ಶಿವಮೊಗ್ಗ: ಶಿಕ್ಷಣ ಮಾನವ ಕುಲದ ಉದ್ಧಾರಕ್ಕಾಗಿ ಇರಬೇಕು ಎಂದು ಕುವೆಂಪು ವಿವಿ ಕುಲಸಚಿವ ಪ್ರೊ. ಪಿ. ಕಣ್ಣನ್ ಹೇಳಿದರು.
ಅವರು ಇಂದು ಸಹ್ಯಾದ್ರಿ ಕಲಾ ಕಾಲೇಜಿನ ಆವರಣದಲ್ಲಿ ಆಯೋಜಿಸಿದ್ದ ವಿದ್ಯಾರ್ಥಿ ಸಾಂಸ್ಕೃತಿಕ ವೇದಿಕೆ ಹಾಗೂ ಕ್ರೀಡಾ ವಿಭಾಗಗಳ ಸಮಾರೋಪ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಶಿಕ್ಷಣ ಸಂಸ್ಥೆಗಳು ವಿಶ್ವವಿದ್ಯಾಲಯಗಳು ಶಿಕ್ಷಣಕ್ಕೆ ಸ್ಪಷ್ಟತೆಯ ರೂಪು ಕೊಡಬೇಕು. ವೈಜ್ಞಾನಿಕ ಚಿಂತನೆಗಳನ್ನು ಬೆಳೆಸಬೇಕು. ಕಾಲೇಜುಗಳು ಕೂಡ ವಿದ್ಯಾರ್ಥಿಗಳಿಗೆ ಸಾಂಸ್ಕೃತಿಕ, ಕ್ರೀಡೆ, ಸಾಹಿತ್ಯದ ಬಗ್ಗೆ ಒಲವು ಮೂಡಿಸಬೇಕು. ಕ್ರೀಡೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಎಲ್ಲರನ್ನೂ ಒಟ್ಟುಗೂಡಿಸುತ್ತವೆ. ಸಮಾನತೆ, ಸಾಮರಸ್ಯಗಳನ್ನು ಬೆಸೆಯುತ್ತವೆ ಎಂದರು
.
ಅಧ್ಯಕ್ಷತೆ ವಹಿಸಿದ್ದ ಸಹ್ಯಾದ್ರಿ ಕಲಾ ಕಾಲೇಜಿನ ಪ್ರಾಂಶುಪಾಲ ಡಾ.ಕೆ.ಬಿ. ಧನಂಜಯ ಮಾತನಾಡಿ, ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳು ಶಿಕ್ಷಣದ ಒಂದು ಭಾಗವೇ ಆಗಿವೆ. ಸಹ್ಯಾದ್ರಿ ಕಾಲೇಜ್ ಕೂಡ ಪುಸ್ತಕಗಳ ಆಚೆಯ ಬದುಕನ್ನು ರೂಪಿಸಲು ಪ್ರಯತ್ನಿಸುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಕರ್ನಾಟಕ ಕೇಸರಿ ಪ್ರಶಸ್ತಿ ವಿಜೇತ ಕುಸ್ತಿಪಟು ಕಾರ್ತಿಕ್ ಕಾಟೆ, ಚಲನಚಿತ್ರ ನಟ ನವೀನ್ ಶಂಕರ್, ನಟಿ ಅರ್ಚನಾ ಜೋಯ್ಸ್, ಪ್ರಾಂಶುಪಾಲರಾದ ಡಾ. ಎನ್. ರಾಜೇಶ್ವರಿ, ಡಾ.ಎಂ.ಕೆ. ವೀಣಾ, ವಿದ್ಯಾರ್ಥಿ ಕ್ಷೇಮಾಧಿಕಾರಿ ಡಾ.ಕೆ. ಚಂದ್ರಪ್ಪ, ಕ್ರೀಡಾ ವಿಭಾಗದ ಸಂಚಾಲಕ ಡಾ.ಕೆ.ಎನ್. ಮಂಜುನಾಥ್, ಸಿರಾಜ್ ಅಹ್ಮದ್, ಎಂ. ಪೂರ್ವಾಚಾರ್, ಲವ ಜಿ.ಆರ್., ಕೃಪಲಾನಿ, ಮೊದಲಾದವರಿದ್ದರು.
ಇದೇ ಸಂದರ್ಭದಲ್ಲಿ ಸಹ್ಯಾದ್ರಿ ಕಾಲೇಜಿನ ವಿವಿಧ ವಿಭಾಗಗಳಲ್ಲಿ ರ್ಯಾಂಕ್ ಪಡೆದ, ವಿವಿ ಮಟ್ಟದಲ್ಲಿ ವಿವಿಧ ಕ್ರೀಡೆಗಳಲ್ಲಿ ಪ್ರಶಸ್ತಿ ಪಡೆದ ಹಾಗೂ ಕಂಸಾಳೆ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.