Site icon TUNGATARANGA

ಆ.31ರಿಂದ ಶಿವಮೊಗ್ಗ- ಬೆಂಗಳೂರಿಗೆ ಹಕ್ಕಿಗಳ ಹಾರಾಟ…, ವಿಮಾನ ಹಾರಾಟಕ್ಕೆ ಅಸ್ತು ಎಂದ ಇಂಡಿಗೋ


ಶಿವಮೊಗ್ಗ, ಜು.27:
ಅಂತೂ ಶಿವಮೊಗ್ಗಕ್ಕೆ ಹಾರೋ ಹಕ್ಕಿಗಳು ಬರಲು ದಿನಾಂಕ ನಿಗಧಿಯಾಗಿದೆ. ಈ ಹಕ್ಕಿಗಳೊಂದಿಗೆ ಹಾರಲು ಸಿದ್ದರಾಗಲು ಎಲ್ಲಾ ಪ್ರಕ್ರಿಯೆಗಳೂ ಆರಂಭವಾಗಿವೆ.


ಏನಿದು ಕಥೆ ಅಂದ್ಕೊಂಡ್ರಾ? ಶಿವಮೊಗ್ಗ ವಿಮಾನ ನಿಲ್ದಾಣದಿಂದ ವಿಮಾನಗಳ ಹಾರಾಟ ಯಾವಾಗ ಎಂಬ ಪ್ರಶ್ನೆಗೆ ಇಂಡಿಗೋ ವೆಬ್ ಸೈಟ್ ನಲ್ಲಿ ಕೊನೆಗೂ ಉತ್ತರ ಸಿಕ್ಕಿದೆ. ಕೊನೆಗೂ ವೆಬ್ ಸೈಟ್ ನಲ್ಲಿ ವಿಮಾನ ಹಾರಾಟದ ದಿನಾಂಕ, ಸಮಯ ಮತ್ತು ಟಿಕೆಟ್ ದರವನ್ನ ಪ್ರಕಟಿಸಿದೆ.
ವೆಬ್ ಸೈಟ್ ನಲ್ಲಿ ಪ್ರಕಟಿಸಿದರೆ ಬಹುತೇಕ ಹಾರಾಟ ಆರಂಭವಾಗಲಿದೆ.


ಈಗ ವಿಮಾನ ಹಾರಾಟ ನಡೆಸುವ ಇಂಡಿಗೋ ಸಂಸ್ಥೆ ತನ್ನ ವೆಬ್ ಸೈಟ್ ನಲ್ಲಿ ದಿನಾಂಕ ಪ್ರಕಟಿಸಿದೆ. ಕಳೆದ ಫೆ.27 ರಂದು ವಿಮಾನ ನಿಲ್ದಾಣ ಉದ್ಘಾಟನೆಗೊಂಡು ವಿಮಾನಗಳ ಹಾರಾಟದ ನಿರೀಕ್ಷೆಯಲ್ಲಿರುವ ಶಿವಮೊಗ್ಗದ ಜನತೆಗೆ ಖುಷಿಯಾದ ಸುದ್ದಿ ನೀಡಲಾಗಿದೆ.
www.goindigo.in ವೆಬ್ ಸೈಟ್ ನಲ್ಲಿ ಆ.31 ರಿಂದ ವಿಮಾನ ಹಾರಾಟ ಆರಂಭವಾಗಲಿದೆ ಎಂದು ಪ್ರಕಟಿಸಲಾಗಿದೆ. ಆ.31ರಂದು ಮೊದಲ ವಿಮಾನ ಹಾರಾಟ ನಡೆಸಲಿದೆ. ಈ ಮೂಲಕ ಶಿವಮೊಗ್ಗ ವಿಮಾನ ನಿಲ್ದಾಣ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲಿದೆ.


ನಿನ್ನೆ ಬುಧವಾರ ಸಂಜೆ 4 ಗಂಟೆಯಿಂದ ಬುಕ್ಕಿಂಗ್ ಅವಕಾಶ ಕಲ್ಪಿಸಲಾಗಿದೆ. ಆ.31ರ ಬೆಳಗ್ಗೆ 9.50ಕ್ಕೆ ಮೊದಲ ವಿಮಾನ ಬೆಂಗಳೂರಿನಿಂದ ಹೊರಡಲಿದ್ದು ಶಿವಮೊಗ್ಗಕ್ಕೆ 11.05ಕ್ಕೆ ಆಗಮಿಸಿದೆ. ಆ ದಿನ ಪ್ರತಿ ಟಿಕೆಟ್ ದರ 6227 ರೂ. ನಿಗದಿ ಮಾಡಲಾಗಿದೆ. ಅದೇ ದಿನ ಬೆಳಗ್ಗೆ 11.25ಕ್ಕೆ ಶಿವಮೊಗ್ಗದಿಂದ ಹೊರಟು ಮಧ್ಯಾಹ್ನ 12.25ಕ್ಕೆ ಬೆಂಗಳೂರು ತಲುಪಲಿದೆ. ಸೆ.1ರ ಬುಕ್ಕಿಂಗ್ ದರ ಕಡಿತ ಮಾಡಲಾಗಿದ್ದು ಪ್ರತಿ ಟಿಕೆಟ್‌ಗೆ 4 ಸಾವಿರ ರೂ. ನಿಗದಿ ಮಾಡಲಾಗಿದೆ. ಪ್ರತಿ ದಿನ ಅದೇ ಸಮಯದಲ್ಲಿ ವಿಮಾನ ಸಂಚರಿಸಲಿದೆ.
“ಟಿಕೆಟ್ ಬುಕ್ಕಿಂಗ್ ಆರಂಭಗೊಂಡಿದೆ.

ಆ.31ರಂದು ಮೊದಲ ವಿಮಾನ ಬೆಂಗಳೂರಿನಿಂದ ಸಂಚರಿಸಲಿದೆ. ಇನ್ನೆರಡು ದಿನದಲ್ಲಿ ಶಿವಮೊಗ್ಗ-ಬೆಂಗಳೂರು ದೆಹಲಿ ಸೇರಿ ಇತರೆ ಮಾರ್ಗಗಳಿಗೆ ಬುಕ್ಕಿಂಗ್ ಆರಂಭಗೊಳ್ಳಲಿದೆ. ಬುಕ್ಕಿಂಗ್ ಶುರುವಾಗಿ ಕೆಲವೇ ಗಂಟೆಗಳಾಗಿದ್ದು ಟಿಕೆಟ್ ದರ, ಕನೆಕ್ಟಿಂಗ್ ಮಾರ್ಗಗಳ ಕುರಿತ ಬದಲಾವಣೆಗಳಿದ್ದರೆ ಒಂದೆರಡು ದಿನದಲ್ಲಿ ಅಪ್ಡೇಟ್ ಆಗಲಿದೆ ಎನ್ನುತ್ತಾರೆ ಇಂಡಿಗೋ ಏರ್‌ಲೈನ್ಸ್ ಅಧಿಕಾರಿಗಳು. ಚುನಾವಣೆ ಸಮಯದಲ್ಲಿ 10ಕ್ಕೂ ವಿಮಾನಗಳು ಶಿವಮೊಗ್ಗಕ್ಕೆ ಬಂದಿದ್ದವು ಎಂಬುದಿಲ್ಲಿ ನೆನಪಿನ ವಿಚಾರ.

Exit mobile version