Site icon TUNGATARANGA

ಜಿಲ್ಲೆಯಲ್ಲಿ ಕುಡಿಯುವ ನೀರಿನ ಗುಣಮಟ್ಟ ಪರೀಕ್ಷಿಸಲು: ಸ್ನೇಹಲ್ ಸುಧಾಕರ್ ಲೋಖಂಡೆ ಸೂಚನೆ

ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಜನರಿಗೆ ಒದಗಿಸುತ್ತಿರುವ ಶುದ್ಧ ಕುಡಿಯುವ ನೀರಿನ ಗುಣಮಟ್ಟವನ್ನು ಪರೀಕ್ಷಿಸಿ, ಪೂರೈಸಲು ಕ್ರಮ ಕೈಗೊಳ್ಳುವಂತೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸ್ನೇಹಲ್ ಸುಧಾಕರ್ ಲೋಖಂಡೆ ಅವರು ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆಯ ಅಭಿಯಂತರರಿಗೆ ಸೂಚಿಸಿದರು.


ಅವರು ಇಂದು ತಮ್ಮ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ವ್ಯಾಪ್ತಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದಡಿ ಜನವಸತಿಗಳಿಗೆ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಹಾಗೂ ಜಿಲ್ಲಾ ನೀರು ಮತ್ತು ನೈರ್ಮಲ್ಯ ಸಮಿತಿ ರಚಿಸುವ ಸಲುವಾಗಿ ಏರ್ಪಡಿಸಲಾಗಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಪ್ರಸ್ತುತ ಈಗಾಗಲೇ ಸರ್ಕಾರದಿಂದ ಅನುಮೋದನೆಗೊಂಡಿರುವ ಕಾಮಗಾರಿಗಳನ್ನು ನಿಗಧಿತ ಅವಧಿಯಲ್ಲಿ ಪೂರ್ಣಗೊಳಿಸುವಂತೆ ಅವರು ಸೂಚಿಸಿದರು.


ಬರುವ ಬೇಸಿಗೆಯಲ್ಲಿ ಗ್ರಾಮೀಣ ಜನರ ಬೇಡಿಕೆಗನುಸಾರವಾಗಿ ಕುಡಿಯುವ ನೀರನ್ನು ಒದಗಿಸಬೇಕಾದ ಅನಿವಾರ್ಯತೆ ಎದುರಾಗಬಹುದಾದ ಸಂದರ್ಭಗಳಲ್ಲಿ ನೀರನ್ನು ಪೂರೈಸುವ ಅಗತ್ಯಗಳಿಗೆ ಹಣಕಾಸನ್ನು ಕಾಯ್ದಿರಿಸಿಕೊಂಡು ಯೋಜನೆಗಳನ್ನು ರೂಪಿಸಿ, ಸಮಿತಿ ಸಭೆಯಲ್ಲಿ ಅನುಮೋದನೆ ಪಡೆದು, ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತರುವಂತೆ ಅವರು ಸಲಹೆ ನೀಡಿದರು.


ಯಾವುದೇ ಬೇಡಿಕೆಗಳಿಲ್ಲದೆ ಅನಗತ್ಯವಾಗಿ ಕೊಳವೆಬಾವಿ ಕೊರೆಯುವುದು, ನೀರಿನ ಕೊಳವೆಗಳನ್ನು ಅಳವಡಿಸುವುದು ಮತ್ತಿತರ ವಿಷಯಗಳಿಗೆ ಹಣ ವ್ಯಯ ಮಾಡದಂತೆ ಸೂಚಿಸಿದ ಅವರು, ಸ್ಥಳೀಯ ಜನರ ಅಭಿಪ್ರಾಯ ಸಂಗ್ರಹಿಸಿ, ಅಗತ್ಯತೆಗನುಸಾರವಾಗಿ ಯೋಜನೆಗಳನ್ನು ಕೈಗೊಳ್ಳುವಂತೆ ಅವರು ಸೂಚಿಸಿದರು.
ಪ್ರತಿವರ್ಷ ಕೆಲವು ಆಯ್ದ ಗ್ರಾಮೀಣ ಪ್ರದೇಶಗಳಲ್ಲಿ ಡಿಸೆಂಬರ್ ನಂತರದ ಮಾಹೆಗಳಲ್ಲಿ ನೀರಿನ ಕೊರತೆ ಉಲ್ಬಣಗೊಳ್ಳುತ್ತದೆ. ಅಂತಹ ಸಂದರ್ಭಗಳಲ್ಲಿ ಸಾರ್ವಜನಿಕರಿಂದ ದೂರುಗಳು ಬಾರದಂತೆ ಗಮನಹರಿಸಬೇಕು. ಬೇಸಿಗೆಯನ್ನು ಸಕಾಲದಲ್ಲಿ ಶುದ್ಧ ಕುಡಿಯುವ ನೀರನ್ನು ಒದಗಿಸಲು ಬದ್ಧರಾಗಿರುವಂತೆ ಅವರು ಸಲಹೆ ನೀಡಿದರು.


