Site icon TUNGATARANGA

ಆ.8-9 ಸಂಭ್ರಮದ ಗುಡ್ಡೇಕಲ್ ಜಾತ್ರೆ |ಲಕ್ಷಾಂತರ ಭಕ್ತಾದಿಗಳು ಆಗಮನದಿಂದ ಬದಲಿ ರಸ್ತೆ ಮಾರ್ಗ: ಟ್ರಸ್ಟ್ ಅಧ್ಯಕ್ಷ ಡಿ. ರಾಜಶೇಖರಪ್ಪ

ಶಿವಮೊಗ್ಗ: ಶ್ರಿ ಬಾಲಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನ ಟ್ರಸ್ಟ್ ವತಿಯಿಂದ ಗುಡ್ಡೇಕಲ್‌ನ ದೇವಸ್ಥಾನದಲ್ಲಿ ಆ.೮ರಂದು ಭರಣಿ, ಕಾವಡಿ ಉತ್ಸವ ಹಾಗೂ ೯ರಂದು ಆಡಿಕೃತ್ತಿಕೆ ಹರೋಹರ ಜಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಟ್ರಸ್ಟ್ ಅಧ್ಯಕ್ಷ ಡಿ. ರಾಜಶೇಖರಪ್ಪ ತಿಳಿಸಿದರು.


ಅವರು ಇಂದು ಮಥುರಾ ಪ್ಯಾರಾಡೈಸ್‌ನಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ, ಈ ಜಾತ್ರೆಗೆ ಹರಕೆ ಕಾವಡಿಯನ್ನು ಸಲ್ಲಿಸಲು ಶಿವಮೊಗ್ಗ ತಾಲೂಕು, ಜಿಲ್ಲೆ ಹಾಗೂ ರಾಜ್ಯದ ವಿವಿಧ ಭಾಗಗಳಿಂದ ಭಕ್ತಾದಿಗಳು ಆಗಮಿಸಲಿದ್ದಾರೆ ಎಂದರು.


ಜಾತ್ರೆ ಅಂಗವಾಗಿ ಬೆಳಿಗ್ಗೆ ೪ ಗಂಟೆಯಿಂದಲೇ ಕಾವಡಿ ಹೊತ್ತ ನೂರಾರು ಭಕ್ತರು ಕುಟುಂಬ ಸಮೇತರಾಗಿ ನಗರದ ನಾನಾ ಭಾಗದಿಂದ ಪಾದಯಾತ್ರೆ ಮೂಲಕ ಬಂದು ಹರಕೆ ತೀರಿಸಲಿದ್ದಾರೆ. ಅರಿಶಿನದ ಮಡಿ ವಸ್ತ್ರ ಧರಿಸಿದ ಮಹಿಳೆಯರು, ಮಕ್ಕಳು, ಹಿರಿಯರು, ಯುವಕ-ಯುವತಿಯರು ನಾನಾ ರೀತಿಯಿಂದ ಅಲಂಕೃತಗೊಂಡ ಕಾವಡಿ ಹೊತ್ತು ಬಾಯಿಗೆ ವೇಲಾಯುಧ ಚುಚ್ಚಿಕೊಂಡು, ಕಬ್ಬಿಣದ ಮುಳ್ಳಿನ ಪಾದುಕೆ ಧರಿಸಿ ದೇವರ ನಾಮವಾದ ಹರೋಹರ ಎಂದು ಹೇಳುತ್ತಾ ಮಂಗಳ ವಾದ್ಯದೊಂದಿಗೆ ದೇವಸ್ಥಾನಕ್ಕೆ ತೆರಳಿ ಭಕ್ತಿ ಸಮರ್ಪಿಸಲಿದ್ದಾರೆ.


ಜಾತ್ರೆಗೆ ಲಕ್ಷಾಂತರ ಭಕ್ತಾದಿಗಳು ಆಗಮಿಸುತ್ತಿರುವುದರಿಂದ ವಾಹನಗಳ ಸಂಚಾರಕ್ಕೆ ಬದಲೀ ಮಾರ್ಗ ಕಲ್ಪಿಸುವಂತೆ ಹಾಗೂ ಬಿಗಿ ಬಂದೋಬಸ್ತ್‌ಗಾಗಿ ಜಿಲ್ಲಾ ಪೊಲೀಸ್ ಇಲಾಖೆಗೆ ಮನವಿ ಮಾಡಿಕೊಳ್ಳಲಾಗಿದೆ ಎಂದರು.


ಟ್ರಸ್ಟ್ ವತಿಯಿಂದ ಗುಡ್ಡೇಕಲ್ ಗುಡ್ಡದ ಮೇಲೆ ವಿಶ್ವದಲ್ಲೇ ಅತಿ ಎತ್ತರದ ೧೫೧ ಅಡಿ ಶ್ರೀ ಬಾಲಸುಬ್ರಹ್ಮಣ್ಯ ಸ್ವಾಮಿ ವಿಗ್ರಹ ಸ್ಥಾಪನೆಗೆ ಶಂಕುಸ್ಥಾಪನೆ ನೆರವೇರಿಸಲಾಗಿದ್ದು, ವಿಗ್ರಹದ ನಿರ್ಮಾಣ ಕಾರ್ಯ ಶೀಘ್ರದಲ್ಲೆ ಆರಂಭವಾಗಲಿದೆ ಎಂದರು.


ಪತ್ರಿಕಾಗೋಷ್ಠಿಯಲ್ಲಿ ಎಂ.ಪಿ. ಸಂಪತ್, ಪಿ. ರಘುಕುಮಾರ್, ಪಿ. ರವಿಕುಮಾರ್, ಎಂ. ಲೋಕೇಶ್, ಪಿ. ಸುಬ್ರಮಣಿ ಇನ್ನಿತರರಿದ್ದರು.

Exit mobile version