ಶಿವಮೊಗ್ಗ : ತಾಂತ್ರಿಕತೆಯ ಪಾಠ ಪ್ರವಚನ ನಡೆಯುತ್ತಿದ್ದ ಜಾಗ ಸಂಪೂರ್ಣ ಸಾಂಪ್ರದಾಯಿಕವಾಗಿತ್ತು. ಪಂಚೆ, ಧೋತಿ ತೊಟ್ಟ ವಿದ್ಯಾರ್ಥಿಗಳು, ಸೀರೆ ಹೂವು ಮುಡಿದ ವಿದ್ಯಾರ್ಥಿನಿಯರು ಸಾಂಪ್ರದಾಯಿಕ ಉಡುಗೆ ತೊಟ್ಟು ಸಂಭ್ರಮಿಸುತ್ತಿದ್ದರು.
ಇಂತಹ ಸಂಭ್ರಮ ಕಂಡುಬಂದದ್ದು ನಗರದ ಎಸ್.ಆರ್.ನಾಗಪ್ಪಶೆಟ್ಟಿ ಸ್ಮಾರಕ ರಾಷ್ಟ್ರೀಯ ಅನ್ವಯಿಕ ವಿಜ್ಞಾನ ಕಾಲೇಜಿನಲ್ಲಿ. ಕಾಲೇಜಿನ ಆವರಣದಲ್ಲಿ ಮಂಗಳವಾರ ಏರ್ಪಡಿಸಿದ್ದ ಸಾಂಪ್ರದಾಯಿಕ ದಿನ (ಟ್ರೆಡಿಷನಲ್ ಡೇ) ಕಾರ್ಯಕ್ರಮದಲ್ಲಿ ಬಿಸಿಎ, ಬಿಎಸ್ಸಿ ವಿದ್ಯಾರ್ಥಿಗಳು ವಿವಿಧ ಬಗೆಯ ವೇಷಭೂಷಣಗಳೊಂದಿಗೆ ಮಿಂಚಿದರು.
ಕೇರಳ, ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕ ಹಾಗೂ ಕೊಡಗಿನ ಸಾಂಪ್ರದಾಯಿಕ ಉಡುಗೆಯಲ್ಲಿ ವಿದ್ಯಾರ್ಥಿಗಳು ಮಿಂಚಿದರು. ಹುಡುಗಿಯರು ಓಣಂ ಸೀರೆ, ಲಂಬಾಣಿ ಉಡುಗೆ, ಇಳಕಲ್ ಸೀರೆ, ಹಣೆಮೇಲೆ ಬೊಟ್ಟು, ಮೈಸೂರು ಮಲ್ಲಿಗೆ ಮುಡಿಯಲ್ಲಿಟ್ಟು ದೇಸಿ ಮಹಿಳೆಯರಾಗಿ ಕಂಗೊಳಿಸಿದರು, ಹುಡುಗರು ಜುಬ್ಬಾ, ಪೈಜಾಮ್, ಧೋತಿ, ಮುಂಡಾಸು, ಕತ್ತಿಗೆ ಸ್ಕಾರ್ಪ್, ಲುಂಗಿ, ರೇಷ್ಮೆ ಅಂಗಿ ಧರಿಸಿ ಗಮನ ಸೆಳೆದರು
.
ಇದೇ ವೇಳೆ ಸರಸ್ವತಿ ಪೂಜೆಯಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರು, ಗೋಡೆಯ ಮೇಲೆ ಹಸೆ ಚಿತ್ತಾರ ಬರೆದು ಸಂಭ್ರಮಿಸಿದರು.