ಶಿವಮೊಗ್ಗ:ಭಾರತದ ಸ್ವಾತಂತ್ರ್ಯ ಚಳುವಳಿಯಲ್ಲಿ ಕ್ವಿಟ್ ಇಂಡಿಯಾ ಚಳುವಳಿ ಅತ್ಯಂತ ಪ್ರಮುಖ ಘಟ್ಟವಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎಸ್. ಸುಂದರೇಶ್ ಹೇಳಿದರು.
ಅವರು ಇಂದು ಕ್ವಿಟ್ ಇಂಡಿಯಾ ದಿನಾಚರಣೆ ಅಂಗವಾಗಿ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಗಾಂಧೀಜಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡುತ್ತಿದ್ದರು.
ಕ್ವಿಟ್ ಇಂಡಿಯಾ ಚಳುವಳಿ ಸ್ವಾತಂತ್ರ್ಯ ಭಾರತದಲ್ಲಿಯೂ ಕೂಡ ನೆನಪಿಡುವ ದಿನವಾಗಿದೆ. ಇದನ್ನು ನೆನಪಿಸಿಕೊಳ್ಳುವಾಗ ಅದಕ್ಕಾಗಿ ಹೋರಾಡಿದವರನ್ನು ಸ್ಮರಣೆ ಮಾಡಿಕೊಳ್ಳಬೇಕು. ಆದರೆ ನಾವು ಇಂದು ಹೋರಾಟಗಾರರನ್ನೇ ಮರೆಯುತ್ತಿದ್ದೇವೆ ಎಂದರು.
ಕ್ವಿಟ್ ಇಂಡಿಯಾ ಚಳುವಳಿಯಿಂದ ಪ್ರೇರಿತವಾದ ಶಿಕಾರಿಪುರ ತಾಲೂಕಿನ ಈಸೂರು ಗ್ರಾಮ ಮೊಟ್ಟಮೊದಲ ಬಾರಿಗೆ ಸ್ವತಂತ್ರ ಗ್ರಾಮವೆಂದು ಘೋಷಿಸಲಾಯಿತು. ಈ ಸಂದರ್ಭದಲ್ಲಿ ಬ್ರಿಟಿಷರು ಮತ್ತು ಗ್ರಾಮಸ್ಥರ ನಡುವೆ ಹೋರಾಟವೇ ಆಯಿತು. ಅನೇಕರನ್ನು ಜೈಲಿಗೆ ತಳ್ಳಲಾಯಿತು ಮತ್ತು ಮೂವರನ್ನು ಗಲ್ಲಿಗೇರಿಸಲಾಯಿತು. ಸ್ವಾಂತಂತ್ರ್ಯದ ಇತಿಹಾಸದಲ್ಲಿಯೇ ಈಸೂರು ಮಹತ್ವದ ಸ್ಥಾನ ಪಡೆದಿದೆ ಎಂದರು.
ಬಿಜೆಪಿಯ ಕೆಲವರು ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಗಾಂಧೀಜಿಯವರನ್ನೇ ಮೂಲೆಗೆ ತಳ್ಳಲು ಹೊರಟಿದ್ದಾರೆ. ಕಳೆದ 9 ವರ್ಷದ ಬಿಜೆಪಿ ಆಡಳಿತದಲ್ಲಿ ಬಿಜೆಪಿ ನಾಯಕರು ದ್ವೇಷದ ರಾಜಕಾರಣ ಮಾಡಿದ್ದೇ ಹೆಚ್ಚು. ಗಾಂಧಿ ಕುಟುಂಬಕ್ಕೂ ಕಿರುಕುಳ ನೀಡಿದರು. ಬ್ರಿಟಿಷ್‍ಸರ್ಕಾರಕ್ಕೂ ಈಗಿನ ಕೇಂದ್ರ ಸರ್ಕಾರಕ್ಕೂ ಸಾಮ್ಯತೆ ಇದೆ ಎಂದರು.
ಕಾರ್ಯಕ್ರಮದಲ್ಲಿ ಪ್ರಮುಖರಾದ ಆರ್. ಪ್ರಸನ್ನಕುಮಾರ್, ಚಂದ್ರಭೂಪಾಲ್, ಹೆಚ್.ಎಂ. ಚಂದ್ರಶೇಖರ್, ಇಸ್ಮಾಯಿಲ್ ಖಾನ್, ಖಲಿಂ ಪಾಶಾ, ರಮೇಶ್ ಇಕ್ಕೇರಿ, ಸೌಗಂಧಿಕ, ನಾಜೀಮಾ, ಪ್ರೇಮಾ ಎನ್. ಶೆಟ್ಟಿ, ಸ್ಟೆಲ್ಲಾ ಮಾರ್ಟಿನ್, ಚಂದ್ರಕಲಾ, ಶಮೀಮ್ ಭಾನು, ಶೋಭಾ, ಅಂತೋಣಿ ವಿಲ್ಸನ್, ಅರ್ಚನಾ ಸೇರಿದಂತೆ ಹಲವರಿದ್ದರು.