Site icon TUNGATARANGA

ಶೈಕ್ಷಣಿಕ, ಸಂಶೋಧನಾ ಸಾಧನೆಯಿಂದ ವಿವಿ ಇನ್ನಷ್ಟು ಸದೃಢ: ಬೀಳ್ಕೊಡುಗೆ ಸಮಾರಂಭದಲ್ಲಿ ಕುಲಪತಿ ಪ್ರೊ. ವೀರಭದ್ರಪ್ಪ ಇಂಗಿತ

ಪ್ರೊ. ವೀರಭದ್ರಪ್ಪ ಅವರ ಪತ್ನಿ ಚೇತನ ಮತ್ತು ಪುತ್ರಿ ಕು. ಆಕಾಂಕ್ಷ ಉಪಸ್ಥಿತರಿದ್ದರು.


ಶಂಕರಘಟ್ಟ, ಆ. 02:

ಕುವೆಂಪು ವಿಶ್ವವಿದ್ಯಾಲಯವು ಮೊದಲಿನಿಂದಲೂ ಶೈಕ್ಷಣಿಕ ಗುಣಮಟ್ಟದಲ್ಲಿ ಮುಂದಿದ್ದು, ಕಳೆದ ಐದು ವರ್ಷಗಳಲ್ಲಿ ಸಂಶೋಧನೆ ಮತ್ತು ಬೋಧನಾ ಕಾರ್ಯದಲ್ಲಿ ಅಗ್ರಪಂಕ್ತಿಯಲ್ಲಿ ಗುರುತಿಸಿಕೊಂಡ ಪರಿಣಾಮ ರಾಷ್ಟ್ರಮಟ್ಟದ ಹಲವು ರ‍್ಯಾಂಕಿಂಗ್‌ಗಳಲ್ಲಿ ಉತ್ತಮ ಸಾಧನೆ ತೋರಿತು ಎಂದು ವಿವಿಯ ಕುಲಪತಿ ಪ್ರೊ. ಬಿ ಪಿ ವೀರಭದ್ರಪ್ಪ ಸಂತಸ ವ್ಯಕ್ತಪಡಿಸಿದರು.


ಕುವೆಂಪು ವಿವಿಯ ಕುಲಪತಿ ಪ್ರೊ. ಬಿ. ಪಿ. ವೀರಭದ್ರಪ್ಪ ಅವರ ಕಾರ್ಯಾವಧಿ ಮಂಗಳವಾರ ಕೊನೆಗೊಳ್ಳುತ್ತಿರುವ ಸಲುವಾಗಿ ವಿವಿಯು ಪ್ರೊ. ಎಸ್. ಪಿ. ಹಿರೇಮಠ ಸಭಾಂಗಣದಲ್ಲಿ ಇಂದು ಮಧ್ಯಾಹ್ನ 03 ಗಂಟೆಗೆ ಆಯೋಜಿಸಿದ್ದ ತಮ್ಮ ಬೀಳ್ಕೊಡುಗೆ ಅಭಿನಂದನಾ ಸಮಾರಂಭದಲ್ಲಿ ಗೌರವ ಸ್ವೀಕರಿಸಿ ಅವರು ಮಾತನಾಡಿದರು. ವಿಶ್ವವಿದ್ಯಾಲಯದಲ್ಲಿ ಉತ್ತಮ ಸಂಶೋಧನೆ ಕೈಗೊಳ್ಳಬಲ್ಲ ಆಸಕ್ತಿ, ಸಾಮರ್ಥ್ಯವಿರುವ ಅಧ್ಯಾಪಕ ವೃಂದವಿದ್ದು, ಹೆ-ಇಂಡೆಕ್ಸ್, ಕೆಎಸ್‌ಯುಆರ್‌ಎಫ್, ಎನ್‌ಐಆರ್‌ಎಫ್ ರ‍್ಯಾಂಕಿಂಗ್‌ಗಳಲ್ಲಿ ಉತ್ತಮ ಪಾಯಿಂಟ್ಸ್ಗಳೊಂದಿಗೆ ವಿವಿಧ ಸೂಚ್ಯಂಕಗಳಲ್ಲಿ ಸದಾ ಅಗ್ರ ಸ್ಥಾನ ಪಡೆಯುತ್ತಾ ಬಂದಿದೆ. ನ್ಯಾಕ್ ಮೌಲ್ಯಮಾಪನದಲ್ಲಿ ‘ಎ’ ಗ್ರೇಡ್ ಪಡೆದದ್ದು ಇದಕ್ಕೆ ಮುಕುಟಪ್ರಾಯ ಎಂದು ತಿಳಿಸಿದರು.


