Site icon TUNGATARANGA

ಜೆ.ಎನ್.ಎನ್.ಸಿ.ಇ : ವಿಶ್ವ ಜೈವಿಕ ಇಂಧನ ದಿನಾಚರಣೆ|ಹಸಿರು ಶಕ್ತಿಗಾಗಿ ಜೈವಿಕ ಇಂಧನದ ಬಳಕೆ ಹೆಚ್ಚಾಗಬೇಕಿದೆ: ಪರಿಸರ ತಜ್ಞ ಡಾ.ಎಲ್.ಕೆ.ಶ್ರೀಪತಿ ಅಭಿಪ್ರಾಯ

ಶಿವಮೊಗ್ಗ : ನಮಗೆ ಶುದ್ಧ ಗಾಳಿ ನೀರು ನೀಡುವ ಈ ಹಸಿರಿನ ಶಕ್ತಿಗಾಗಿ ಜೈವಿಕ ಇಂಧನದ ಬಳಕೆ ಹೆಚ್ಚಾಗಬೇಕಿದೆ ಎಂದು ಖ್ಯಾತ ಪರಿಸರ ತಜ್ಞ ಡಾ.ಎಲ್.ಕೆ.ಶ್ರೀಪತಿ ಅಭಿಪ್ರಾಯಪಟ್ಟರು.

ನಗರದ ಜೆ.ಎನ್.ಎನ್ ಎಂಜಿನಿಯರಿಂಗ್ ಕಾಲೇಜಿನ ವತಿಯಿಂದ ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿ, ಜೈವಿಕ ಇಂಧನ ಅಭಿವೃದ್ಧಿ ಜಿಲ್ಲಾ ಉಸ್ತುವಾರಿ ಸಮಿತಿ, ಜಿಲ್ಲಾ ಜೈವಿಕ ಇಂಧನ ಸಂಶೋಧನಾ, ಮಾಹಿತಿ ಮತ್ತು ಪ್ರಾತ್ಯಕ್ಷಿಕೆ ಕೇಂದ್ರದ ಸಹಯೋಗದಲ್ಲಿ ಗುರುವಾರ ಏರ್ಪಡಿಸಿದ್ದ ವಿಶ್ವ ಜೈವಿಕ ಇಂಧನ ದಿನಾಚರಣೆ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.

ಹದಿನೇಳು ವರ್ಷದ ಹುಡುಗಿ ಗ್ರೇಟಾ ತನ್ಬರ್ಗ್ ಭವಿಷ್ಯಕ್ಕಾಗಿ ಶುಕ್ರವಾರ ಎಂಬ ಅಂತರಾಷ್ಟ್ರೀಯ ಸಂಸ್ಥೆಯೊಂದನ್ನು ಸ್ಥಾಪಿಸಿದರು. ಈ ಸಂಸ್ಥೆಯು ನಮ್ಮ ಪರಿಸರವನ್ನು ಶಕ್ತಿಗೊಳಿಸುವ ಕಾರ್ಯಚಟುವಟಿಕೆಗಳನ್ನು ವಿಶ್ವವ್ಯಾಪ್ತಿ ನಡೆಸುತ್ತಿದ್ದು, ಗ್ರೇಟಾ ತನ್ಬರ್ಗ್ ನೊಬಲ್ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಅಂತಹ ಪರಿಸರ ಪೂರಕ ಸಾಧನೆಗಳನ್ನು ಎಲ್ಲಾ ಯುವ ಸಮೂಹ ಮಾಡಬಹುದಾಗಿದೆ. 

ಮಳೆ ದುರ್ಬಲಗೊಳ್ಳುವುದರ ಮೂಲಕ ದೈನಂದಿನ ಜೀವನದ ಮೇಲೆ ಅತಿಯಾದ ಪರಿಣಾಮ ಬೀರಿದೆ. ಇನ್ನೂರು  ವರ್ಷಗಳ ಹವಾಮಾನದ ದಾಖಲೆಗಳನ್ನು ನೋಡಿದಾಗ ಅತಿ ಹೆಚ್ಚು ಬಿಸಿಲು ಉಂಟಾಗಿರುವುದು ಇತ್ತೀಚಿನ ಇಪತ್ತು ವರ್ಷಗಳಲ್ಲಿ. ಇಂತಹ ಪರಿಸ್ಥಿತಿಗಳ ಅರಿವೇ ಇಲ್ಲದಂತೆ ಮೊಬೈಲ್ ಹಿಡಿದ ಯುವ ಸಮೂಹ ತಮಗೆ ಸಂಬಂಧವಿಲ್ಲ ಎಂಬಂತೆ ವರ್ತಿಸುತ್ತಿದ್ದಾರೆ. 

