Site icon TUNGATARANGA

ಸ್ವಯಂ ಉದ್ಯೋಗ ಸ್ಥಾಪನೆಗೆ ಯುವಜನಾಂಗಕ್ಕೆ ಆರ್. ಗಣೇಶ್ ಕರೆ


ಶಿವಮೊಗ್ಗ: ನಮ್ಮ ಯುವಜನಾಂಗ ಸ್ವಯಂ ಉದ್ಯೋಗ ಸ್ಥಾಪಿಸುವ ಕಡೆಗೆ ದಿಟ್ಟ ಹೆಜ್ಜೆ ಇಟ್ಟು ಭವಿಷ್ಯದಲ್ಲಿ ಉದ್ಯೋಗಗಳನ್ನು ಸೃಷ್ಠಿಸುವಂತಾಗಬೇಕು ಎಂದು ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಆರ್. ಗಣೇಶ್ ಸಲಹೆ ಮಾಡಿದರು.
ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಬೆಂಗಳೂರು, ಕರ್ನಾಟಕ ಉದ್ಯಮಶೀಲತಾ ಕೇಂದ್ರ (ಸಿಡಾಕ್) ಧಾರವಾಡ, ಜಿಲ್ಲಾ ಕೈಗಾರಿಕಾ ಕೇಂದ್ರ ಶಿವಮೊಗ್ಗ ಹಾಗು ಗ್ರಾಮೀಣ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಶಿವಮೊಗ್ಗ ಜಂಟಿ ಆಶ್ರಯದಲ್ಲಿ ಏರ್ಪಡಿಸಲಾಗಿದ್ದ ಆರು ದಿನಗಳ ಉದ್ಯಮಶೀಲತಾ ಅಭಿವೃದ್ಧಿ ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನಗರದ ಜಿಲ್ಲಾ ಕೈಗಾರಿಕಾ ಕೇಂದ್ರದ ಆವರಣದಲ್ಲಿರುವ ಸರ್ ಎಂ. ವಿಶ್ವೇಶ್ವರಯ್ಯ ಸಭಾಂಗಣದಲ್ಲಿ ಜ್ಯೋತಿ ಬೆಳಗಿ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು ಶಿವಮೊಗ್ಗ್ಲ ಅತ್ಯಂತ ವಿದ್ಯಾವಂತರ ಜಿಲ್ಲೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದು ಉದ್ಯಮ ಕ್ಷೇತ್ರದಲ್ಲೂ ಸಾಕಷ್ಟು ಅವಕಾಶಗಳನ್ನು ಹೊಂದಿರುವ ಜಿಲ್ಲೆಯಾಗಿದೆ, ಪ್ರಸ್ತುತ ಉದ್ಯಮಾಸಕ್ತರಿಗೆ ಎಲ್ಲ ಸೌಲಭ್ಯಗಳನ್ನು ನೀಡಲಾಗುತ್ತಿದೆ ಯುವಜನರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ತಿಳಿಸಿದರು.
ದೇಶದಲ್ಲಿ ಉದ್ಯೋಗಗಳನ್ನು ಸ್ಥಾಪಿಸಲು ಈಗ ಸಕಾಲವಾಗಿದ್ದು ಅದಕ್ಕೆ ಬೆಂಬಲವಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಹಲವು ಕಾರ್ಯಕ್ರಮಗಳು ಜಾರಿಯಲ್ಲಿವೆ ಈ ಹಿನ್ನೆಲೆಯಲ್ಲಿ ನಮ್ಮ ಯುವಕ-ಯುವತಿಯರು ಸ್ವಯಂ ಉದ್ಯೋಗಗಳನ್ನು ಸ್ಥಾಪಿಸಲು ಮುಂದೆ ಬರಬೇಕೆಂದು ಸಿಡಾಕ್ ಜಂಟಿ ನಿರ್ದೇಶಕ ಆರ್.ಪಿ. ಪಾಟೀಲ್ ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಗ್ರಾಮೀಣ ಕೈಗಾರಿಕಾ ವಿಭಾಗದ ಸಹಾಯಕ ನಿರ್ದೇಶಕ ಎಸ್.ಎ. ರವೀಂದ್ರನಾಥ್, ದಾವಣಗೆರೆ ಎಂ.ಇ.ಎಸ್. ಕಾಲೇಜು ಪ್ರಾಂಶುಪಾಲ ಕೆ.ಆರ್. ಅಜ್ಜಣ್ಣ ಇತರರು ಉಪಸ್ಥಿತರಿದ್ದರು, ಆರಂಭದಲ್ಲಿ ಎ. ಅವಿನಾಶ್ ಸರ್ವರನ್ನು ಸ್ವಾಗತಿಸಿದರು, ಜಿ.ಕೆ. ವಿನಯ್ ಕಾರ್ಯಕ್ರಮ ನಿರೂಪಿಸಿದರು, ಕೊನೆಯಲ್ಲಿ ಪ್ರಸನ್ನಕುಮಾರ್ ವಂದಿಸಿದರು.
ಉದ್ಯಮಶೀಲತಾ ಅಭಿವೃದ್ಧಿ ತರಬೇತಿ ಶಿಬಿರ ಉದ್ಘಾಟಿಸಿದ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಆರ್. ಗಣೇಶ್, ಸಿಡಾಕ್ ಜಂಟಿ ನಿರ್ದೇಶಕ ಆರ್.ಪಿ. ಪಾಟೀಲ್ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಗ್ರಾಮೀಣ ಕೈಗಾರಿಕಾ ವಿಭಾಗದ ಸಹಾಯಕ ನಿರ್ದೇಶಕ ಎಸ್.ಎ. ರವೀಂದ್ರನಾಥ್, ದಾವಣಗೆರೆ ಎಂ.ಇ.ಎಸ್. ಕಾಲೇಜು ಪ್ರಾಂಶುಪಾಲ ಕೆ.ಆರ್. ಅಜ್ಜಣ್ಣ ಇತರರು ಚಿತ್ರದಲ್ಲಿದ್ದಾರೆ.

Exit mobile version