Site icon TUNGATARANGA

ಕ್ರೀಡಾ ದಿನಾಚರಣೆ ಉದ್ಘಾಟಿಸಿದ ಶಾಸಕ ಎಸ್.ಎನ್ ಚನ್ನಬಸಪ್ಪ(ಚೆನ್ನಿ) ಆಸಕ್ತಿ ಶ್ರದ್ದೆ ಮತ್ತು ಪರಿಶ್ರಮದಿಂದ ಸಾಧನೆ ಸಾಧ್ಯ


ಶಿವಮೊಗ್ಗ, ಆಗಸ್ಟ್ 29,
      ಮಾತು ಕಡಿಮೆಯಾಗಿ ನಮ್ಮ ಸಾಧನೆಗಳು ಮಾತನಾಡಬೇಕು. ಇಂತಹ ಸಾಧನೆಗೆ ಹಾಕಿ ಮಾಂತ್ರಿಕ ಮೇಜರ್ ಧ್ಯಾನ್‍ಚಂದ್‍ರವರೇ ಸಾಕ್ಷಿ ಎಂದು ಶಾಸಕರಾದ ಎಸ್.ಎನ್ ಚನ್ನಬಸಪ್ಪ ನುಡಿದರು.


     ಮೇಜರ್ ಧ್ಯಾನ್‍ಚಂದ್ ಹುಟ್ಟುಹಬ್ಬದ ಪ್ರಯುಕ್ತ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಇಂದು gನೆಹರೂ ಕ್ರೀಡಾಂಗಣದಲ್ಲಿ ಪುರುಷರು ಹಾಗೂ ಮಹಿಳೆಯರಿಗೆ ಏರ್ಪಡಿಸಲಾಗಿದ್ದ ರಾಷ್ಟ್ರೀಯ ಕ್ರೀಡಾ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.


     ಹಾಕಿಗೆ ಮತ್ತೊಂದು ಹೆಸರೇ ಧ್ಯಾನ್‍ಚಂದ್ ಅವರು. ಹಾಕಿ ಕ್ರೀಡೆ ಮೇಲಿದ್ದ ಅವರ ಪ್ರೀತಿ, ಶ್ರದ್ದೆ ಅವರು ಹಾಕಿ ಮಾಂತ್ರಿಕರೆನ್ನಿಸಿಕೊಳ್ಳಲು ಕಾರಣ. ತಾವೆಲ್ಲರೂ ತಮ್ಮ ಆಸಕ್ತದಾಯಕ ಕ್ರೀಡೆ ಅಥವಾ ಯಾವುದೇ ಸಾಧನೆ ಬಗ್ಗೆ ಹೆಚ್ಚಿನ ಶ್ರದ್ದೆ-ಪರಿಶ್ರಮ ವಹಿಸಿ ಮುಂದೆ ಬರಬೇಕು.
     ಆಸಕ್ತಿ, ಶ್ರದ್ದೆ ಮತ್ತು ಪರಿಶ್ರಮದಿಂದ ಸಾಧನೆ ಸಾಧ್ಯ. ದೇಶಕ್ಕಾಗಿ ಆಟವಾಡಬೇಕು. ದೇಶಕ್ಕಾಗಿ ಸಮರ್ಪಣೆ ಮಾಡಲು ಏನನ್ನಾದರೂ ಸಾಧಿಸುತ್ತೇನೆ ಎಂದುಕೊಂಡಾಗ ಯಶಸ್ಸು ಸಾಧ್ಯವಾಗುತ್ತದೆ.

ಕ್ರೀಡೆಗೆ ಹೆಚ್ಚಿನ ಶಕ್ತಿ ಇದೆ. ಖೇಲೋ ಇಂಡಿಯಾ ಎನ್ನುವ ಪರಿಕಲ್ಪನೆಯಡಿ ನಮ್ಮ ಪ್ರಧಾನಿಗಳು ಕ್ರೀಡೆಗಳನ್ನು ಪ್ರೋತ್ಸಾಹಿಸುತ್ತಿದ್ದಾರೆ. ಗ್ರಾಮೀಣ ಭಾಗದ ಕ್ರೀಡಾಪಟುಗಳಿಗೂ ಅವಕಾಶ ಸಿಗಬೇಕೆಂಬ ಉದ್ದೇಶದಿಂದ ಕ್ರೀಡಾಕೂಟಗಳನ್ನು ಆಯೋಜಿಸಲಾಗುತ್ತಿದೆ. ಸರ್ಕಾರದ ಸೌಲಭ್ಯಗಳನ್ನು ಬಳಸಿಕೊಳ್ಳಬೇಕು. ಅವಕಾಶಗಳನ್ನು ಬಳಸಿಕೊಂಡು ಸಾಧನೆ ತೋರಿ, ಭಾರತದ ಕೀರ್ತಿ ಪತಾಕೆಯನ್ನು ಎತ್ತಿ ಹಿಡಿಬೇಕು ಎಂದರು.


     ಕ್ರೀಡಾ ತರಬೇತುದಾರ ದೇಸಾಯಿ ಮಾತನಾಡಿ, ಸ್ಥಳೀಯ ಪ್ರತಿಭೆಗಳನ್ನು ಗುರುತಿಸುವ ಮತ್ತು ಅವರನ್ನು ವಿವಿಧ ಪಂದ್ಯಾವಳಿಗಳಿಗೆ ತಯಾರು ಮಾಡುವ ಕೆಲಸ ಆಗಬೇಕೆಂದರು.


 ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಮಂಜುನಾಥಸ್ವಾಮಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಕ್ರೀಡಾ ತರಬೇತುದಾರ ಬಾಳಪ್ಪ ಮಾನೆ ಉಪಸ್ಥಿತರಿದ್ದರು.


     ವಿವಿಧ ಸ್ಪರ್ಧೆಗಳಿಗೆ 250 ಕ್ಕೂ ಹೆಚ್ಚು ಸ್ಪರ್ಧಿಗಳು ನೊಂದಾಯಿಸಿಕೊಂಡಿದ್ದರು. ಕ್ರೀಡಾಕೂಟದಲ್ಲಿ ಕ್ರೀಡಾ ರಸಪ್ರಶ್ನೆ ಸ್ಪರ್ಧೆ, ಲಗೋರಿ (ಪುರುಷರಿಗೆ ಮಾತ್ರ), ಬಾಂಬ್ ಇನ್ ದಿ ಸಿಟಿ (ಮಹಿಳೆಯರಿಗೆ ಮಾತ್ರ), ಹಗ್ಗ ಜಗ್ಗಾಟ ಸ್ಪರ್ಧೆ (ಪುರುಷ ಮತ್ತು ಮಹಿಳೆಯರಿಗೆ ಪ್ರತ್ಯೇಕ), ನಡಿಗೆ ಸ್ಪರ್ಧೆ (ಪುರುಷರಿಗೆ 4 ಕಿ.ಮೀ., ಮಹಿಳೆಯರಿಗೆ 2 ಕಿ.ಮೀ), ಹಾಕಿ ಸ್ಪರ್ಧೆ(ಪುರುಷ ಮತ್ತು ಮಹಿಳೆಯರಿಗೆ ಪ್ರತ್ಯೇಕ) ಸ್ಪರ್ಧೆಗಳು ನಡೆದವು.

Exit mobile version