Site icon TUNGATARANGA

ಡೆಂಗ್ಯು ಕುರಿತಾದ ಜಾಗೃತಿ ರಥಕ್ಕೆ ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿರವರಿಂದ ಚಾಲನೆ


ಶಿವಮೊಗ್ಗ, ಜುಲೈ 28,
     ರೋಗವಾಹಕ ಸೊಳ್ಳೆಯಿಂದ ಹರಡುವ ಡೆಂಗ್ಯು ಜ್ವರ ಕುರಿತು ಅರಿವು ಮೂಡಿಸುವ ಡೆಂಗ್ಯು ಜಾಗೃತಿ ರಥಕ್ಕೆ ಇಂದು ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ಮತ್ತು ಜಿ.ಪಂ.ಸಿಇಓ ಸ್ನೇಹಲ್ ಸುಧಾಕರ ಲೋಖಂಡೆ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು.
     ಡೆಂಗೀ ಜ್ವರ ವೈರಸ್‍ನಿಂದ ಉಂಟಾಗುವ ಖಾಯಿಲೆ. ಇದು ಸೋಂಕು ಹೊಂದಿದ ಈಡಿಸ್ ಈಜಿಪ್ಟೆ ಸೊಳ್ಳೆಯ ಕಚ್ಚುವಿಕೆಯಿಂದ ಒಬ್ಬರಿಮದ ಒಬ್ಬರಿಗೆ ಹರಡುತ್ತದೆ. ಈ ಸೊಳ್ಳೆಗಳು ಸಾಮಾನ್ಯ ಸ್ವಚ್ಚ ನೀರಿನಲ್ಲಿ ಸಂತಾನಾಭಿವೃದ್ದಿ ಮಾಡುತ್ತವೆ ಹಾಗೂ ಹಗಲು ಹೊತ್ತಿನಲ್ಲಿ ಮನುಷ್ಯರನ್ನು ಕಚ್ಚುತ್ತದೆ.


ಡೆಂಗೀ ಜ್ವರ ನಿಯಂತ್ರಣ ಎಲ್ಲರ ಜವಾಬ್ದಾರಿ :
    ಈ ರೋಗದ ಲಕ್ಷಣ ಇದ್ದಕ್ಕಿದ್ದಂತೆ ತೀವ್ರ ಜ್ವರ, ವಿಪರೀತ ತಲೆನೋವು, ಕಣ್ಣುಗಳ ಹಿಂಭಾಗ ನೋವು, ಮಾಂಸಖಂಡ ಮತ್ತು ಕೀಲುಗಳಲ್ಲಿ ವಿಪರೀತ ನೋವು ಕಾಣಿಸಿಕೊಳ್ಳುವುದು, ತೀವ್ರ ಸ್ಥಿತಿಯಲ್ಲಿ ಬಾಯಿ, ಮೂಗು ಮತ್ತು ಒಸಡುಗಳಿಂದ ರಕ್ತಸ್ರಾವ ಮತ್ತು ಚರ್ಮದ ಮೇಲೆ ಅಲ್ಲಲ್ಲಿ ರಕ್ತಸ್ರಾವದ ಗುರುತುಗಳು ಕಾಣಿಸಿಕೊಳ್ಳುತ್ತದೆ.


     ಈ ರೋಗಕ್ಕೆ ಚಿಕಿತ್ಸೆ ಡೆಂಗೀ ಜ್ವರಕ್ಕೆ ಯಾವುದೇ ನಿರ್ದಿಷ್ಟ ಔಷಧಿ ಅಥವಾ ಲಸಿಕೆ ಇರುವುದಿಲ್ಲ. ರೋಗದ ಲಕ್ಷಣಗಳ ಅನುಸಾರವಾಗಿ ವೈದ್ಯರಿಂದ ಪರೀಕ್ಷಿಸಿಕೊಂಡು ಸೂಕ್ತ ಚಿಕಿತ್ಸೆ ಪಡೆಯಬಹುದು. ಮೇಲ್ಕಂಡ ರೋಗ ಲಕ್ಷಣಗಳು ಕಂಡುಬಂದರೆ ತಕ್ಷಣ ಹತ್ತಿರದ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರಿಂದ ಸೂಕ್ತ ಚಿಕಿತ್ಸೆಯನ್ನು ಪಡೆಯಬೇಕು.


