಜೂರಾತಿಯಲ್ಲಿ ವಿಳಂಬ ಮತ್ತು ಅವ್ಯವಸ್ಥೆ ಹಾಗೂ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ನೀಡುವ ಪಿಹೆಚ್‌ಡಿ, ಎಂಫಿಲ್ ಫೆಲೋಷಿಪ್ ಕಡಿತಗೊಳಿಸಿರುವುದನ್ನು ವಿರೋಧಿಸಿ ಸ್ಕಾಲರ್‌ಶಿಫ್ ಕೊಡಿ ವಿದ್ಯಾರ್ಥಿ ಆಂದೋಲನವನ್ನು ರಾಜ್ಯಾಧ್ಯಂತ ಹಮ್ಮಿಕೊಳ್ಳಲಾಗಿದೆ ಎಂದು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ರಾಜ್ಯ ಸಮಿತಿಯ ಕಾರ್ಯದರ್ಶಿ ಅಶ್ವಾನ್‌ಸಾಧಿಕ್ ತಿಳಿಸಿದರು.
ಅವರು ಇಂದುಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಪ್ರಸಕ್ತ ಶೈಕ್ಷಣಿಕ ವರ್ಷದ ಶಾಲಾ ಕಾಲೇಜುಗಳು ಇನ್ನೇನು ಆರಂಭಗೊಳ್ಳಲಿವೆ. ಕೊರೋನಾದ ಪರಿಣಾಮದಿಂದ ಜನರ ಆರ್ಥಿಕ ಸ್ಥಿತಿಗತಿ ತೀರಾ ಹದಗೆಟ್ಟಿರುವುದರಿಂದ ಪೋಷಕರು ತಮ್ಮ ಮಕ್ಕಳ ಪ್ರವೇಶಾತಿ ಶುಲ್ಕ ಕಟ್ಟಲು ಪರದಾಡುತ್ತಿದ್ದಾರೆ. ಇನ್ನೊಂದೆಡೆ ಶಿಕ್ಷಣ ಸಂಸ್ಥೆಗಳು ಕೂಡ ಪ್ರವೇಶಶುಲ್ಕ ಹೆಚ್ಚಿಸಿರುವುದಲ್ಲದೇ ಒಂದೇ ಕಂತಿನಲ್ಲಿ ಎಲ್ಲ ಶುಲ್ಕವನ್ನು ಪಾವತಿಸಲು ಒತ್ತಾಯಿಸುವ ಮೂಲಕ ಪೋಷಕರಿಗೆ ಗಾಯದ ಮೇಲೆ ಬರೆ ಎಳೆದಿವೆ ಎಂದು ದೂರಿದರು.
ಸರ್ಕಾರವು ಕೂಡ ಈ ಬಗ್ಗೆ ಒಂದು ಮಾರ್ಗಸೂಚಿ ತರಲು ವಿಫಲವಾಗಿರುವುದು ವಿಪರ್ಯಾಸವೇ ಸರಿ. ಸದ್ಯದ ಪರಿಸ್ಥಿತಿಯಲ್ಲಿ ವಿದ್ಯಾರ್ಥಿಗಳು ತಮ್ಮ ಶಿಕ್ಷಣ ಮುಂದುವರೆಸಲು ಸ್ಕಾಲರ್ ಶಿಪ್‌ಗೆ ಅವಲಂಬಿತರಾಗಿದ್ದಾರೆ. ಆದರೆ ಸ್ಕಾಲರ್‌ಶಿಪ್‌ನಲ್ಲಿ ಉಂಟಾಗಿರುವ ಅವ್ಯವಸ್ಥೆಯಿಂದ ರಾಜ್ಯದ ಹಲವು ವಿದ್ಯಾರ್ಥಿಗಳು ಆಂತಕಕ್ಕೊಳಗಾಗಿದ್ದಾರೆ ಎಂದರು.
