Site icon TUNGATARANGA

ಶಾಸಕರು ಅಸಮಾಧಾನ ವ್ಯಕ್ತಪಡಿಸಿ ಮುಖ್ಯಮಂತ್ರಿಗೆ ಬರೆದ ಪತ್ರಗಳು ನಕಲಿಯೋ ಅಸಲಿಯೋ ಬಹಿರಂಗಪಡಿಸಿ: ಮಾಜಿ ಡಿಸಿಎಂ ಕೆಎಸ್ ಈಶ್ವರಪ್ಪ

ಶಿವಮೊಗ್ಗ: ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಇನ್ನೂ ಎರಡು ತಿಂಗಳಾಗಿಲ್ಲ. ಪಕ್ಷದೊಳಗೆ ಬೇಗುದಿಗಳು ಆರಂಭವಾಗಿವೆ ಎಂದು ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಹೇಳಿದರು.


ಅವರು ಇಂದು ಬಿಜೆಪಿ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕಾಂಗ್ರೆಸ್ ಪಕ್ಷದೊಳಗೆಯೇ ಸುಮಾರು ೩೦ಕ್ಕೂ ಹೆಚ್ಚು ಸಾಸಕರು ತಮ್ಮ ಅಸಮಾಧಾನ ವ್ಯಕ್ತಪಡಿಸಿ ಮುಖ್ಯಮಂತ್ರಿಗಳಿಗೆ ಬಹಿರಂಗವಾಗಿಯೇ ಪತ್ರ ಬರೆದಿದ್ದು, ವೈರಲ್ ಆಗಿದೆ. ಪತ್ರ ನಕಲಿಯಾಗಿರಲು ಸಾಧ್ಯವೇ ಇಲ್ಲ. ನಕಲಿಯಾಗಿದ್ದರೆ ತನಿಖೆ ಆಗಲಿ. ಕಾಂಗ್ರೆಸ್‌ನವರೇ ಮಾಡುತ್ತಿದ್ದಾರೊ ಬೇರೆ ಪಕ್ಷದವರು ಮಾಡುತ್ತಿದ್ದಾರೊ ಅದನ್ನು ಬಹಿರಂಗಪಡಿಸಲಿ ಎಂದರು.


ಸಿಂಗಾಪುರದಲ್ಲಿ ಸರ್ಕಾರದ ಪತನಕ್ಕೆ ಷಡ್ಯಂತ್ರ ನಡೆಯುತ್ತಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿಕೆ ನೀಡಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಅವರೇ ಸ್ಪಷ್ಟನೆ ನೀಡಬೇಕು. ಇದರ ಜೊತೆಗೆ ಬಿ.ಕೆ. ಹರಿಪ್ರಸಾದ್ ಕೂಡ ನಮಗೆ ಸಿಎಂ ಮಾಡುವುದು ಗೊತ್ತು ಇಳಿಸುವುದೂ ಗೊತ್ತು ಎಂದು ಹೇಳಿದ್ದಾರೆ. ಅವರ ಹೇಳಿಕೆಯನ್ನು ಹಗುರವಾಗಿ ತೆಗೆದುಕೊಳ್ಳಬಾರದು. ಅವರು ಸಾಮಾನ್ಯ ಕಾರ್ಯಕರ್ತರಲ್ಲ. ರಾಷ್ಟ್ರೀಯ ನಾಯಕರಲ್ಲಿ ಒಬ್ಬರು ಎಂದರು.


ಶಾಸಕ ತನ್ವೀರ್ ಶೇಠ್ ಅವರು ಕೆಜೆ ಹಳ್ಳಿ-ಡಿಜೆಹಳ್ಳಿ, ಹುಬ್ಬಳ್ಳಿ, ಶಿವಮೊಗ್ಗ ಹಾಗೂ ಇನ್ನಿತರ ಕಡೆ ನಡೆದ ಕೋಮು ಗಲಭೆಯ ಕೇಸನ್ನು ವಾಪಾಸು ಪಡೆಯುವಂತೆ ಗೃಹ ಸಚಿವರಿಗೆ ಪತ್ರ ಬರೆದಿದ್ದು, ಯಾವುದೇ ಕಾರಣಕ್ಕೂ ಕೇಸನ್ನು ವಾಪಾಸು ಪಡೆಯಬಾರದು. ವಾಪಾಸು ಪಡೆದರೆ ಮುಸ್ಲಿಂ ಗೂಂಡಾಗಳಿಗೆ ಹಾಗೂ ಕೋಮು ಗಲಭೆಗೆ ಬೆಂಬಲಿಸಿದಂತಾಗುತ್ತದೆ ಎಂದರು.


