Site icon TUNGATARANGA

ರೈತವಿರೋಧಿ ಧೋರಣೆ ಖಂಡಿಸಿ ಸರ್ಕಾರದ ವಿರುದ್ಧ ಜಿಲ್ಲಾ ಬಿಜೆಪಿ ರೈತ ಮೋರ್ಚಾ ಬೃಹತ್ ಪ್ರತಿಭಟನಾ ಮೆರವಣಿಗೆ |

ರಾಜ್ಯ ಸರ್ಕಾರದ ರೈತವಿರೋಧಿ ಧೋರಣೆ ಖಂಡಿಸಿ ಇಂದು ಜಿಲ್ಲಾ ಬಿಜೆಪಿ ರೈತಮೋರ್ಚಾ ವತಿಯಿಂದ ಜಿಲ್ಲಾ ಬಿಜೆಪಿ ಕಾರ್ಯಾಲಯದಿಂದ ಜಿಲ್ಲಾಧಿಕಾರಿಗಳ ಕಚೇರಿವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.


ಪ್ರತಿಭಟನಾ ಸಭೆ ಉದ್ದೇಶಿಸಿ ಮಾತನಾಡಿದ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ, ರೈತದ್ವೇಷಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೇಂದ್ರ ಸರ್ಕಾರ ಕಿಸಾನ್ ಸಮ್ಮಾನ್ ಯೋಜನೆ ಮೂಲಕ ನೀಡುತ್ತಿದ್ದ ೬ಸಾವಿರಕ್ಕೆ ರಾಜ್ಯ ಬಿಜೆಪಿ ಸರ್ಕಾರ ಹಿಂದೆ ನಾಲ್ಕು ಸಾವಿರರೂ. ನೀಡುತ್ತಿತ್ತು. ಅದನ್ನು ನೀಡದೆ ರೈತರಿಗೆ ಚೌರ ಮಾಡಿದ್ದಾರೆ. ತಕ್ಷಣ ಹಣ ವಾಪಾಸ್ ನೀಡಬೇಕು. ಮೂರು

ತಿಂಗಳಲ್ಲಿ ೪೨ ಮಂದಿ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದು, ಜಿಲ್ಲಾ ಉಸ್ತುವಾರಿ ಸಚಿವರು ರೈತರ ಕುಟುಂಬ ಭೇಟಿ ಮಾಡಿ ಸಾಂತ್ವನ ಹೇಳಿಲ್ಲ. ಪರಿಹಾರ ನೀಡಿಲ್ಲ. ರೈತರ ಮಕ್ಕಳಿಗೆ ಬಿಜೆಪಿ ಸರ್ಕಾರ ಜಾರಿಗೆ ತಂದ ರೈತವಿದ್ಯಾನಿಧಿ ಯೋಜನೆ ಕೂಡ ರದ್ದುಗೊಳಿಸಿದ್ದಾರೆ. ಗೋವು ನಮ್ಮ ತಾಯಿ ಸಮಾನ. ಗೋ ಸಂತತಿ ಉಳಿಸಲು ಜಿಲ್ಲೆಗೊಂದು ಗೋಶಾಲೆಯನ್ನು ಬಿಜೆಪಿ ನೀಡಿತ್ತು. ಅದನ್ನು ರದ್ದುಮಾಡಿದ್ದಾರೆ. ಕೂಡಲೇ ಪುನರಾರಂಭ ಮಾಡಬೇಕು ಎಂದರು.


