ಶಿವಮೊಗ್ಗ,ಆ.01:
ಸಾರ್ಜನಿಕರ ನೋವು ನಲಿಗಳಿಗೆ ಸ್ಪಂದಿಸುವ ಜೊತೆಗೆ ಇಡೀ ನಗರದ ಒಟ್ಟಾರೆ ಮೂಲಭೂತ ವ್ಯವಸ್ಥೆಯ ನೋಡಿಕೊಳ್ಳುವ ಅಧಿಕಾರಿಯ ಕಛೇರಿಯಲ್ಲಿ ಯಾರೇ ಬಂದರೂ ಅವರಿಗೆ ಮತ್ತು ಅಧಿಕಾರಿಗೆ ಸಂಪರ್ಕಿಸಲು ಸಹಾಯ ಮಾಡುವನೌಕರ ಬರೊಬ್ಬರಿ ಮುವತ್ತೆಂಟು ವರುಷ ಸೇವಾವಧಿ ಪೂರೈಸಿದಾಗ ಆತನಿಗೆ ಒಂದು ಸಹಜ ಬೀಳ್ಕೊಡುಗೆ ಸಿಕ್ಕರೆ ಅದೇ ಪುಣ್ಯ.
ಇತ್ತೀಚಿನ ದಿನಗಳಲ್ಲಿ ಅಧಿಕಾರಿಗಳ ಕೈಕೆಳಗೆ ಕೆಲಸ ಮಾಡುತ್ತಿರುವವರು ನಿವೃತ್ತರಾದಾಗ ಅಧಿಕಾರಿಗಳು ಅವರನ್ನು ಅತ್ಯಂತ ಸಂಭ್ರಮ ಸಡಗರದಿಂದ ಪ್ರೀತಿಯಿಂದ ಬೀಳ್ಕೊಡುತ್ತಿರುವುದು ಒಂದು ನಿಜಕ್ಕೂ ಆ ನೌಕರನ ಮನದಲ್ಲಿ ಅಚ್ಚಳಿಯದೇ ಉಳಿಯುತ್ತದೆ.
ನಿತ್ಯ ಸಾಹೇಬರು ಬರುವ ಪೂರ್ವದಲ್ಲಿ ಬಂದು ಅವರ ಕಛೇರಿ ಶುಚಿಗೊಳಿಸಿ ನಂತರ ಯಾರಾದರೂ ಬಂದರೆ ಸಾಹೇಬರನ್ನು ಬೇಟಿಯಾಗಲು ಅವಕಾಶ ಕೇಳಿ ನಂತರ ಸಾಹೇಬರು ಇರುವ ಹೊತ್ತಿನ ತನಕ ಅವರ ಜೊತೆಗಿದ್ದು, ಊಟೋಪಚಾರ ನೋಡಿಕೊಳ್ಳುತ್ತಿದ್ದ ನೌಕರನಿಗೆ ಸಾಹೇಬರೇ, ಆ ನೌಕರನ ಸೇವಾವಧಿ ಕೊನೆಯ ದಿನ ಪ್ರೀತಿಯಿಂದ ಉಣಬಡಿಸಿ ಶುಭ ಹಾರೈಸಿದ್ದು ಅಪರೂಪದ ಸಂಗತಿಯೇ ಹೌದು.
ನಿನ್ನೆ ಶಿವಮೊಗ್ಗ ಮಹಾನಗರ ಪಾಲಿಕೆಯ ಆಯುಕ್ತರ ಕಛೇರಿಯ ಪ್ರೀತಿಯ ನೌಕರ ನಿವೃತ್ತರಾದಾಗ ಆಯುಕ್ತ ಮಾಯಣ್ಣಗೌಡರು ಅವರನ್ನು ಅತ್ಯಂತ ಪ್ರೀತಿಯಿಂದ ಬೀಳ್ಕೊಟ್ಟಿದ್ದು ಒಂದು ಭಾವನಾತ್ಮಕ ಸಂಬಂಧವಾಗಿತ್ತು. ಆಯುಕ್ತರ ಕಛೇರಿಯ ಬಾಗಿಲು ತೆರೆಯುವುದರಿಂದ ಹಿಡಿದು ಬಾಗಿಲು ಮುಚ್ಚುವರೆಗೂ ಕೆಲಸ ಮಾಡುತ್ತಿದ್ದ ನೌಕರ ಕರಿಯಣ್ಣ ಅವರು ನಿವೃತ್ತರಾದರು. ಕರಿಯಣ್ಣ ಅವರು ಆಯುಕ್ತರ ಬಗ್ಗೆ ತಮ್ಮ ಸೇವೆಯ ಜೊತೆಗೆ ಅತ್ಯಂತ ಪ್ರೀತಿಯಿಂದ ನೋಡಿಕೊಂಡವರು. ಅವರ ಕಾಗದ ಪತ್ರದ ನಡುವೆಯೂ ಅವರಿಗೆ ಕಾಫಿ. ತಿಂಡಿ, ಊಟದ ಬಗ್ಗೆ ಗಮನಸೆಳೆದು ಅತ್ಯಂತ ಕಾಳಜಿಯಿಂದ ನೋಡಿಕೊಂಡವರು.
