ಪ್ರತಿಭೆ ಎಲ್ಲಾ ಮಕ್ಕಳಲ್ಲಿ ಅಡಗಿರುತ್ತದೆ. ಅದನ್ನು ಹೊರ ತೆಗೆಯುವುದಕ್ಕಾಗಿಯೇ ಪ್ರತಿಭಾ ಕಾರಂಜಿ ಯಂತಹ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ ಎಂದು ಶ್ರೀ ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಪ್ರಧಾನ ಕಾರ್ಯದರ್ಶಿಗಳಾದ ಪೂಜ್ಯ ಶ್ರೀ ಶ್ರೀ ಪ್ರಸನ್ನನಾಥ ಸ್ವಾಮೀಜಿ ಹೇಳಿದರು.
ನಗರದ ಗುರುಪುರದ ಬಿಜಿಎಸ್ ಶಾಲೆಯಲ್ಲಿ ನಡೆದ ಸಿದ್ದೇಶ್ವರ ನಗರದ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದ ಅವರು, ನಮ್ಮ ಭಾರತೀಯ ಸಂಸ್ಕೃತಿ, ಕಲೆಗೆ ಹೆಚ್ಚು ಮಹತ್ವ ನೀಡಿದೆ,ನಮ್ಮ ಗ್ರಾಮೀಣ ಜನಪದ ಕಲೆಗಳ ಸೊಗಡು ತುಂಬಾ ಅಭೂತ ಪೂರ್ವವಾದದು. ಪ್ರತಿಯೊಂದು ಮಗುವಿನಲ್ಲಿಯೂ ಪ್ರತಿಭೆ ಎನ್ನುವುದು ಬೂದಿ ಮುಚ್ಚಿದ ಕೆಂಡದಂತಿರುತ್ತದೆ ಎಂದರು.
ಪ್ರತಿಯೊಬ್ಬ ವಿದ್ಯಾರ್ಥಿಯು ಆತ್ಮ ಸಾಕ್ಷಿಯಾಗಿ ತಮ್ಮಲ್ಲಿರುವ ಕಲೆಯನ್ನು ಪ್ರದರ್ಶಿಸಬೇಕು ಎಂದ ಅವರು, ನಿಮ್ಮ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುವುದು ಶಿಕ್ಷಕರ ಹಾಗೂ ಪೋಷಕರ ಆದ್ಯ ಕರ್ತವ್ಯವಾಗಿದೆ. ಈ ಹಿನ್ನೆಲೆಯಲ್ಲಿ ವಿಭಾಗ, ವಲಯ,ತಾಲ್ಲೂಕು, ಜಿಲ್ಲೆ ಹಾಗೂ ರಾಜ್ಯ ಮಟ್ಟದ ಪ್ರತಿಭಾ ಕಾರಂಜಿಯನ್ನು ನಡೆಸಲಾಗುತ್ತಿದೆ ಎಂದು ಹೇಳಿದರು.
ಕೌಶಲ್ಯವನ್ನು ಹೊರತೆಗೆಯುವುದಕ್ಕಾಗಿ ಈ ಶಿಕ್ಷಣ ಇಲಾಖೆ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸಿಕೊಂಡು ಬರುತ್ತಿದೆ. ಇದರ ಸದುಪಯೋಗವನ್ನು ವಿದ್ಯಾರ್ಥಿಗಳಾದ ನೀವುಗಳು ಪಡೆದುಕೊಂಡು ಬರುತ್ತಿದೆ ಎಂದ ಅವರು, ಹಿಂಜರಿಕೆ ನಿಮ್ಮ ಶತ್ರು, ಅದನ್ನು ತೊಡೆದು ಹಾಕಿ ಧೈರ್ಯದಿಂದ ಹಾಗೂ ಆತ್ಮವಿಶ್ವಾಸದಿಂದ ನಿಮ್ಮಲ್ಲಿರುವ ಪ್ರತಿಭೆ ಹಾಗೂ ಕೌಶಲ್ಯವನ್ನು ಪ್ರದರ್ಶಿಸಿ ಎಂದು ಕರೆ ನೀಡಿದರು.
ಸಮಾರಂಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ನಾಗರಾಜ ಪಿ. ಮೇಯರ್ ಶಿವಕುಮರ್ ಎಸ್.ಪಾಲಿಕೆ ಮಾಜಿ ಸದಸ್ಯ ಡಿ. ಮೋಹನ್‌ರೆಡ್ಡಿ, , ಬಿ. ಆರ್. ಸಿ.ಮೋಹನ್, ಸಿ.ಆರ್.ಪಿ.ಧನಂಜಯ, ಸಂಸ್ಥೆಯ ನಿರ್ದೇಶಕರಾದ ಶ್ರೀ ಕೊಳಿಗೆ ವಾಸಪ್ಪಗೌಡ ಬಿಜಿಎಸ್ ಶಾಲಾ ಮತ್ತು ಕಾಲೇಜಿನ ಪ್ರಾಂಶುಪಾಲರಾದ ಸುರೇಶ್ ಎಸ್. ಹೆಚ್. ಶಿಕ್ಷಕರು ಮತ್ತು ಪೋಷಕರು ಮುಂತಾದವರಿದ್ದರು.