ಕಳೆದ ಐದಾರು ವರ್ಷಗಳಲ್ಲಿ ವಿವಿಧ ವಿಭಾಗಗಳಿಂದ ಹಿರಿಯ ಪ್ರಾಧ್ಯಾಪಕರುಗಳು ವಯೋನಿವೃತ್ತಿ ಹೊಂದಿದ್ದು, ಸರ್ಕಾರವು ಅವರ ಸ್ಥಾನಗಳನ್ನು ತುಂಬಿಕೊಳ್ಳಲು ಅವಕಾಶ ನೀಡಿದಲ್ಲಿ ವಿವಿಯ ಶೈಕ್ಷಣಿಕ ಸಂಶೋಧನಾ ಪರಂಪರೆ, ಸ್ಥಾನಗಳನ್ನು ಮುಂದುವರಿಸಲು ಬಲ ದೊರೆಯುತ್ತದೆ. ಉತ್ತಮವಾದ ಸಂಶೋಧನೆಗಳನ್ನು ನಡೆಸುತ್ತಿರುವ ಬೋಧಕರು ಸಂಶೋಧನೆಯಲ್ಲಿ ಉತ್ತಮ ಸಾಧನೆ ತೋರಿದ್ದಾರೆ, ಪೇಟೆಂಟ್‌ಗಳನ್ನು ಪಡೆದಿದ್ದಾರೆ, ಸಂಶೋಧನಾ ಪ್ರಕಟಣೆ, ಸಾಮಾಜಿಕ ಚಟುವಟಿಕೆ ಮೂಲಕ ಜನರು, ಸಮಾಜದ ಅಭಿವೃದ್ಧಿಗೆ ಕೊಡುಗೆ ನೀಡಿದ್ದಾರೆ. ಅರ್ಹರಾದ ಎಲ್ಲ ಬೋಧಕ-ಬೋಧಕೇತರ ಸಿಬ್ಬಂದಿಗೆ ಪದೋನ್ನತಿ ಒದಗಿಸಿರುವುದು ತಮಗೆ ತೃಪ್ತಿ ನೀಡಿದೆ. ಕಳೆದ ನಾಲ್ಕು ವರ್ಷಗಳಲ್ಲಿ ವಿವಿಯಲ್ಲಿ ಉತ್ತಮ ಕಾರ್ಯನಿರ್ವಹಣೆ ನೀಡಲು ಸಲಹೆ ನೀಡಿದ, ಸಹಕರಿಸಿದ ವಿವಿಯ ಆಡಳಿತಾಧಿಕಾರಿಗಳು, ಬೋಧಕ-ಬೋಧಕೇತರ ಸಿಬ್ಬಂದಿ, ಶಿವಮೊಗ್ಗ-ಭದ್ರಾವತಿ ನಗರಗಳ ಮಾಜಿ-ಹಾಲಿ ಜನಪ್ರತಿನಿಧಿಗಳಾದ ಕೆ. ಎಸ್. ಈಶ್ವರಪ್ಪ, ಚನ್ನಬಸಪ್ಪ, ಬಿ. ವೈ. ರಾಘವೇಂದ್ರ, ಸಿಂಡಿಕೇಟ್ ಸದಸ್ಯರುಗಳು ಸೇರಿದಂತೆ ಹಲವರಿಗೆ ಅವರು ಧನ್ಯವಾದಗಳನ್ನು ತಿಳಿಸಿದರು.


ಈ ಸಂದರ್ಭದಲ್ಲಿ ವಿವಿಯ ಪರೀಕ್ಷಾಂಗ ಕುಲಸಚಿವ ಪ್ರೊ. ನವೀನ್‌ಕುಮಾರ್ ಎಸ್. ಕೆ., ದೂರಶಿಕ್ಷಣ ನಿರ್ದೇಶನಾಲಯದ ನಿರ್ದೇಶಕ ಪ್ರೊ. ಹೆಚ್. ಎನ್. ರಮೇಶಬಾಬು, ಬೋಧಕೇತರ ಸಿಬ್ಬಂದಿ ಒಕ್ಕೂಟದ ಅಧ್ಯಕ್ಷ ಶ್ರೀನಿವಾಸ ಮಾತನಾಡಿದರು. ಮಾನವ ಸಂಪನ್ಮೂಲ ವಿಭಾಗದ ಉಪಕುಲಸಚಿವ ಡಾ. ಸುರೇಶ್ ಎಂ. ವಂದಿಸಿದರು ಮತ್ತು ಉಪನ್ಯಾಸಕಿ ಡಾ. ಹಸೀನಾ ಕಾರ್ಯಕ್ರಮ ನಿರೂಪಿಸಿದರು.

ಕುವೆಂಪು ವಿವಿಯು ಇಂದಿನವರೆಗೂ ಹಲವು ಸಾಧನೆಗಳನ್ನು ಮಾಡುತ್ತ ಬಂದಿದ್ದು, ಎಲ್ಲ ಅಧಿಕಾರಿ, ಬೋಧಕವರ್ಗ ತಮ್ಮ ಕೊಡುಗೆ ನೀಡಿದ್ದಾರೆ. ಆದರೆ ಹೊಸ ಸಂದರ್ಭದ ಸವಾಲುಗಳನ್ನು ಎದುರಿಸಲು ವಿವಿಯು ತನ್ನಲ್ಲಿರುವ ಅಪಾರ ಬೌದ್ಧಿಕ ಸಂಪನ್ಮೂಲಗಳನ್ನು ಬಳಸಿಕೊಂಡು ಆಂತರಿಕ ಸಂಪನ್ಮೂಲ ಸೃಷ್ಟಿಸೋಣ. ನಿಯಮಿತವಾಗಿ ಕಾರ್ಯಾಗಾರ, ವಿಚಾರ ಸಂಕಿರಣಗಳು, ಕೌಶಲ್ಯ ಆಧರಿತ ಕೋರ್ಸ್ ಗಳ ತರಬೇತಿ ಆರಂಭಿಸಿ ವಿವಿಯನ್ನು ಸದೃಢಗೊಳಿಸೋಣನೂತನ ಕುಲಸಚಿವ ಪ್ರೊ. ಪಿ. ಕಣ್ಣನ್

Exit mobile version