Site icon TUNGATARANGA

ಅಂತರಕಾಲೇಜು ವಿದ್ಯಾರ್ಥಿ ಕಾರ್ಯಾಗಾರ ಉದ್ಘಾಟಿಸಿದ ವಾಣಿಜ್ಯ ತೆರಿಗೆ ಇಲಾಖೆ ಜಂಟಿ ಆಯುಕ್ತರಾದ ನಜೀಯ ಅಮನ್ | ಜಿಎಸ್ಟಿ ದೇಶದ ಆರ್ಥಿಕತೆಯನ್ನು ಏಕೀಕರಿಸಿದೆ 

ವಮೊಗ್ಗ : ಒಂದು ದೇಶ ಒಂದು ತೆರಿಗೆಯ ಮೂಲಕ ಜಿಎಸ್ಟಿ ದೇಶದ ಆರ್ಥಿಕತೆಯನ್ನು ಏಕೀಕರಿಸಿದೆ ಎಂದು ವಾಣಿಜ್ಯ ತೆರಿಗೆ ಇಲಾಖೆ ಜಂಟಿ ಆಯುಕ್ತರಾದ ನಜೀಯ ಅಮನ್ ಅಭಿಪ್ರಾಯಪಟ್ಟರು.

ನಗರದ ಕಮಲಾ ನೆಹರು ಸ್ಮಾರಕ ರಾಷ್ಟ್ರೀಯ ಮಹಿಳಾ ಕಾಲೇಜಿನಲ್ಲಿ ವಾಣಿಜ್ಯ ವಿಭಾಗದ ವತಿಯಿಂದ ಗುರುವಾರ ಏರ್ಪಡಿಸಿದ್ದ ಅಂತರಕಾಲೇಜು ವಿದ್ಯಾರ್ಥಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಒಂದು ದೇಶ ಒಂದು ತೆರಿಗೆಯ ಹಿಂದೆ ಅನೇಕ ಸಂಶೋಧನಾ ಪ್ರಯತ್ನಗಳು ನಡೆದಿದೆ.‌ ಜಿಎಸ್ಟಿ ಪ್ರಾರಂಭದಲ್ಲಿ ಅನೇಕ ಚರ್ಚೆಗಳನ್ನು ಹುಟ್ಟು ಹಾಕಿದ್ದು ನಿಜ. ಅದರೇ ಇಂದು ಜಿಎಸ್ಟಿ ಅವಶ್ಯಕತೆ ಎಲ್ಲರಿಗೂ ಅರ್ಥವಾಗಿದೆ. ಎಲ್ಲಾ ರಾಜ್ಯಗಳು ಏಕ ತೆರಿಗೆ ದರವನ್ನು ವಿಧಿಸುತ್ತಿರುವುದರಿಂದ ಉದ್ಯಮಿಗಳಿಗೂ ಲಾಭವಾಗಿದೆ, ದೇಶದ ಆರ್ಥಿಕತೆಯು ಲಾಭಾಂಶದ ಪಥದತ್ತ ಸಾಗುತ್ತಿದೆ. 

ಜಿಎಸ್ಟಿ ಡಿಜಿಟಲ್ ಇಂಡಿಯಾದಲ್ಲಿ ಹೊಸ ಕ್ರಾಂತಿ ಮಾಡಲಿದ್ದು, ವ್ಯಾಪಾರ ವಹಿವಾಟು ನಡೆಸುವುದು ಸುಲಭವಾಗುವುದಷ್ಟೇ ಅಲ್ಲ, ಹೇಗೆ ವ್ಯಾಪಾರ ಮಾಡಬೇಕು ಎಂಬುದನ್ನು ತೋರಿಸಿಕೊಡುತ್ತದೆ. ಉದ್ಯಮಿಗಳು ಅಂತರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧಿಸುವ ಚೇತನ ನೀಡಲಿದೆ ಎಂದು ಹೇಳಿದರು.

ಎನ್ಇಎಸ್ ಶೈಕ್ಷಣಿಕ ಆಡಳಿತಾಧಿಕಾರಿ ಎ.ಎನ್.ರಾಮಚಂದ್ರ ಮಾತನಾಡಿ, ಹೊಸತನದ ಬದಲಾವಣೆಗಳಿಗೆ ಜಿಎಸ್ಟಿ ಪೂರಕವಾಗಿದೆ. ಒಂದು ಕಾಲದಲ್ಲಿ ಆಡಿಟ್ ಪ್ರಕ್ರಿಯೆ ಕೇವಲ ಉದ್ಯಮ ಮತ್ತು ವ್ಯವಹಾರದ ಪರಿಶೀಲನೆ ಮಾಡುವುದಕ್ಕೆ ಮಾತ್ರ ಸೀಮಿತವಾಗಿತ್ತು. ಅದರೇ ಬಿಗ್ ಡೇಟಾ ಅನಾಲಿಸಿಸ್ ಮೂಲಕ ಆಡಿಟ್ ಪ್ರಕ್ರಿಯೆಗೆ ನಾವೀನ್ಯತೆಯ ಸ್ಪರ್ಶ ದೊರಕಿದೆ. ಎಂಎಸ್ಎಂಇ ವೇದಿಕೆಗಳ ಮೂಲಕ ಸಣ್ಣ ಮತ್ತು ಮಧ್ಯಮ ಉದ್ಯಮಕ್ಕೆ ಮತ್ತಷ್ಟು ಬಲ ನೀಡುತ್ತಿದೆ.

ವಿದ್ಯಾರ್ಥಿಗಳ ಶೈಕ್ಷಣಿಕ ಚಟುವಟಿಕೆಗಳ ನಡುವೆ ಉದ್ಯಮಶೀಲ ಚಿಂತನೆಗಳಿಗೆ ಹೆಚ್ಚು ಒತ್ತು ನೀಡಬೇಕಿದೆ. ಇಂದು ನಮ್ಮಲ್ಲಿನ ಕನಸುಗಳು, ಧಾರ್ಮಿಕ ಭಾವನೆಗಳು ಸೇರಿದಂತೆ ಎಲ್ಲವೂ ಉತ್ಪನ್ನಗಳಾಗಿವೆ. ಉದ್ಯಮವಾಗಿ ಪರಿವರ್ತಿಸಿಕೊಳ್ಳಬಹುದಾದ ಎಲ್ಲಾ ವಾತಾವರಣಗಳು ನಮ್ಮೆದುರಿಗಿದ್ದು ಸಮರ್ಪಕವಾಗಿ ಬಳಸಿಕೊಳ್ಳಿ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಪ್ರಾಂಶುಪಾಲರಾದ ಡಾ.ಹೆಚ್.ಎಸ್.ನಾಗಭೂಷಣ್ ಅಧ್ಯಕ್ಷತೆ ವಹಿಸಿದ್ದರು. ವಾಣಿಜ್ಯ ವಿಭಾಗದ ಮುಖ್ಯಸ್ಥರಾದ ಪ್ರೊ.ಎಂ.ಆಶಲತಾ, ಎಜುರೈಟ್ ಕಾಲೇಜಿನ ಪ್ರಾಂಶುಪಾಲರಾದ ಡಾ.ಶಂಕರನಾರಾಯಣ, ಸಹ್ಯಾದ್ರಿ ವಾಣಿಜ್ಯ ಕಾಲೇಜಿನ ಡಾ.ಕೆ.ವಿ.ಗಿರಿಧರ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Exit mobile version