Site icon TUNGATARANGA

ಬೆಂಬಲ ಬೆಲೆ ಅಡಿ ಭತ್ತ ಖರೀದಿಗೆ ಅಗತ್ಯ ಸಿದ್ಧತೆ: ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್

ಶಿವಮೊಗ್ಗ: ಪ್ರಸಕ್ತ ಸಾಲಿನಲ್ಲಿ ಬೆಂಬಲ ಬೆಲೆ ಅಡಿ ಭತ್ತ ಖರೀದಿಸಲು ಸರ್ಕಾರ ಆದೇಶ ನೀಡಿರುವ ಹಿನ್ನೆಲೆಯಲ್ಲಿ ಖರೀದಿ ಕೇಂದ್ರ ಆರಂಭಿಸಲು ಅಗತ್ಯ ಸಿದ್ಧತೆ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಅವರು ಶನಿವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಭತ್ತ ಖರೀದಿಗೆ ಸಂಬಂಧಿಸಿದಂತೆ ನಡೆದ ಜಿಲ್ಲಾ ಮಟ್ಟದ ಕಾರ್ಯಪಡೆ ಸಭೆಯಲ್ಲಿ ಮಾತನಾಡಿದರು.
ಸಾಮಾನ್ಯ ಭತ್ತ ಪ್ರತಿ ಕ್ವಿಂಟಾಲ್‍ಗೆ ರೂ. 1868 ಹಾಗೂ ಭತ್ತ ಗ್ರೇಡ್-ಎ 1888 ರೂ. ನಿಗದಿಪಡಿಸಿದೆ. ಪ್ರತಿ ರೈತರಿಂದ ಸಾಮಾನ್ಯ ಭತ್ತ ಗರಿಷ್ಟ 40ಕ್ವಿಂಟಾಲ್ (ಪ್ರತಿ ಎಕ್ರೆಗೆ 16ಕ್ವಿಂಟಾಲ್‍ನಂತೆ) ಖರೀದಿಗೆ ಅವಕಾಶ ಕಲ್ಪಿಸಲಾಗಿದೆ. ಭತ್ತ ಖರೀದಿಗೆ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮವನ್ನು ಸಂಗ್ರಹಣಾ ಏಜೆನ್ಸಿಯಾಗಿ ಸರ್ಕಾರ ನೇಮಕ ಮಾಡಿದೆ. ಜಿಲ್ಲೆಯ ಎಲ್ಲಾ 7ತಾಲೂಕುಗಳಲ್ಲಿ ಖರೀದಿಗೆ ವ್ಯವಸ್ಥೆ ಮಾಡುವಂತೆ ಅವರು ತಿಳಿಸಿದರು.
ದತ್ತಾಂಶ ನೋಂದಣಿ ಕಡ್ಡಾಯ: ಭತ್ತ ಮಾರಾಟ ಮಾಡಲು ಬಯಸುವ ರೈತರು ಕೃಷಿ ಇಲಾಖೆ ಸಿದ್ಧಪಡಿಸಿರುವ ಪ್ರೂಟ್ಸ್ ದತ್ತಾಂಶದಲ್ಲಿ ತಮ್ಮ ಹೆಸರು ನೋಂದಣಿ ಮಾಡಬೇಕು. ನೋಂದಣಿ ಪ್ರಕ್ರಿಯೆ ನವೆಂಬರ್ 30ರಿಂದ ಡಿಸೆಂಬರ್ 30ರವರೆಗೆ ನಡೆಯಲಿದೆ. ನೋಂದಣಿ ಆಗದ ರೈತರಿಂದ ಭತ್ತ ಖರೀದಿಗೆ ಅವಕಾಶವಿಲ್ಲ. ರೈತರು ಸಮೀಪದ ರೈತ ಸಂಪರ್ಕ ಕೇಂದ್ರದಲ್ಲಿ ನೋಂದಣಿ ಮಾಡಲು ಅವಕಾಶ ಕಲ್ಪಿಸಲಾಗಿದೆ. ನೋಂದಾಯಿತ ರೈತರಿಂದ ಭತ್ತವನ್ನು ಖರೀದಿಸಿ ಮಿಲ್‍ಗಳಲ್ಲಿ ಶೇಖರಿಸುವ ಹಾಗೂ ಪರಿವರ್ತಿಸುವ ಕಾರ್ಯ ಡಿಸೆಂಬರ್ 20ರಿಂದ ಪ್ರಾರಂಭವಾಗಿ ಮುಂದಿನ ಮಾರ್ಚ್ 20ರ ಒಳಗಾಗಿ ಪೂರ್ಣಗೊಳಿಸಬೇಕು ಎಂದು ಹೇಳಿದರು.
