Site icon TUNGATARANGA

ನಕಲಿ ದಾಖಲೆ ನೀಡಿ ಗೃಹಲಕ್ಷ್ಮೀ ಯೋಜನೆ ದುರ್ಬಳಕೆ ಮಾಡಿಕೊಂಡರೆ ಕ್ರಮ: ಶಾಸಕ ಬೇಳೂರು ಎಚ್ಚರಿಕೆ


ಗೃಹಲಕ್ಷ್ಮೀ ಯೋಜನೆ ದುರ್ಬಳಕೆ ಮಾಡಿಕೊಳ್ಳಲು ನಕಲಿ ದಾಖಲೆ ನೀಡಿ ನೋಂದಾವಣೆ ಮಾಡಿಸಿಕೊಂಡರೆ ಅಂತಹವರ ವಿರುದ್ದ ನಿರ್ಧಾಕ್ಷಿಣ್ಯ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಎಚ್ಚರಿಕೆ ನೀಡಿದ್ದಾರೆ.


ಇಲ್ಲಿನ ನಗರಸಭೆ ರಂಗಮಂದಿರದಲ್ಲಿ ಬುಧವಾರ ರಾಜ್ಯ ಸರ್ಕಾರದ ಮಹತ್ವಾಂಕ್ಷಿ ಯೋಜನೆಯಾಗಿರುವ ಗೃಹ ಲಕ್ಷ್ಮೀ ಯೋಜನೆಯನ್ನು ಗಿಡಕ್ಕೆ ನೀರು ಹಾಕುವ ಮೂಲಕ ಉದ್ಘಾಟಿಸಿ ಅವರು ಮಾತನಾಡುತ್ತಾ, ರಾಜ್ಯ ಸರ್ಕಾರದ ಮಹತ್ವದ ಯೋಜನೆ ಅರ್ಹ ಫಲಾನುಭವಿಗಳಿಗೆ ತಲುಪಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.


ಚುನಾವಣೆಗೂ ಮುನ್ನ ರಾಜ್ಯ ಸರ್ಕಾರ ಘೋಷಣೆ ಮಾಡಿದ್ದ ಐದು ಗ್ಯಾರಂಟಿ ಪೈಕಿ ನಾಲ್ಕು ಗ್ಯಾರಂಟಿ ಅನುಷ್ಟಾನಕ್ಕೆ ತರುವ ಮೂಲಕ ರಾಜ್ಯ ಸರ್ಕಾರ ನುಡಿದಂತೆ ನಡೆದ ಸರ್ಕಾರ ಎನ್ನುವ ಹೆಗ್ಗಳಿಕೆ ಉಳಿಸಿ ಕೊಂಡಿದೆ. ರಾಜ್ಯದ ೧.೧೧ ಕೋಟಿ ಮಹಿಳೆಯರ ಖಾತೆಗೆ (ನೇರವಾಗಿ ಇಂದಿನಿಂದ ೨ಸಾವಿರ ರೂ. ಜಮೆ ಆಗಲಿದೆ. ಗ್ಯಾರಂಟಿ ಅನುಷ್ಟಾನ ಇತಿಹಾಸದಲ್ಲಿಯೆ ದಾಖಲಾಗುವಂತಹ ಕಾರ್ಯಕ್ರiವಾಗಿದ್ದು ದೇಶದಲ್ಲಿ ಮೊದಲು ಎನ್ನುವ ಹೆಮ್ಮೆಯನ್ನು ಹೊಂದಿದೆ ಎಂದರು.


ರಾಜ್ಯದಲ್ಲಿ ೫೧ಸಾವಿರ ಕೋಟಿ ರೂ. ವಿವಿಧ ಯೋಜನೆ ಮೂಲಕ ಫಲಾನುಭವಿಗಳಿಗೆ ತಲುಪುತ್ತಿದೆ. ಅನ್ನಭಾಗ್ಯ, ಉಚಿತ ಬಸ್ ಪ್ರಯಾಣ, ಉಚಿತ ವಿದ್ಯುತ್ ಜೊತೆ ಈಗ ಗೃಹ ಲಕ್ಷ್ಮೀ ಯೋಜನೆ ಜಾರಿಗೆ ಬಂದಿದ್ದು ರಾಜ್ಯದ ಬಹುತೇಕ ಕುಟುಂಬಕ್ಕೆ ಇದು ಆರ್ಥಿಕ ಸ್ವಾವಲಂಬನೆ ಸಾಧಿಸಲು ನೆರವಾಗಿದೆ. ಒಂದಲ್ಲ ಒಂದು ಹಂತದಲ್ಲಿ ಪೂರ್ಣ ಕುಟುಂಬ ಯೋಜನೆಯ ಪ್ರಯೋಜನ ಪಡೆಯುತ್ತಿದೆ. ಗ್ಯಾರಂಟಿ ಯೋಜನೆಗಳನ್ನು ಅನುಷ್ಟಾನಕ್ಕೆ ತರಲು ಪ್ರಯತ್ನಿಸಿದ ಅಧಿಕಾರಿ ವರ್ಗಕ್ಕೆ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು.


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಉಪವಿಭಾಗಾಧಿಕಾರಿ ಪಲ್ಲವಿ ಸಾತೇನಹಳ್ಳಿ, ರಾಜ್ಯದಲ್ಲಿ ೧೦ ಸಾವಿರ ಕೇಂದ್ರದಲ್ಲಿ ಗೃಹಲಕ್ಷ್ಮೀ ಯೋಜನೆ ಅನುಷ್ಟಾನಕ್ಕೆ ಬರುತ್ತಿದೆ. ಮೈಸೂರಿನಲ್ಲಿ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಕಾರ್ಯಕ್ರಮಕ್ಕೆ ಚಾಲನೆ ಸಿಕ್ಕ ತಕ್ಷಣ ಯೋಜನೆ

ನೊಂದಾಯಿಸಿಕೊಂಡವರ ಖಾತೆಗೆ ನೇರ ಹಣ ಜಮೆ ಆಗುತ್ತದೆ. ನಗರವ್ಯಾಪ್ತಿಯಲ್ಲಿ ೭ ಕೇಂದ್ರಗಳಲ್ಲಿ, ಪ್ರತಿ ಗ್ರಾಮ ಪಂಚಾಯ್ತಿಯಲ್ಲೂ ಏಕಕಾಲಕ್ಕೆ ಯೋಜನೆ ಅನುಷ್ಟಾನಗೊಳ್ಳುತ್ತಿದೆ. ಗೃಹಲಕ್ಷ್ಮೀ ಯೋಜನೆ ಮಹಿಳಾ ಸಬಲೀಕರಣಕ್ಕೆ ಪೂರಕವಾಗಿದೆ ಎಂದರು.


ವಿಧಾನ ಪರಿಷತ್ ಮಾಜಿ ಸದಸ್ಯೆ ಪ್ರಫುಲ್ಲಾ ಮಧುಕರ್, ನಗರಸಭೆ ಸದಸ್ಯರಾದ ಗಣಪತಿ ಮಂಡಗಳಲೆ, ಮಧುಮಾಲತಿ, ಎನ್.ಲಲಿತಮ್ಮ, ಸಬೀನಾ ತನ್ವೀರ್, ಸೈಯದ್ ಜಾಕೀರ್, ನಾಗರತ್ನ, ತಹಶೀಲ್ದಾರ್ ಚಂದ್ರಶೇಖರ ನಾಯ್ಕ ಇನ್ನಿತರರು ಹಾಜರಿದ್ದರು.

Exit mobile version