    ಈ ರೋಗದ ನಿಯಂತ್ರಣ ಕ್ರಮಗಳು, ಸೊಳ್ಳೆಗಳ ನಿಯಂತ್ರಣ ಒಂದೇ ಈ ರೋಗದ ಹತೋಟಿಗೆ ಮುಖ್ಯ ವಿಧಾನ. ಈ ಸೊಳ್ಳೆಗಳು ನೀರನ್ನು ಶೇಖರಿಸಿಡುವ ಸಿಮೆಂಟ್ ತೊಟ್ಟಿ, ಡ್ರಮ್ಮು, ಮಣ್ಣಿನ ಮಡಿಕೆ, ಉಪಯೋಗಿಸಿದ ಒಳಕಲ್ಲು ಮುಂತಾದ ಕಡೆ ಶೇಖರವಾಗುವ ನೀರಿನಲ್ಲಿ ಉತ್ಪತ್ತಿಯಾಗುವುದರಿಂದ ನೀರು ನಿಲ್ಲದಂತೆ ಎಚ್ಚರಿಕೆ ವಹಿಸಬೇಕು.


  ಮುಂಜಾಗ್ರತಾ ಕ್ರಮಗಳು, ಎಲ್ಲಾ ನೀರಿನ ತೊಟ್ಟಿ, ಡ್ರಮ್ಮು, ಬ್ಯಾರೆಲ್, ಏರ್‍ಕೂಲರ್ ಇತ್ಯಾದಿಗಳನ್ನು ವಾರಕೊಮ್ಮೆ ಖಾಲಿ ಮಾಡಿ, ಉಜ್ಜಿ ತೊಳೆದು, ಒಣಗಿಸಿ ಮತ್ತೆ ಭರ್ತಿ ಮಾಡಿಕೊಳ್ಳುವುದು. ನೀರು ಖಾಲಿ ಮಾಡಲು ಸಾಧ್ಯವಿಲ್ಲದ ತೊಟ್ಟಿ ಮುಂತಾದವುಗಳನ್ನು ಸೊಳ್ಳೆಗಳು ಒಳಗೆ ನುಸುಳದಂತೆ ಸರಿಯಾದ ಮುಚ್ಚಳದಿಂದ ಮುಚ್ಚುವುದು. ಬಯಲಿನಲ್ಲಿರುವ ತ್ಯಾಜ್ಯ ವಸ್ತುಗಳಾದ ಟೈರು, ಎಳನೀರಿನ ಚಿಪ್ಪು, ಒಡೆದ ಬಾಟಲಿ ಮುಂತಾದವುಗಳಲ್ಲಿ ಮಳೆನೀರು ಸಂಗ್ರಹವಾಗದಂತೆ ಎಚ್ಚರವಹಿಸುವುದು ಅಥವಾ ಸೂಕ್ತ ವಿಲೇವಾರಿ ಮಾಡುವುದು. ಸ್ವಯಂ ರಕ್ಷಣಾ ವಿಧಾನಗಳಾದ ಸೊಳ್ಳೆ ನಿರೋಧಕಗಳನ್ನು ಹಾಗೂ ಸೊಳ್ಳೆ ಪರದೆಯನ್ನು ಬಳಸಿ, ಸೊಳ್ಳೆಗಳು ಕಚ್ಚದಂತೆ ಎಚ್ಚರಿಕೆ ವಹಿಸುವುದು ಎಂದು ಪ್ರಕಟಣೆ ತಿಳಿಸಿದೆ.

Click


    ಕಾರ್ಯಕ್ರಮದಲ್ಲಿ ವೇಳೆ ಡಿಹೆಚ್‍ಓ ಡಾ.ರಾಜೇಶ್ ಸುರಗಿಹಳ್ಳಿ, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ.ಗುಡುದಪ್ಪ ಕಸಬಿ, ಆರ್‍ಸಿಹೆಚ್ ಅಧಿಕಾರಿ ಡಾ.ನಾಗರಾಜ್, ಐಎಂಎ ಅಧ್ಯಕ್ಷ ಡಾ.ಅರುಣ್ ತಾಲ್ಲೂಕು ವೈದ್ಯಾಧಿಕಾರಿಗಳು, ಇತರೆ ಕಾರ್ಯಕ್ರಮಾಧಿಕಾರಿಗಳು, ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು.

Exit mobile version