ಗಿಡಗಳ ಪ್ರಾಮುಖ್ಯತೆಯನ್ನು ನಮ್ಮ ಹಿರಿಯರು ಸಾವಿರಾರು ವರ್ಷಗಳ ಹಿಂದೆಯೇ ಅರಿವು ಪಡೆದಿದ್ದರು. ಒಂದು ಲೀಟರ್ ಪೆಟ್ರೋಲ್ ಅಥವಾ ಡೀಸೆಲ್ ಮೂರು ಕೆಜಿಯಷ್ಟು ಕಾರ್ಬನ್ ಡೈಯಾಕ್ಸೈಡ್ ನೀಡುತ್ತದೆ. ಕೃತಕ ಅಭಿವೃದ್ಧಿಯ ಹಿಂದೆ ಬೀಳುವ ಮೂಲಕ ನಮ್ಮ ನಿರ್ನಾಮವನ್ನು ನಾವೇ ಮಾಡಿಕೊಳ್ಳುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಅತಿಯಾದ ನೀರಿನ ಅಭಾವ ಉಂಟಾಗಲಿದೆ.

ಜೈವಿಕ ಇಂಧನದ ಅಭಿವೃದ್ಧಿ ಮತ್ತು ಬಳಕೆ ಹೆಚ್ಚಾಗಬೇಕಾದ ತುರ್ತಿದೆ. ಸಸ್ಯ ಮತ್ತು ಸಸ್ಯ ಮೂಲ ಸಂಪನ್ಮೂಲಗಳಿಂದ ತಯಾರಿಸಿದ ಪರ್ಯಾಯ ಇಂಧನಗಳಲ್ಲಿ ಜೈವಿಕ ಇಂಧನ ಪರಿಸರ ಶಕ್ತಿಯಾಗಿ ನಿಲ್ಲುತ್ತಿದೆ. ನಾವೂ ಬದುಕಿರುವುದು ಆಧುನಿಕ ಉಪಕರಣ ಸೌಲಭ್ಯಗಳಿಂದಲ್ಲ, ಕೃಷಿಯ ಫಲವತ್ತತೆ ಮತ್ತು ನೀರಿನಿಂದ. ಅಂತಹ ಅತ್ಯಮೂಲ್ಯ ಫಲವತ್ತತೆಯನ್ನು ಉಳಿಸಿಕೊಳ್ಳಲು ಜೈವಿಕ ಇಂಧನದತ್ತ ಯುವ ಸಮೂಹ ಮುಖ ಮಾಡಿ ಎಂದು ಹೇಳಿದರು.

———————————————————————

ಇಪ್ಪತ್ತು ಸಾವಿರ ಲೀಟರ್ ಜೈವಿಕ ಇಂಧನ ಉತ್ಪಾದನೆ :

ಶಿವಮೊಗ್ಗ ಜಿಲ್ಲಾ ಜೈವಿಕ ಇಂಧನ ಪ್ರಾತ್ಯಕ್ಷತೆ ಹಾಗೂ ಮಾಹಿತಿ ಕೇಂದ್ರವು ಕಳೆದ ಹತ್ತು ವರ್ಷಗಳಲ್ಲಿ ಹೊಂಗೆ ಬೀಜಗಳು ಹಾಗೂ ಕರಿದ ಎಣ್ಣೆಗಳಿಂದ ಸುಮಾರು ಇಪ್ಪತ್ತು ಸಾವಿರಕ್ಕು ಹೆಚ್ಚು ಜೈವಿಕ ಇಂಧನ ಉತ್ಪಾದಿಸಲಾಗಿದೆ ಎಂದು ಎಲೆಕ್ಟ್ರಿಕಲ್ ವಿಭಾದ ಮುಖ್ಯಸ್ಥರಾದ ಡಾ.ಹೆಚ್.ಬಿ.ಸುರೇಶ್ ಹೇಳಿದರು.

———————————————————————

ಕಾರ್ಯಕ್ರಮ ಉದ್ಘಾಟಿಸಿ ಜಿಲ್ಲಾ ಉಪ ಅರಣ್ಯ ಸಂರಕ್ಷಣಾಧಿಕಾರಿ ಟಿ.ಎ.ರತ್ನಪ್ರಭಾ ಮಾತನಾಡಿ, ಪರಿಸರ ಪೂರಕವಾಗಿ ಬದುಕಬೇಕಿದೆ. ಪರಿಸರಕ್ಕೆ ಪೂರಕವಾದ ನವೀಕರಿಸಬಹುದಾದ ಇಂಧನಗಳ ಬಳಕೆ ಹೆಚ್ಚಾಗಲಿ ಎಂದು ಆಶಿಸಿದರು.

ಜೆ.ಎನ್.ಎನ್ ಎಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲರಾದ ಡಾ.ಪಿ.ಮಂಜುನಾಥ ಅಧ್ಯಕ್ಷತೆ ವಹಿಸಿದ್ದರು. ಶಿವಮೊಗ್ಗ ಜಿಲ್ಲಾ ಜೈವಿಕ ಇಂಧನ ಪ್ರಾತ್ಯಕ್ಷತೆ ಹಾಗೂ ಮಾಹಿತಿ ಕೇಂದ್ರದ ಸಂಚಾಲಕರಾದ ಚೇತನ್.ಎಸ್.ಜೆ, ಡಾ.ರವಿಕುಮಾರ್.ಬಿ.ಎಸ್, ಲೋಕೇಶ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Exit mobile version