ಇಂತಹ ಆಪ್ತ ಶಾಖೆಯ ನೌಕರ ಕರಿಯಣ್ಣ ಅವರು ನಿನ್ನೆ ನಿವೃತ್ತರಾದಾಗ ಆಯುಕ್ತ ಮಾಯಣ್ಣಗೌಡರು
ಕರಿಯಣ್ಣ ಅವರನ್ನು ಪ್ರೀತಿಯಿಂದ ಬರಮಾಡಿಕೊಂಡು ತಮ್ಮ ಕಚೇರಿಯಲ್ಲಿಯೇ ಅವರಿಗೆ ಊಟದ ವ್ಯವಸ್ಥೆ ಮಾಡಿದ್ದರು. ತಮ್ಮ ಕೈಯಾರೆ ಊಟ ಮಾಡಿಸಿದರು. ಮಾತೃ ಹೃದಯಿ ಆಯುಕ್ತ ಗೌಡರು ತಮ್ಮ ಅವರನ್ನು ತಬ್ಬಿಕೊಂಡು ಪ್ರೀತಿಯಿಂದ ಚೇರ್‌ನಲ್ಲಿ ಕೂರಿಸಿ ಟೇಬಲ್‌ನಲ್ಲಿ ಊಟ ಬಡಿಸಿದರು.
ಈ ಕ್ಷಣ ಅತ್ಯಂತ ಅಪರೂಪದಲ್ಲಿ ಅಪರೂಪವಾದಂತಹ ಸಂದರ್ಭವಾಗಿತ್ತು. ಕರಿಯಣ್ಣನವರಿಗಂತೂ ಈ ಸಂದರ್ಭ ಅತ್ಯಂತ ಭಾವುಕ ಕ್ಷಣವಾಗಿತ್ತು. ಅಧಿಕಾರಿಯೊಬ್ಬರು ತಮ್ಮನ್ನು ಕೂರಿಸಿ ಬಾಳೆದೆಲೆ ಹಾಕಿ ಊಟ ಬಡಿಸಿದ್ದು ಕಂಡು ಕಣ್ಣು ತೇವವಾಗಿತ್ತು. ಏನೂ ಮಾತನಾಡದ ಸ್ಥಿತಿಯಲ್ಲಿ ಕರಿಯಣ್ಣ ತಮ್ಮ ಅಧಿಕಾರಿಗೆ ಕಣ್ಣಿನಲ್ಲಿಯೇ ಕೃತಜ್ಞತೆ ತೋರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಆಯುಕ್ತರು ಕರಿಯಣ್ಣ ರವರ ನಿವೃತ್ತಿಯ ನಂತರದ ಕ್ಷಣಗಳು ಸುಖ, ಶಾಂತಿ, ನೆಮ್ಮದಿ ಹಾಗೂ ಸಮೃದ್ದಿಯಿಂದ ಕೂಡಿರಲಿ ಎಂದು ಹಾರೈಸಿದರು.
ಇತ್ತೀಚಿನ ವರ್ಷಗಳಲ್ಲಿ ಅಧಿಕಾರಿಗಳು ತಮ್ಮ ಕೈಕೆಳಗೆ ಕೆಲಸ ಮಾಡುತ್ತಿರುವ ಸಿಬ್ಬಂದಿಗಳಿಗೆ ಅತ್ಯಂತ ಗೌರವದಿಂದ ಬೀಳ್ಕೊಡುತ್ತಿರುವುದು ಸಾಮಾನ್ಯವಾಗಿದೆ. ಜೊತೆಗೆ ಅವರಿಗೆ ಹಿರಿಯರ ಸ್ಥಾನವನ್ನು ಕೂಡ ಈ ಅಧಿಕಾರಿಗಳು ನೀಡುತ್ತಾರೆ. ಈ ಹಿಂದೆಯೂ ಸಹ ಅನೇಕ ಅಧಿಕಾರಿಗಳು ತಮ್ಮ ಚಾಲಕ ನಿವೃತ್ತರಾದಾಗ ಅವರನ್ನು ತಾವೇ ಡ್ರೈವ್ ಮಾಡಿಕೊಂಡು ಮನೆಯವರೆಗೂ ಬಿಟ್ಟು ಬಂದ ಉದಾಹರಣೆಗಳಿವೆ. ಇಂತಹ ಘಟನೆಗಳಿಗೆ ಮೇಲ್ಕಂಡ ಘಟನೆಯೂ ಸಾಕ್ಷಿಯಾಗಿತ್ತು. ಈ ಸಂದರ್ಭವನ್ನು ಆಪ್ತ ಶಾಖೆಯ ಸಿಬ್ಬಂದಿಗಳು, ಪಾಲಿಕೆ ಅಧಿಕಾರಿಗಳು, ನೌಕರರು ಕಂಡು ಕಣ್ತುಂಬಿಕೊಂಡು ಕರಿಯಣ್ಣ ಹಾಗೂ ಮಾಯಣ್ಣ ಗೌಡರ ಬಗ್ಗೆ ವಿಶೇಷ ಪ್ರೀತಿಯ ಮಾತನಾಡಿದರು. ಕರಿಯಣ್ಣ ಲಕ್ಕಿ ಎಂದರು.