ಶಿವಮೊಗ್ಗ ಸಮೀಪದ ಬುಳ್ಳಾಪುರದಲ್ಲಿ ಸರಬರಾಜಾಗುತ್ತಿರುವ ನೀರು ಕಲುಷಿತವಾಗಿದೆ ಅಲ್ಲದೆ ಪ್ಲೋರೈಡ್‌ಯುಕ್ತವಾಗಿದೆ ಮಾತ್ರವಲ್ಲ ದುರ್ವಾಸನೆಯಿಂದ ಕೂಡಿದೆ. ಇಂತಹ ನೀರು ಕುಡಿಯಲು ಯೋಗ್ಯವಲ್ಲದ ಕಾರಣ ಅದನ್ನು ನಿಯಮಾನುಸಾರ ಸಂಸ್ಕರಿಸಿ, ಶುದ್ಧ ನೀರನ್ನು ಒದಗಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿ ಜಿಲ್ಲೆಯ ಅಂತರಗಂಗೆ, ತೊಗರ್ಸಿ, ಆವಿನಹಳ್ಳಿ ಮತ್ತು ಹುಂಚದಕಟ್ಟೆ ಗ್ರಾಮಗಳಲ್ಲಿ ಮಲತ್ಯಾಜ್ಯ ನಿರ್ವಹಣಾ ಘಟಕಗಳನ್ನು ಸ್ಥಾಪಿಸಲು ಕ್ರಿಯಾಯೋಜನೆ ರೂಪಿಸಿ, ಅಂದಾಜುಪಟ್ಟಿಯನ್ನು ಸರ್ಕಾರಕ್ಕೆ ಸಲ್ಲಿಸುವಂತೆ ಹಾಗೂ ಜಿಲ್ಲೆಯ ತೊಗರ್ಸಿ, ಕೋಣಂದೂರು, ಹೆಚ್ಚೆ, ರಿಪ್ಪನ್‌ಪೇಟೆ ಮತ್ತು ಹರಮಘಟ್ಟ ಗ್ರಾಮ ಪಂಚಾಯಿತಿಗಳಲ್ಲಿ ಸಮಗ್ರ ತ್ಯಾಜ್ಯ ನಿರ್ವಹಣಾ ಘಟಕಗಳನ್ನು ಆರಂಭಿಸಲು ಕ್ರಿಯಾಯೋಜನೆ ರೂಪಿಸಿ, ಪಂ.ರಾ.ಇಂ. ಸಾಗರ ವಿಭಾಗಕ್ಕೆ ಸಲ್ಲಿಸುವಂತೆ ಅವರು ಸಲಹೆ ನೀಡಿದರು.


