Site icon TUNGATARANGA

ಜಿಲ್ಲೆಯಾದ್ಯಂತ ಸಡಗರ ಸಂಭ್ರಮದಿಂದ ನಾಗರ ಪಂಚಮಿ ಹಬ್ಬ ಆಚರಣೆ

ಶಿವಮೊಗ್ಗ, ಆ.೨೧:
ಶ್ರಾವಣ ಮಾಸದ ಐದನೇ ದಿನಕ್ಕೆ ಬರುವ ಮೊದಲ ಹಬ್ಬವಾದ ಅದರಲ್ಲೂ ಮಹಿಳೆಯರ ಪ್ರಮುಖ ಹಬ್ಬ ನಾಗರ ಪಂಚಮಿಯನ್ನು ನಗರ ಸೇರಿದಂತೆ ಜಿಲ್ಲೆಯಾದ್ಯಂತ ಇಂದು ಸಂಭ್ರಮದಿಂದ ಆಚರಿಸಲಾಯಿತು.


ಮಹಿಳೆಯರು ಹೊಸ ಬಟ್ಟೆ, ಬಳೆ ತೊಟ್ಟು ಹುತ್ತಕ್ಕೆ ಹಾಲೆರೆದರು. ಮನೆಯವರೆಲ್ಲರೂ ಸೇರಿ ವಿಶೇಷ ಪೂಜೆ ಸಲ್ಲಿಸಿ, ನಾಗ ದೇವರಿಗೆ ನಮಿಸಿದರು. ಈ ಮೂಲಕ ಶ್ರಧ್ಧಾ- ಭಕ್ತಿಯ ಹಬ್ಬ ಆಚರಣೆ ನಡೆಯಿತು.


ಹಬ್ಬದ ನಿಮಿತ್ತ ಬೆಳಗ್ಗೆಯಿಂದಲೇ ಮಹಿಳೆಯರು, ಯುವತಿಯರು, ಹಿರಿಯರು ಮತ್ತು ಕಿರಿಯರು ತಂಡೋಪ ತಂಡವಾಗಿ ಆಯಾ ಬಡಾವಣೆಗಳ ನಾಗ ದೇವರ ಮಂದಿರ ಹಾಗೂ ಹುತ್ತಗಳ ತೆರಳಿ ಹಾಲೆರೆದರು.


ನಂತರ ಹುತ್ತದ ಬಳಿ ತೆರಳಿ ಕುಂಕುಮ- ಅರಶಿಣ ಹಚ್ಚಿದರಲ್ಲದೆ, ಕಂಕಣ, ಹೋಳಿಗೆ ತುಪ್ಪ, ಕಡಬು, ಅರಳು, ಹೂ, ಕಾ, ಕರ್ಪೂರ ಹಾಗೂ ಕೊಬ್ಬರಿಯನ್ನು ನಾಗ ದೇವತೆಗೆ ಅರ್ಪಿಸಿದರು.


ಗ್ರಾಮೀಣ ಭಾಗದಲ್ಲಿ ಸಂಜೆ ವೇಳೆ ಮಹಿಳೆಯರು, ಯುವತಿಯರು ಒಂದೆಡೆ ಸೇರಿ ಹಾಡುಗಳನ್ನು ಹಾಡಿ ಸಂಭ್ರಮಿಸಿದರು. ಯುವತಿಯರು, ಮಕ್ಕಳು ಜೋಕಾಲಿ ಆಡಿ ನಲಿದರು. ಒಟ್ಟಿನಲ್ಲಿ ಪಂಚಮಿ ಹಬ್ಬವನ್ನು ಸಂಭ್ರಮದಿಂದ ಆಚರಣೆ ಮಾಡಲಾಯಿತು.


ನಾಗರಪಂಚಮಿಯಂದು ಹುತ್ತಕ್ಕೆ ಹಾಲೆರೆಯುವುದು ಸಂಪ್ರದಾಯವಾಗಿದೆ. ನಾಗರ ಪಂಚಮಿ ನಾಡಿಗೆ ದೊಡ್ಡದು ಎನ್ನುವ ಮಾತಿದ್ದು, ಈ ಹಬ್ಬವನ್ನು ವಿಶೇಷವಾಗಿ ಮಹಿಳೆಯರ ಹಬ್ಬ ಎಂದೇ ಬಿಂಬಿಸಲಾಗಿದೆ.

Exit mobile version