ಶಿವಮೊಗ್ಗ: ಸೌಜನ್ಯ ಪ್ರಕರಣವನ್ನು ಮರು ತನಿಖೆಗೆ ಆಗ್ರಹಿಸಿ ಬೆಳ್ತಂಗಡಿಯಿಂದ ಬೆಂಗಳೂರಿನ ವಿಧಾನಸೌಧದವರೆಗೆ ಕೆಆರ್‌ಎಸ್ ಪಕ್ಷದ ವತಿಯಿಂದ ಆ.೨೩ರಿಂದ ಸೆ.೮ರ ವರೆಗೆ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಪಕ್ಷದ ರಾಜ್ಯ ಕಾರ್ಯದರ್ಶಿ ಮಂಜುನಾಥ್ ಎಸ್. ಹೇಳಿದರು.
ಅವರು ಇಂದು ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಧರ್ಮಸ್ಥಳದಲ್ಲಿ ೨೦೧೨ರ ಅಕ್ಟೋಬರ್ ೯ರಂದು ಸೌಜನ್ಯ ಎಂಬ ಯುವತಿ ಹತ್ಯೆಯಾಗಿತ್ತು. ಆರೋಪಿಯನ್ನು ಕೂಡ ಬಂಧಿಸಲಾಗಿತ್ತು. ಆದರೆ ಯಾವುದೇ ಸಾಕ್ಷ್ಯಾಧಾರಗಳಿಲ್ಲ ಎಂದು ನ್ಯಾಯಾಲಯ ಆರೋಪಿಯನ್ನು ಬಿಡುಗಡೆ ಮಾಡಿತ್ತು.
ಹಾಗಾದರೆ ನಿಜವಾದ ಆರೋಪಿ ಯಾರು ಎಂಬುದು ಇಡೀ ರಾಜ್ಯದ ಪ್ರಶ್ನೆಯಾಗಿದೆ. ಆದ್ದರಿಂದ ಈ ಪ್ರಕರಣವನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ ಮರು ತನಿಖೆ ನಡೆಸಲು ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಇತ್ತೀಚೆಗೆ ಅತ್ಯಾಚಾರ ಮತ್ತು ದೌರ್ಜನ್ಯದಂತಹ ಪ್ರಕರಣಗಳು ಹೆಚ್ಚುತ್ತಿವೆ. ಒಂದು ಅಂಕಿ-ಅಂಶದ ಪ್ರಕಾರ ಕಳೆದ ೧೦ ವರ್ಷಗಳಲ್ಲಿ ಇಡೀ ರಾಜ್ಯದಲ್ಲಿ ವಿವಿಧ ಪ್ರಕರಣಗಳಿಗೆ ಸಂಬಂಧಿಸಿದಂತೆ ೪೩,೪೩೮ ಪ್ರಕರಣಗಳು ದಾಖಲೆಯಾಗಿವೆ. ಇದರಲ್ಲಿ ಶಿಕ್ಷೆ ಆಗಿರುವುದು ಕೇವಲ ೫೨೪ ಪ್ರಕರಣಕ್ಕೆ ಮಾತ್ರ. ಮಹಿಳೆಯರ ಮೇಲೆ ಹೀಗೆ ನಿರಂತರವಾಗಿ ದೌರ್ಜನ್ಯ ನಡೆಯುತ್ತಿರುವುದು ಮತ್ತು ಪ್ರಕರಣ್ಕಕೆ ಸಂಬಂಧಿಸಿದಂತೆ ಬಡವರಿಗೆ, ದುರ್ಬಲರಿಗೆ ನ್ಯಾಯ ಸಿಗುತ್ತಿಲ್ಲ ಎಂದರು.
ಕೆಆರ್‌ಎಸ್ ಪಕ್ಷ ಸೌಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಮಾರು ೧೪ ದಿನಗಳ ಕಾಲ ೩೩೦ಕಿಮೀ. ಪಾದಯಾತ್ರೆ ಮಾಡಲಿದೆ. ಬೆಳ್ತಂಗಡಿಯಿಂದ ಆ.೨೬ರಂದು ಹೊರಟು ಧರ್ಮಸ್ಥಳದಲ್ಲಿ ಅಪರಾಧಿಗಳಿಗೆ ಶಿಕ್ಷೆಯಾಗಬೇಕೆಂದು ಆಗ್ರಹಿಸಿ ಪೂಜೆ ಸಲ್ಲಿಸಿ ನಂತರ ಚಿಕ್ಕಮಗಳೂರು, ಹಾಸನದ ಮೂಲಕ ಬೆಂಗಳೂರು ತಲುಪಿ ಸೆ.೮ರಂದು ವಿಧಾನಸೌಧ ತಲುಪಲಿದೆ ಎಂದರು.
ರಾಜ್ಯದಲ್ಲಿ ಮಹಿಳೆಯರು ಮತ್ತು ಮಕ್ಕಳ ಮೇಲೆ ನಡೆಯುತ್ತಿರುವ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ನ್ಯಾಯಾಲಯ ಸ್ಥಾಪಿಸಬೇಕು. ಸಂತ್ರಸ್ತರಿಗೆ ಸರ್ಕಾರ ನೆರವು ನೀಡಬೇಕು. ರಾಜ್ಯದಲ್ಲಿ ಸೌಜನ್ಯ ಮಹಿಳಾ ಸುರಕ್ಷಾ ಆಯೋಗ ಸ್ಥಾಪಿಸಬೇಕು. ಧರ್ಮಸ್ಥಳ ಸುತ್ತಮುತ್ತ ನಡೆದಿರುವ ಆತ್ಮಹತ್ಯೆ ಪ್ರಕರಣ ಸೇರಿದಂತೆ ಅಸಹಜ ಸಾವಿನ ಬಗ್ಗೆ ನ್ಯಾಯಾಂಗ ತನಿಖೆ ಆಗಬೇಕು ಎಂದು ಒತ್ತಾಯಿಸಿದರು.
ಪತ್ರಿಕಾ ಗೋಷ್ಠಿಯಲ್ಲಿ ಜಿಲ್ಲಾ ಅಧ್ಯಕ್ಷ ಎಸ್.ಕೆ. ಪ್ರಭು, ಪ್ರಧಾನ ಕಾರ್ಯದರ್ಶಿ ಶಬರೀಶ್ ಇದ್ದರು.