ಶಿವಮೊಗ್ಗ: ಮಲ್ಲಿಕಾರ್ಜುನ ನಗರದ ಚಾನೆಲ್ ಏರಿಯಾದಲ್ಲಿ ಕುರಿ ಕಾಯುವ ಯುವಕನೋರ್ವ ಶವವಾಗಿ ಪತ್ತೆಯಾಗಿದ್ದು, ವಿದ್ಯುತ್ ಶಾಕ್‌ನಿಂದ ಸಾವನ್ನಪ್ಪಿರಬಹುದು ಎಂದು ಶಂಕಿಸಲಾಗಿದೆ.
ನಿನ್ನೆ ಮಧ್ಯಾಹ್ನ ಕುರಿ ಕಾಯಲು ಹೋಗಿದ್ದ ಗೋಂಧಿಚಟ್ನಹಳ್ಳಿಯ ನಿವಾಸಿ ಯುವಕ ಗಿರೀಶ್(೨೬) ಆತನ ಮನೆಯಿಂದ ಮೊಬೈಲ್‌ಗೆ ಕರೆ ಮಾಡಲಾಗಿರುತ್ತದೆ. ಅನೇಕ ಬಾರಿ ಕರೆ ಮಾಡಿದರೂ ಕರೆಯನ್ನ ಸ್ವೀಕರಿಸದ ಗಿರೀಶ್ ಗಾಗಿ ಆತನ ಕುಟುಂಬ ಹುಡುಕಲು ಆರಂಭಿಸಿದೆ.
ಸಂಜೆ ಹೊತ್ತಿಗೆ ಆತನನ್ನ ಹುಡುಕಿಕೊಂಡು ಹೊರಟ ಮನೆಯವರಿಗೆ ನವುಲೆ ಬಳಿ ಕುರಿಗಳು ಪತ್ತೆಯಾಗುತ್ತವೆ. ಕುರಿಗಳು ಕಂಡು ಬಂದರು ಆತ ಮಾತ್ರ ನಾಪತ್ತೆಯಾಗಿರುತ್ತಾನೆ. ಆತನ ಕುಟುಂಬ ಶಿವಮೊಗ್ಗ ಗ್ರಾಮಾಂತರ ಠಾಣೆಗೆ ಬಂದು ಗಿರೀಶ್ ಮೊಬೈಲ್ ಸ್ವೀಕರಿಸದೆ ಇರುವುದು ಮತ್ತು ಕುರಿಗಳು ಮಾತ್ರ ಪತ್ತೆಯಾಗಿರುವುದನ್ನ ವಿವರಿಸುತ್ತಾರೆ.
ಆತನ ಮೊಬೈಲ್ ಟ್ರೇಸ್ ಮಾಡಿದ ಪೊಲೀಸರಿಗೆ ಕುವೆಂಪು ಬಡಾವಣೆಯನ್ನ ತೋರಿಸಿರುತ್ತದೆ. ಸ್ಥಳ ಪರಿಶೀಲಿಸಿದಾಗ ಅಲ್ಲೂ ಸಹ ಗಿರೀಶ್(೨೭) ಕಂಡುಬರುವುದಿಲ್ಲ. ಆತನಿಗಾಗಿ ಹುಟುಕಾಟ ಆರಂಭಿಸಿದಾಗ ಮಲ್ಲಿಕಾರ್ಜುನ ನಗರ ಬಡಾವಣೆಯ ಹಿಂಭಾಗದ ಚಾನೆಲ್ ಏರಿಯಾ ಬಳಿ ಪತ್ತೆಯಾಗಿರುತ್ತಾನೆ.
ಆತನ ಕೈಗಳು ಸೆಟೆದುಕೊಂಡಿದ್ದು, ಆತನಿಗೆ ವಿದ್ಯುತ್ ಸ್ಪರ್ಶದಿಂದ ಸಾವನ್ನಪಿರುವ ಸಾಧ್ಯತೆಗಳು ಕಂಡು ಬಂದಿದೆ. ಮರಣೋತ್ತರ ಪರೀಕ್ಷೆಗೆ ಮೆಗ್ಗಾನ್‌ಗೆ ಸಾಗಿಸಲಾಗಿದೆ. ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಆತನ ಸಾವಿಗೆ ಕಾರಣವೇನು ಎಂಬುದು ಕಾದು ನೋಡಬೇಕಿದೆ.
ಕುಟುಂಬಸ್ಥರು ವಿದ್ಯುತ್ ಆಘಾತಕ್ಕೆ ಬಲಿಯಾಗಿದ್ದಾರೆ ಎಂದು ಗ್ರಾಮಾಂತರ ಠಾಣೆಗೆ ದೂರು ನೀಡಿದ್ದು, ಶವ ಪರೀಕ್ಷೆ ಬಳಿಕ ಸಾವಿನ ನಿಖರ ಕಾರಣ ತಿಳಿಯಲಿದೆ.