ಪ್ರತಿ ಬಾರಿ ಸರ್ಕಾರ ಮತ್ತು ಅಲ್ಪಸಂಖ್ಯಾತ ಇಲಾಖೆಯ ಸ್ಕಾಲರ್‌ಶಿಪ್ ವಿಚಾರದಲ್ಲಿ ನಡೆಸಿಕೊಂಡು ಬರುವುದರಲ್ಲಿ ವಿಫಲವಾಗುತ್ತಿದ್ದು, ಇದು ಶಿಕ್ಷಣ ಮತ್ತು ವಿದ್ಯಾರ್ಥಿಗಳ ಮೇಲೆ ಸರ್ಕಾರಕ್ಕಿರುವ ಬೇಜವಾಬ್ದಾರಿತನವಾಗಿದೆ ಎಂದು ಆರೋಪಿಸಿದರು.
ಕಳೆದ ಎರಡು ಮೂರು ವರ್ಷಗಳಿಂದ ಅರ್ಜಿ ಹಾಕಿರುವ ವಿದ್ಯಾರ್ಥಿಗಳ ಅಲ್ಪಸಂಖ್ಯಾತ ಇಲಾಖೆ ಕ್ಷುಲ್ಲಕ ಕಾರಣ ಹೇಳಿ ಅರ್ಜಿಗಳನ್ನು ವಿಲೇವಾರಿ ಮಾಡದೇ ಬಾಕಿ ಇಟ್ಟುಕೊಂಡಿದೆ. ಸ್ಕಾಲರ್‌ಶಿಪ್ ಮಂಜೂರಾದ ಕೆಲವರಿಗೆ ಅವರ ಖಾತೆಗಳಿಗೆ ಹಣ ವರ್ಗಾವಣೆ ಮಾಡಿಲ್ಲ. ಈ ಬಗ್ಗೆ ಸರ್ಕಾರವು ಸಂಪೂರ್ಣ ನಿರ್ಲಕ್ಷ್ಯ ವಹಿಸುತ್ತಿದೆ. ಕನಿಷ್ಟ ಅಲ್ಪಸಂಖ್ಯಾತ ಇಲಾಖೆಗೆ ಪ್ರತ್ಯೇಕ ಸಚಿವರನ್ನು ನೇಮಿಸಿಲ್ಲ. ಅರ್ಜಿ ಹಾಕುವ ಸಂದರ್ಭದಲ್ಲಿ ಉಂಟಾಗುವ ತಾಂತ್ರಿಕ ತೊಂದರೆಗಳನ್ನು ಸರಿಪಡಿಸಿಲ್ಲ. ಇದರಿಂದ ಪ್ರತಿ ವರ್ಷ ವಿದ್ಯಾರ್ಥಿಗಳು ಸ್ಕಾಲರ್‌ಶಿಪ್‌ನಿಂದ ವಂಚಿತರಾಗುತ್ತಿದ್ದಾರೆ ಎಂದು ದೂರಿದರು.
ಅಲ್ಪಸಂಖ್ಯಾತ ಇಲಾಖೆಯಿಂದ ಪಿಹೆಚ್‌ಡಿ ಮತ್ತು ಎಂಫಿಲ್ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಮಾಸಿಕ ೨೫ ಸಾವಿರ ರೂ.ಪ್ರೋತ್ಸಾಹ ಧನ ಹಾಗೂ ೧೦ ಸಾವಿರ ರೂ.ನಿರ್ವಹಣಾ ವೆಚ್ಚ ನೀಡುತ್ತಿತ್ತು. ಆದರೆ ಸರ್ಕಾರ ದಿಢೀರನೇ ಆದೇಶ ಹೊರಡಿಸಿ ಪ್ರೋತ್ಸಾಹಧನವನ್ನು ೧೦ ಸಾವಿರಕ್ಕೆ ಇಳಿಸಿ ಹಾಗೂ ವಾರ್ಷಿಕ ನಿರ್ವಹಣಾ ವೆಚ್ಚವನ್ನು ಹಿಂತೆಗೆದುಕೊಂಡಿದೆ. ಕೂಡಲೇ ಸರ್ಕಾರ ಈ ಆದೇಶ ಹಿಂಪಡೆಯಬೇಕೆಂದು ಒತ್ತಾಯಿಸಿದರು.
ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿಕೊಂಡು ಇದಕ್ಕೆ ಶಾಶ್ವತ ಪರಿಹಾರ ಕಾಣುವ ನಿಟ್ಟಿನಲ್ಲಿ ರಾಜ್ಯ ಸಮಿತಿಯು ರಾಜ್ಯಾದ್ಯಂತ ಸ್ಕಾಲರ್‌ಶಿಪ್ ಕೊಡಿ ಎಂಬ ಘೋಷಣೆಯೊಂದಿಗೆ ಆಂದೋಲನವನ್ನು ಜಿಲ್ಲಾ ಹಾಗೂ ತಾಲ್ಲೂಕು ಕೇಂದ್ರದಲ್ಲಿ ಹಮ್ಮಿಕೊಂಡಿದೆ. ನ.೨೪ ರಂದು ಬೆಂಗಳೂರಿನ ಅಲ್ಪಸಂಖ್ಯಾತ ಇಲಾಖೆ ಎದುರು ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದ್ದು, ಪರಿಹಾರ ಸಿಗದಿದ್ದಲ್ಲಿ ವಿವಿಧ ರೀತಿಯ ಹೋರಾಟ ರೂಪಿಸಲಾಗುವುದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಆಶ್ರಫ್ ದಾವಣಗೆರೆ, ಮುಜಾವಿದ್ ಪಾಷ ಉಪಸ್ಥಿತರಿದ್ದರು.

ನಾಗರಿಕ ಪೊಲೀಸ್ ಹುದ್ದೆಗೆ ಫಿಸಿಕಲ್ ಫಿಟ್‌ನೆಸ್ ಪರೀಕ್ಷೆ

ಶಿವಮೊಗ್ಗ: ಪೊಲೀಸ್ ಹುದ್ದೆ ನೇಮಕಾತಿಯ 2ನೇ ಹಂತದ ದೈಹಿಕ ಪರೀಕ್ಷೆಯು ಇಂದು ನೆಹರೂ ಕ್ರೀಡಾಂಗಣದಲ್ಲಿ ನಡೆಯಿತು.


ಈ ಹಿಂದೆ ನಾಗರಿಕ ಪೊಲೀಸ್ ಪಡೆಯ 50 ಹುದ್ದೆಗಳಿಗಾಗಿ ಲಿಖಿತ ಪರೀಕ್ಷೆ ನಡೆಸಲಾಗಿತ್ತು. ಅದರಲ್ಲಿ ಸುಮಾರು 250ಕ್ಕೂ ಹೆಚ್ಚು ಅಭ್ಯರ್ಥಿಗಳು ತೇರ್ಗಡೆ ಹೊಂದಿದ್ದರು. ಈ ತೇರ್ಗಡೆ ಹೊಂದಿದವರಿಗೆ ಇಂದು ದೈಹಿಕ ಪರೀಕ್ಷೆ ನಡೆಯಿತು.
ಸುಮಾರು 210ಕ್ಕೂ ಹೆಚ್ಚು ಅಭ್ಯರ್ಥಿಗಳು ಭಾಗವಹಿಸಿದ್ದು, 50 ಜನರು ಮಾತ್ರ ಆಯ್ಕೆಯಾಗಲಿದ್ದಾರೆ. ಇದರಲ್ಲಿ 12 ಮಹಿಳಾ ಅಭ್ಯರ್ಥಿಗಳು ಆಯ್ಕೆಯಾಗಲಿದ್ದು, ಜಿಲ್ಲಾ ರಕ್ಷಣಾಧಿಕಾರಿ ಕೆ.ಎಂ.ಶಾಂತರಾಜು ಅವರು ಈ ಪರೀಕ್ಷೆಗಳಿಗೆ ಚಾಲನೆ ನೀಡಿದರು.
ಓಟದ ಸ್ಪರ್ಧೆ, ಫಿಸಿಕಲ್ ಫಿಟ್‌ನೆಸ್ ಸೇರಿದಂತೆ ಹಲವು ಪರೀಕ್ಷೆಗಳು ನಡೆದವು.

Exit mobile version