ಶಿವಮೊಗ್ಗ : ಸರ್ಕಾರಿ ನೌಕರಿಯಲ್ಲಿ ನೌಕರ ಮತ್ತು ನೌಕರ ಬಂಧು ಎಂಬ ಎರಡು ವ್ಯತ್ಯಾಸಗಳಿದ್ದು, ನೌಕರರ ಬಂಧುವಾಗಿ ಕಾರ್ಯನಿರ್ವಹಿಸಿದ್ದವರು ರಘುರಾಮ ದೇವಾಡಿಗ ಎಂದು ಹಿರಿಯ ಸಾಹಿತಿ ಡಾ.ನಾ.ಡಿಸೋಜ ಅಭಿಪ್ರಾಯಪಟ್ಟರು.
ಭಾನುವಾರ ನಗರದ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ರಘುರಾಮ ದೇವಾಡಿಗರ ಅಭಿಮಾನಿ ಬಳಗದ ವತಿಯಿಂದ ಏರ್ಪಡಿಸಿದ್ದ ಸರ್ಕಾರಿ ನೌಕರರ ಸಂಘ ಮಾಜಿ ಅಧ್ಯಕ್ಷರಾದ ರಘುರಾಮ ದೇವಾಡಿಗರ ಅಭಿನಂದನಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಒಂದೇ ಕಛೇರಿಯಲ್ಲಿ ವಿಭಿನ್ನ ಬಗೆಯ ಮನಸ್ಥಿತಿ ಹೊಂದಿರುವ ನೌಕರರಿರುತ್ತಾರೆ. ಕೆಲವರು ನೌಕರರಾಗಿ ಉಳಿದುಬಿಟ್ಟರೆ, ಮತ್ತೆ ಕೆಲವರು ಬಂಧುವಾಗಿ ಜನರ ಮನಸ್ಸಿನಲ್ಲಿ ಉಳಿಯುತ್ತಾರೆ. ಅಂತಹ ಸರ್ವರ ಹಿತ ಕಾಪಾಡುವಲ್ಲಿ ರಘುರಾಮ ದೇವಾಡಿಗರು ಸದಾ ಮುಂದಿದ್ದರು ಎಂದು ಹೇಳಿದರು.
ಲೋಕಸಭಾ ಸದಸ್ಯರಾದ ಬಿ.ವೈ.ರಾಘವೇಂದ್ರ ಮಾತನಾಡಿ, ಕೆಲವರು ನೌಕರಿಯಲ್ಲಿ ತನ್ನ ವೃತ್ತಿ ಮನೆ ಸಂಸಾರ ಎಂಬ ಸೀಮಿತತೆಯಲ್ಲಿ ಉಳಿದುಬಿಡುತ್ತಾರೆ. ಅದರೇ ರಘುರಾಮ ದೇವಾಡಿಗರು ತಮ್ಮ ವೃತ್ತಿಯ ಜೊತೆಗೆ ಇತರೇ ನೌಕರರ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಮುಂದಿದ್ದರು. ದೇವಾಡಿಗ ಸಮಾಜದಲ್ಲಿ ಹುಟ್ಟಿ ಸರ್ಕಾರಿ ಅಧಿಕಾರಿಯಾಗಿ ಇಡೀ ಸಮಾಜವೇ ಹೆಮ್ಮೆಪಡುವಂತಹ ಸಮಾಜಮುಖಿ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಹೇಳಿದರು.
ಮಾಜಿ ವಿಧಾನಪರಿಷತ್ತಿನ ಸದಸ್ಯರಾದ ಆಯನೂರು ಮಂಜುನಾಥ ಮಾತನಾಡಿ, ಸರ್ಕಾರಿ ಮತ್ತು ಕಾರ್ಮಿಕ ಸಂಘಟನೆಯಲ್ಲಿ ತೊಡಗಿಸಿಕೊಂಡವರಿಗೆ ಸಂಘಟನೆ ಮೊದಲ ಪ್ರಾಶಸ್ತ್ಯವಾಗಿ ಕುಟುಂಬ ಎರಡನೇ ಪ್ರಾಶಸ್ತ್ಯ ಪಡೆಯುತ್ತದೆ. ದೇವಾಡಿಗರ ಕುಟುಂಬ ಅವರ ಎಲ್ಲಾ ಸಮಾಜಮುಖಿ ಕಾರ್ಯಗಳಿಗೆ ಪೂರಕವಾಗಿ ನಿಂತಿದ್ದು, ವಿಶೇಷ ಅಭಿನಂದನೆಗೆ ಅರ್ಹರು.