ಉಚಿತ ವಿದ್ಯುತ್ ಎಂದು ಹೇಳಿ ಮೂರು ಪಟ್ಟು ದರ ಏರಿಸಿದ್ದಾರೆ. ಈ ಅವೈಜ್ಞಾನಿಕ ದರವನ್ನು ಕಡಿಮೆ ಮಾಡಬೇಕು. ಇದು ಸಾಧ್ಯವಾಗದಿದ್ದಲ್ಲಿ ರಾಜೀನಾಮೆ ನೀಡಿ ತೊಲಗಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಮಾತನಾಡಿ, ರೈತರಿಗಾಗಿ ಮೀಸಲಿಟ್ಟ ೧೦ಸಾವಿರ ಕೋಟಿ ಹಣವನ್ನು ಗ್ಯಾರಂಟಿ ಯೋಜನೆಗಾಗಿ ವರ್ಗಾವಣೆ ಮಾಡಿದ್ದಾರೆ ಕೃಷ್ಣಾ ಯೋಜನೆಗೆ ಪ್ರತಿವರ್ಷ ೧೦ಸಾವಿರ ರೂ. ನೀಡುತ್ತೇವೆ ಎಂದು ಹೇಳಿದ ಮುಖ್ಯಮಂತ್ರಿಗಳು ಒಟ್ಟಾರೆ ನೀರಾವರಿ ಯೋಜನೆಗೆ ಅಷ್ಟು ಹಣ ನೀಡಿಲ್ಲ ಎಂದರು.


ಎಪಿಎಂಸಿ ಕಾಯಿದೆ ತೆಗೆದು ರೈತನಿಗೆ ತಾನು ಬೆಳೆದ ಬೆಳೆಗೆ ತಾನೇ ಮಾರುವ ಹಕ್ಕನ್ನು ಕಸಿದುಕೊಂಡಿದ್ದಾರೆ. ರೈತರ ಯಂತ್ರೋಪಕರಣ ಸಹಾಯಧನವನ್ನು ನಿಲ್ಲಿಸಿದ್ದಾರೆ. ಸಾವಿರಾರು ಎಕರೆ ಅಡಿಕೆ ತೋಟಕ್ಕೆ ಎಲೆಚುಕ್ಕಿ ರೋಗ ಬಂದರು ರೈತರು ಆತ್ಮಹತ್ಯೆ ದಾರಿ ಹಿಡಿಯುತ್ತಿದ್ದರೂ ತೀರ್ಥಹಳ್ಳಿಯ ಅಡಿಕೆ ಸಂಶೋಧನಾ ಕೇಂದ್ರಕ್ಕೆ ಬಿಜೆಪಿ ಸರ್ಕಾರ ನೀಡಿದ ೧೦ಕೋಟಿ ರೂ.ಗಳನ್ನು

ತಡೆಹಿಡಿದಿದ್ದಾರೆ. ಉಚಿತ ಬಸ್ ಗ್ಯಾರಂಟಿ ನೀಡಿದ ಸರ್ಕಾರ ನಿಗಮಕ್ಕೆ ೭೫೦ ಕೋಟಿಯಲ್ಲಿ ಕೇವಲ ೧೨೦ ಕೋಟಿ ರೂ. ನೀಡಿದೆ. ವಿವಿಧ ಎಸ್ಕಾಂಗಳಿಂದ ಕೆಪಿಸಿಸಿಗೆ ಸಾವಿರಾರು ಕೋಟಿ ಬಾಕಿ ಇದೆ ಎಂದರು.
ಜಿಲ್ಲಾಧ್ಯಕ್ಷ ಟಿ.ಡಿ. ಮೇಘರಾಜ್ ಮಾತನಾಡಿದರು.


ಈ ಸಂದರ್ಭದಲ್ಲಿ ಬಿಜೆಪಿಯ ರೈತಮೋರ್ಚಾದ ಜಿಲ್ಲಾಧ್ಯಕ್ಷ ಸಾಲೆಕೊಪ್ಪ ರಾಮಚಂದ್ರ, ಪ್ರಧಾನ ಕಾರ್ಯದರ್ಶಿ ಕೃಷ್ಣೋಜಿರಾವ್, ವಿನ್ಸೆಂಟ್ ರೋಡ್ರಿಗಸ್, ಜಿಲ್ಲಾ ಪ್ರಭಾರಿ ಬಿ.ಇ. ವಿರೂಪಾಕ್ಷಪ್ಪ, ವಿಭಾಗ ಪ್ರಭಾರಿ ಗಿರೀಶ್ ಪಟೇಲ್, ಶಾಸಕ ಡಿ.ಎಸ್ ಅರುಣ್, ಪ್ರಮುಖರಾದ ಶಿವರಾಜ್, ಎಸ್. ಎಸ್. ಜ್ಯೋತಿಪ್ರಕಾಶ್ ಮತ್ತಿತರರಿದ್ದರು.

Exit mobile version