ಕೇಂದ್ರ ಪುರಸ್ಕೃತ ಗೋಭರ್ದನ್ ಘಟಕ ಅನುಷ್ಟಾನಗೊಳಿಸಲು ಎರಡು ಯೋಜನೆಗಳಿಗೆ ಅನುಮೋದನೆಯಾಗಿದ್ದು, ಒಂದು ಘಟಕಕ್ಕೆ ೫೦ಲಕ್ಷ ರೂ. ಬಿಡುಗಡೆಯಾಗಿದೆ. ಇನ್ನೂ ಎರಡು ಘಟಕಗಳಿಗೆ ಅನುಮೋದನೆ ಪಡೆಯಬೇಕಾಗಿದ್ದು, ಆ ಪೈಕಿ ಬೀರನಕೆರೆಯ ಮಠದಲ್ಲಿ ಹಸುಗಳಿರುವ ಬಗ್ಗೆ ಮಾಹಿತಿ ಇದೆ. ಆದರೆ, ಶಿಕಾರಿಪುರ ತಾಲೂಕಿನ ಕಡೇನಂದಿಹಳ್ಳಿಯ ಮಠದಲ್ಲಿ ಗೋವುಗಳಲ್ಲಿದಿರುವುದು ಕಂಡುಬಂದಿದೆ. ಆದ್ದರಿಂದ ಅಭಿಯಂತರ ಸಂಗಪ್ಪ ಅವರು ಸೇರಿದಂತೆ ಒಂದು ತಂಡದ ಸದಸ್ಯರು ಸ್ಥಳಕ್ಕೆ ಖುದ್ದು ಭೇಟಿ ನೀಡಿ ಪರಿಶೀಲಿಸಿ, ಯೋಜನೆಯ ಅನುಷ್ಠಾನಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಅವರು ಸೂಚಿಸಿದರು.
ಪ್ರಸಕ್ತ ಸಾಲಿನಲ್ಲಿ ಜಿಲ್ಲೆಯಲ್ಲಿ ೭೫೦೦ ವೈಯಕ್ತಿಕ ಶೌಚಾಲಯ ನಿರ್ಮಾಣದ ಗುರಿ ಹೊಂದಲಾಗಿದ್ದು, ಈವರೆಗೆ ಸಿಟಿಜೆನ್ ಪೋರ್ಟಲ್ ಮೂಲಕ ಇಂಡೀಕರಿಸಲಾದ ೬೩೨೬ ಫಲಾನುಭವಿಗಳ ಪ್ರಸ್ತಾವನೆಗೆ ಸರ್ಕಾರದ ಅನುಮೋದನೆ ದೊರೆತಿದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಸೊರಬ ಮತ್ತು ಶಿಕಾರಿಪುರ ತಾಲೂಕಿನಲ್ಲಿ ಜನಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸುವಂತೆ ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿಗಳಿಗೆ ಸೂಚಿಸಿದರು.


ತುಂಗಾನದಿಯ ನೀರಿನಲ್ಲಿ ಅಲ್ಯುಮಿನಿಯಮ್ ಅಂಶ ನಿಗಧಿತ ಪ್ರಮಾಣಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿರುವುದನ್ನು ಕೆಲವು ದೈನಿಕಗಳಲ್ಲಿ ಬಿತ್ತರಗೊಂಡಿದೆ. ಆದ್ದರಿಂದ ಜಿಲ್ಲೆಯಲ್ಲಿ ಪ್ರಸ್ತುತ ಪರೀಕ್ಷಿಸಲಾಗುತ್ತಿರುವ ನೀರಿನಲ್ಲಿಯೂ ಅಲ್ಯುಮಿನಿಯಂ ಅಂಶ ಇರುವ ಬಗ್ಗೆ ಪರೀಕ್ಷಿಸಬೇಕು. ಅದಕ್ಕಾಗಿ ಅಗತ್ಯವಿರುವ ರಸಾಯಿನಿಕ ಹಾಗೂ ಯಂತ್ರಗಳನ್ನು ಖರೀದಿಸುವಂತೆ ಸೂಚಿಸಿದರು.
ನೀರಿನಲ್ಲಿ ಫ್ಲೋರೈಡ್‌ನ ಅಂಶ ಹೆಚ್ಚಳದಿಂದ ಅನೀಮಿಯದಂತಹ ರೋಗಗಳು ಉಲ್ಬಣಗೊಳ್ಳುವ ಸಾದ್ಯತೆ ಹೆಚ್ಚಾಗಿದೆ. ಆದ್ದರಿಂದ ಶುದ್ಧೀಕರಿಸಿ, ಯೋಗ್ಯವಾದ ನೀರನ್ನು ಜನರು ಬಳಸಬೇಕು. – ಡಾ|| ನಾಗರಾಜ್‌ನಾಯ್ಕ್, ಆರ್.ಸಿ.ಹೆಚ್.
ಸಭೆಯಲ್ಲಿ ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆಯ ಅಭಿಯಂತರ ರಾಜೇಂದ್ರ ಪ್ರಸಾದ್, ಶ್ರೀಮತಿ ಜಯಲಕ್ಷ್ಮಮ್ಮ, ಶ್ರೀಮತಿ ಪೂರ್ಣಿಮಾ, ಸಂಗಪ್ಪ, ಮತ್ತಿತರರು ಉಪಸ್ಥಿತರಿದ್ದರು.

Exit mobile version