Site icon TUNGATARANGA

ಆ.25 ರಿಂದ ನೇತ್ರದಾನ ಜಾಗೃತಿ ಶಂಕರ ಕಣ್ಣಿನ ಆಸ್ಪತ್ರೆ ವತಿಯಿಂದ ಶಿವಮೊಗ್ಗ ಪತ್ರಕರ್ತರಿಗೆ ನೇತ್ರ ತಪಾಸಣೆ

ನೇತ್ರ ದಾನದ ಮಹತ್ವದ ಬಗ್ಗೆ ಶಂಕರ ಕಣ್ಣಿನ ಆಸ್ಪತ್ರೆಯು ನೇತ್ರದಾನ ಜಾಗೃತಿ ಪಾಕ್ಷಿಕ ಮಾಸದ ಅಂಗವಾಗಿ ಹಲವು ಜಾಗೃತಿ ಕಾರ್ಯಕ್ರಮ ಹಮ್ಮಿಕೊಂ ಡಿದೆ ಎಂದು ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಮಹೇಶ್ ಹೇಳಿದರು.


ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಆ.೨೫ರಿಂದ ಸೆ.೮ರವರೆಗೆ ನೇತ್ರದಾನ ಜಾಗೃತಿ ಪಾಕ್ಷಿಕ ಮಾಸಾಚರಣೆಯನ್ನು ಆಚರಿಸಲಾಗುತ್ತಿದೆ. ಇದರ ಅಂಗವಾಗಿಶಂಕರ ಕಣ್ಣಿನ ಆಸ್ಪತ್ರೆ ವತಿಯಿಂದ ಆ.೨೫ರಂದು ಕಪ್ಪು ರಿಬ್ಬನ್ ಧರಿಸಿ ಮಹಾವೀರ ಸರ್ಕಲ್ ನಿಂದ ಗೋಪಿ ಸರ್ಕಲ್‌ವರೆಗೆ ಜಾಗೃತಿ ಜಾತಾ ಆಯೋಜಿಸಲಾಗಿದೆ. ಹಾಗೆಯೇ ಆ.೨೭ರಂದು ಬಸ್ ನಿಲ್ದಾಣದ ಬಳಿ ಬೂತ್ ಅನ್ನು ಸ್ಥಾಪಿಸಿ ಕಣ್ಣು ದಾನ ಮಾಡುವವರು ತಮ್ಮ ಒಪ್ಪಿಗೆ ಪತ್ರವನ್ನು ಬೂತ್‌ನಲ್ಲಿರುವ ಪೆಟ್ಟಿಗೆಗೆ ಹಾಕಬಹುದಾಗಿದೆ. ಹಾಗೆಯೇ ಸೆ. ೩ರಂದು ಬೆ. ೮ಕ್ಕೆ ಜಾಗೃತಿ ಸೈಕಲ್ ಜಾಥಾ ಆಯೋಜಿಸಲಾಗಿದೆ ಮತ್ತು ಆಯ್ದ ಶಾಲಾ ಮಕ್ಕಳಿಗೆ ಕಣ್ಣಿನ ಚಿತ್ರ ಬರೆದು ಧ್ಯೇಯ ವಾಕ್ಯ ಸೂಚಿಸಲು ಸ್ಪರ್ಧೆ ಏರ್ಪಡಿಸಲಾಗಿದೆ. ವಿಜೇತ ಮಕ್ಕಳಿಗೆ ಬಹುಮಾನ ನೀಡಲಾಗುವುದು ಎಂದರು.


ಆಸ್ಪತ್ರೆಯ ವೈದ್ಯ ಡಾ. ಮಲ್ಲಿಕಾರ್ಜುನ ಮಾತನಾಡಿ, ಜಗತ್ತಿನಲ್ಲಿಯೇ ಕರಿ ಗುಡ್ಡೆಯಿಂದ ದೃಷ್ಟಿ ಹೀನತೆಗೆ ಒಳಗಾಗಿರುವವರು ಶೇ.೫ರಷ್ಟಿದ್ದಾರೆ. ಭಾರತದಲ್ಲಿ ಸುಮಾರು ೧.೨ ಲಕ್ಷಕ್ಕೂ ಹೆಚ್ಚು ಜನರು ಈ ದೃಷ್ಟಿದೋಷ ಹೊಂದಿದ್ದಾರೆ . ಇದನ್ನು ಸರಿಪಡಿಸಲು ಕಣ್ಣಿನ ದಾನ ಮಾಡಬೇಕು. ಆದರೆ ದಾನ ಮಾಡುವವರ ಸಂಖ್ಯೆ ಕಡಿಮೆ ಇರುವುದರಿಂದ ಆ ಬಗ್ಗೆ ಜಾಗೃತಿ ಮೂಡಿಸಬೇಕಾಗಿದೆ. ನಮ್ಮ ಆಸ್ಪತ್ರೆಯು ಸಹ ನೇತ್ರದಾನದ ಬಗ್ಗೆ ಅರಿವು ಮೂಡಿಸುತ್ತಿದೆ ಎಂದರು.


ಶಂಕರ ಕಣ್ಣಿನ ಆಸ್ಪತ್ರೆಯಲ್ಲಿ ಇದುವರೆಗೆ ೧೮,೬೦೦ ಕಣ್ಣಿನ ದಾನದ ಬಗ್ಗೆ ಒಪ್ಪಿಗೆ ಪತ್ರ ನೀಡಿದ್ದಾರೆ. ಇದುವರೆಗೂ ೨.೫೦೦ ಮಂದಿ ನೇತ್ರದಾನ ಮಾಡಿದ್ದಾರೆ. ಸಾವಿರಕ್ಕೂ ಹೆಚ್ಚು ಅಂಧರಿಗೆ ಕಣ್ಣನ್ನು ಅಳವಡಿಸಲಾಗಿದೆ ಎಂದರು.


ಕಣ್ಣಿಗಾಗಿ ಕಾಯುತ್ತಿರುವ ಅಂಧರು ತುಂಬಾ ಜನರಿದ್ದಾರೆ. ಆದರೆ ದಾನ ಮಾಡುವವರು ಮಾತ್ರ ಕಡಿಮೆ ಇದ್ದಾರೆ. ದಾನ ಮಾಡದಿರಲು ಮೂಢ ನಂಬಿಕೆಗಳೂ ಕಾರಣವಾಗಿದೆ. ಆದ್ದರಿಂದ ಈ ಬಗ್ಗೆ ಜಾಗೃತಿ ಮೂಡಿಸುವುದು ಅವಶ್ಯಕ ಎಂದರು.


ಪತ್ರಿಕಾ ಗೋಷ್ಠಿಯಲ್ಲಿ ಡಾ. ಗಾಯತ್ರಿ ಶಾಂತಾರಾಮ್ ಇದ್ದರು.
ಪತ್ರಿಕಾಗೋಷ್ಠಿಯ ನಂತರ ಪತ್ರಕರ್ತರಿಗೆ ಉಚಿತವಾಗಿ ನೇತ್ರ ಪರೀಕ್ಷೆ ಮಾಡಲಾಯಿತು.

Exit mobile version