ಭತ್ತವನ್ನು ನಿಗದಿತ ಅಕ್ಕಿಗಿರಣಿಗಳ ಮೂಲಕ ನೇರವಾಗಿ ಪಡೆದುಕೊಳ್ಳಲು ಸರ್ಕಾರ ಸೂಚಿಸಿದೆ. ಜಿಲ್ಲೆಯಲ್ಲಿರುವ ಅಕ್ಕಿ ಗಿರಣಿಗಳ ಹಲ್ಲಿಂಗ್ ಸಾಮಥ್ರ್ಯ ಮತ್ತು ಭತ್ತ ಸಂಗ್ರಹಣೆ ಸಾಮಥ್ರ್ಯದ ವಿವರಗಳನ್ನು ಪಡೆದು ನವೆಂಬರ್ 25ರ ಒಳಗಾಗಿ ನೋಂದಣಿ ಮಾಡಬೇಕು. ಭತ್ತ ಗುಣಮಟ್ಟ ಪರಿಶೀಲನೆಗೆ ಕೃಷಿ ಇಲಾಖೆ ಗ್ರೇಡರ್‍ಗಳನ್ನು ನಿಯೋಜಿಸಿ ಸೂಕ್ತ ತರಬೇತಿ ನೀಡಬೇಕು. ಭತ್ತ ಮಾರಾಟ ಮಾಡುವ ರೈತರಿಗೆ 3ದಿನಗಳ ಒಳಗಾಗಿ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆಯಾಗಬೇಕು ಎಂದು ಅವರು ಸ್ಪಷ್ಟಪಡಿಸಿದರು.
ರೈತರು ಭತ್ತವನ್ನು ತಮ್ಮ ಚೀಲಗಳಲ್ಲಿ ತಂದು ಅಕ್ಕಿ ಗಿರಣಿಗೆ ಸಲ್ಲಿಸಿದಾಗ ಪ್ರತಿ ಕ್ವಿಂಟಾಲ್ ಚೀಲಕ್ಕೆ ರೂ.6ರಂತೆ ಏಜೆನ್ಸಿಗಳು ಪಾವತಿ ಮಾಡಬೇಕು. ರೈತರಿಂದ ಪಡೆದ ಭತ್ತದ ಮಾಹಿತಿಯನ್ನು ಗಿರಣಿ ಮಾಲಿಕರು ಆನ್‍ಲೈನ್‍ನಲ್ಲಿ ನಮೂದಿಸಬೇಕು. ಗುಣಮಟ್ಟ ಪರಿಶೀಲನಾ ಅಧಿಕಾರಿ ನೀಡಿರುವ ಒಪ್ಪಿಗೆ ಪತ್ರವನ್ನು ಸಹ ಸ್ಕ್ಯಾನ್ ಮಾಡಿ ಅಪ್‍ಲೋಡ್ ಮಾಡಬೇಕು. ಭತ್ತ ಖರೀದಿ, ಹಣ ಪಾವತಿ, ಗುಣಮಟ್ಟ ಪರಿಶೀಲನೆ ಇತ್ಯಾದಿ ಕಾರ್ಯಗಳಲ್ಲಿ ಯಾವುದೇ ಗೊಂದಲಗಳಿಗೆ ಆಸ್ಪದವಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ಅವರು ತಿಳಿಸಿದರು.
ಇಳುವರಿ ನಿರೀಕ್ಷೆ: ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ 89706 ಹೆಕ್ಟೇರ್ ವಿಸ್ತೀರ್ಣದಲ್ಲಿ ಭತ್ತ ಬೆಳೆಯಲಾಗಿದ್ದು, 366412ಟನ್ ಉತ್ಪಾದನೆ ನಿರೀಕ್ಷಿಸಲಾಗಿದೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಕಿರಣ್ ಕುಮಾರ್ ಅವರು ಮಾಹಿತಿ ನೀಡಿದರು.
ಜಿಲ್ಲಾ ಆಹಾರ ಮತ್ತು ನಾಗರಿಕ ಪೂರೈಕೆ ಜಂಟಿ ನಿರ್ದೇಶಕ ಮಂಜುನಾಥ್ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.

Exit mobile version