Site icon TUNGATARANGA

ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ಮಳೆಯ ನಡುವೆಯೂ ಮಹಿಳೆಯರು ನೂಕುನುಗ್ಗಲು

ಶಿವಮೊಗ್ಗ: ಗೃಹಲಕ್ಷ್ಮಿ ಯೋಜನೆ ಅರ್ಜಿ ಸಲ್ಲಿಕೆಗೆ ನೂಕು ನುಗ್ಗಲು ಉಂಟಾಗಿದ್ದು, ಮಳೆಯ ನಡುವೆಯೂ ನೂರಾರು ಮಹಿಳೆಯರು ಸರದಿ ಸಾಲಿನಲ್ಲಿ ನಿಂತು ಅರ್ಜಿ ಸಲ್ಲಿಸುವ ದೃಶ್ಯ ಸಾಮಾನ್ಯವಾಗಿದೆ.


ವಿನೋಬನಗರದ ಸೂಡಾ ಕಾಂಪ್ಲೆಕ್ಸ್, ಬಸ್ ನಿಲ್ದಾಣ, ದ್ರೌಪದಮ್ಮ ವೃತ್ತದಲ್ಲಿರುವ ಇರುವ ಸೇವಾ ಕೇಂದ್ರಗಳು ಅಧಿಕೃತ ಕೇಂದ್ರಗಳಾಗಿವೆ. ಈ ಕೇಂದ್ರಗಳಲ್ಲಿ ಮಹಿಳೆಯರ ಸಂಖ್ಯೆ ಹೆಚ್ಚಾಗಿದೆ. ಸುರಿಯುತ್ತಿರುವ ಮಳೆಯ ನಡುವೆಯೂ ಬೆಳಗ್ಗೆಯಿಂದಲೇ ತಮ್ಮ ಕೆಲಸ ಕಾರ್ಯಗಳನ್ನು ಬಿಟ್ಟು ಗೃಹ ಲಕ್ಷ್ಮಿ ಯೋಜನೆ ನೋಂದಣಿಗೆ ಅರ್ಜಿ ಸಲ್ಲಿಸಲು ದಿನಗಟ್ಟಲೇ

ಕಾಯುವ ಪರಿಸ್ಥಿತಿ ಎದುರಾಗಿದೆ.
ಸರ್ವರ್ ಸಮಸ್ಯೆ ಸಾಮಾನ್ಯವಾಗಿದೆ. ಅಲ್ಲದೇ, ಈ ಯೋಜನೆ ಆಗಸ್ಟ್ ೧೫ ಕ್ಕೆ ಕೊನೆ ಎಂಬ ಸುಳ್ಳು ವದಂತಿ ಸೇರಿಕೊಂಡು ಆತಂಕಕ್ಕೊಳಗಾದ ಮಹಿಳೆಯರು ಅರ್ಜಿ ಸಲ್ಲಿಸಲು ಮುಗಿಬಿದ್ದಿದ್ದಾರೆ. ಈಗಾಗಲೇ ಕಾಂಗ್ರೆಸ್ ಪಕ್ಷದ ಸ್ಥಳೀಯ ಮುಖಂಡರು ಅರ್ಜಿ ಸಲ್ಲಿಕೆಗೆ ಯಾವುದೇ

ಗಡುವು ಇಲ್ಲ. ಅದು ನಿರಂತರ ಪ್ರಕ್ರಿಯೆ ಎಂದು ಹೇಳಿದ್ದರೂ ಕೂಡ ಅದನ್ನು ಕೇಳುವ ವ್ಯವಧಾನ ಮಹಿಳೆಯರಿಗೆ ಇಲ್ಲವಾಗಿದೆ. ಹೀಗಾಗಿ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ನೂಕುನುಗ್ಗಲು ಉಂಟಾಗಿದೆ.


ಇದರ ಜೊತೆಗೆ ಶಿವಮೊಗ್ಗ ನಗರದಲ್ಲಿ ಕೇವಲ ಮೂರು ಅಧಿಕೃತ ಸೇವಾ ಕೇಂದ್ರಗಳಿದ್ದರೂ ಕೂಡ ಹಲವು ಖಾಸಗಿ ಸೇವಾ ಕೇಂದ್ರಗಳು ಅಧಿಕೃತ ಸೇವಾಕೇಂದ್ರಗಳಿಂದ ಲಾಗಿನ್ ಐಡಿ ಪಡೆದು ಅವರೂ ನೋಂದಣಿ ಮಾಡುತ್ತಿದ್ದಾರೆ. ಇದಕ್ಕೆ ಅವರು ಮಹಿಳೆಯರಿಂದ ಮನಸ್ಸಿಗೆ ಬಂದಂತೆ ಶುಲ್ಕ ಪಡೆಯುತ್ತಿದ್ದಾರೆ ಎಂಬ ದೂರುಗಳಿವೆ.


ಈ ರೀತಿ ಎರವಲು ಲಾಗಿನ್ ಪಡೆಯುವುದು ಕ್ರಿಮಿನಲ್ ಅಪರಾಧವಾಗಿದೆ. ಅಲ್ಲದೇ, ಯಾವುದೇ ಕಾರಣಕ್ಕೂ ಯಾವುದೇ ರೀತಿಯ ಶುಲ್ಕವನ್ನು ಸೇವಾಕೇಂದ್ರಗಳು ಪಡೆಯುವಂತಿಲ್ಲ. ಆದರೂ ಶುಲ್ಕ ಪಡೆಯುತ್ತಿರುವುದು ಕಂಡು ಬಂದಿರುವುದರಿಂದ ಅಂತಹ ಕೇಂದ್ರಗಳ ಅನುಮತಿಯನ್ನು ರದ್ದುಪಡಿಸಲು ಕಾಂಗ್ರೆಸ್ ಮುಖಂಡರು ಆಗ್ರಹಿಸಿದ್ದಾರೆ.

Exit mobile version