ಸರ್ಕಾರಿ ನೌಕರರಾಗಿ ಬೇರೆ ಸಮುದಾಯದ ಜನರು ಅಭಿನಂದಿಸುವ ಮಟ್ಟಕ್ಕೆ ಬೆಳೆದದ್ದು ಸಾಮಾನ್ಯ ವಿಷಯವಲ್ಲ. ಗುಂಪುಗಾರಿಕೆಗಳನ್ನು ಮೆಟ್ಟಿನಿಲ್ಲುವಲ್ಲಿ ಸಫಲರಾದ ರಘುರಾಮ ದೇವಾಡಿಗರ ಸಾಮರ್ಥ್ಯ ಎಲ್ಲರು ಮೆಚ್ಚುವಂತದ್ದು ಎಂದು ಹೇಳಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಿ.ಮಂಜುನಾಥ ಅಧ್ಯಕ್ಷತೆ ವಹಿಸಿದ್ದರು. ಡಿವಿಎಸ್ ಸಂಸ್ಥೆಯ ಸಹ ಕಾರ್ಯದರ್ಶಿಗಳಾದ ಡಾ.ಸತೀಶ್ ಕುಮಾರ ಶೆಟ್ಟಿ ಅಭಿನಂದನಾ ಮಾತುಗಳನ್ನಾಡಿದರು. ಬೈಂದೂರ ಕ್ಷೇತ್ರದ ಮಾಜಿ ಶಾಸಕರಾದ ಗೋಪಾಲ ಪೂಜಾರಿ, ಮಾಜಿ ಶಾಸಕರಾದ ಕೆ.ಬಿ.ಪ್ರಸನ್ನಕುಮಾರ, ಮುಂಬೈ ವಿಶ್ವ ದೇವಾಡಿಗ ಮಹಾಮಂಡಳದ ಅಧ್ಯಕ್ಷರಾದ ಧರ್ಮಪಾಲ.ಯು.ದೇವಾಡಿಗ, ಕಾರ್ಯದರ್ಶಿ ಹಿರಿಯಡ್ಕ ಮೋಹನದಾಸ್, ರಾಜ್ಯ ನಿವೃತ್ತ ನೌಕರರ ಸಂಘದ ಅಧ್ಯಕ್ಷರಾದ ಎಲ್.ಭೈರಪ್ಪ, ಉಪನ್ಯಾಸಕ ದತ್ತಮೂರ್ತಿ ಭಟ್, ತುಮಕೂರು ಸರ್ಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷರಾದ ಸಣ್ಣಮುದ್ದಯ್ಯ, ಉದ್ಯಮಿ ಭಾಸ್ಕರ್ ಕಾಮತ್, ಪತ್ರಕರ್ತ ಮಂಜುನಾಥ ಚಾಂದ, ಕೆ.ಸಿ.ರಾಜೇಶ್, ಕೆನಡಿ ಪೆರೇರಾ, ಎಚ್.ಎಸ್.ಶಂಕರ್, ಕರಿಯಪ್ಪ, ಏಸುದಾಸ್, ಚಂದ್ರಪ್ಪ, ಕೃಷ್ಣಪ್ಪ, ಮಹಾಬಲೇಶ್ವರ ಹೆಗಡೆ, ನಾಗಭೂಷಣ್, ಘನಶ್ಯಾಮ್, ಯೋಗೀಶ್, ಚಿನ್ನಪ್ಪ, ಶಿವಾನಂದ ಪಾಣಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. ಇದೇ ವೇಳೆ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಸಂಜೆ ಕಾರ್ಯಕ್ರಮ ನಡೆಯಿತು.