ಗುತ್ತಿಗೆದಾರರ ಕಾಮಗಾರಿಯ ಬಿಲ್ ಸುಮಾರು ೨೮ಸಾವಿರ ಕೋಟಿ ಇದೆ ಎಂದು ಗುತ್ತಿಗೆದಾರರ ಸಂಘ ಅಧ್ಯಕ್ಷ ಕೆಂಪಣ್ಣ ಅವರು ಹಿಂದಿನ ಸರ್ಕಾರದ ಸಂದರ್ಭದಲ್ಲಿ ಹೋರಾಟ ಮಾಡಿದ್ದರು. ಕಾಂಗ್ರೆಸ್ ಪಕ್ಷದ ಏಜೆಂಟರಾಗಿರುವ ಅವರು ಗುತ್ತಿಗೆದಾರರಿಗೆ ಈವರೆಗೆ ಒಂದು ನಯಾಪೈಸೆಯನ್ನು ಸಹ ಬಿಡುಗಡೆ ಮಾಡಿಸಿಲ್ಲ ಎಂದು ಲೇವಡಿ ಮಾಡಿದರು.


ಹಿಂದಿನ ನಮ್ಮ ಪಕ್ಷದ ಸರ್ಕಾರ ಸಮಾಜಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಇಲಾಖೆ, ನೀರಾವರಿ ಇಲಾಖೆಯ ಅನೇಕ ಕಾಮಗಾರಿಗಳು ಆಗಿದ್ದು, ಕೆಲವು ಅರ್ಧಕ್ಕೆ ನಿಂತು ಮಳೆಗಾಲವಾಗಿರುವುದರಿಂದ ಕಟ್ಟಡಗಳು ಹಾಳಾಗುತ್ತಿವೆ. ಇನ್ನು ಕೆಲವು ಪೂರ್ಣಗೊಂಡಿವೆ. ಇವೆಲ್ಲ ಕಾಮಗಾರಿಗಳಿಗೆ ಕೂಡಲೇ ಸರ್ಕಾರ ಹಣ ಬಿಡುಗಡೆ ಮಾಡಬೇಕು. ಹೊಸ ಕಾಮಗಾರಿಗಳಿಗೆ ಹಣಕಾಸು ಪರಿಸ್ಥಿತಿ ನೋಡಿಕೊಂಡು ಆದೇಶ ನೀಡಬೇಕು ಎಂದು ಸಲಹೆ ನೀಡಿದರು.


ಉಡುಪಿ ಕಾಲೇಜಿನ ಶೌಚಾಲಯದಲ್ಲಿ ಮುಸ್ಲಿಂ ಯುವತಿಯರು ಹಿಂದೂ ಯುವತಿಯರ ಅಂಗಾಂಗಳನ್ನು ಚಿತ್ರೀಕರಿಸಿ ಮುಸ್ಲಿಂ ಯುವಕರಿಗೆ ಕೊಡುತ್ತಿದ್ದು, ಇದರ ಹಿಂದೆ ಯಾರೆಲ್ಲಾ ಇದ್ದಾರೆ ಎಂಬ ಬಗ್ಗೆ ತನಿಖೆ ಆಗಬೇಕು ಎಂದು ಆಗ್ರಹಿಸಿದ ಅವರು, ಹಿಂದೂ ಸಮಾಜ ಜಾಗೃತವಾಗಿ ತಿರುಗಿಬೀಳುವ ಮುನ್ನ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದರು.
ರಾಜ್ಯದಲ್ಲಿ ವ್ಯಾಪಕ ಮಳೆಯಾಗುತ್ತಿದ್ದು, ಹಾನಿಗೊಳಗಾದ ಪ್ರದೇಶಗಳಿಗೆ ಸಚಿವರು ಗಮನಹರಿಸುತ್ತಿಲ್ಲ. ಕೂಡಲೇ ಜಿಲ್ಲಾ ಸಚಿವರು ಮಳೆ ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿ ಪರಿಹಾರ ನೀಡಬೇಕು. ರಾಜ್ಯದಲ್ಲಿ ಮಳೆಯಿಂದ ಹಾನಿಗೊಳಗಾದ ನಷ್ಟದ ಬಗ್ಗೆ ಸರ್ಕಾರ ಕೂಡಲೇ ಶ್ವೇತ ಪತ್ರ ಹೊರಡಿಸಬೇಕು ಎಂದು ಒತ್ತಾಯಿಸಿದರು.
ಸಚಿವ ಮಧು ಬಂಗಾರಪ್ಪ ಅವರಿಗೆ ಸಿಕ್ಕಿರುವ ಇಲಾಖೆ ಪವಿತ್ರವಾದುದು. ಅವರು ಹೊಸಬರು. ಮೊದಲು ಆ ಇಲಾಖೆಯ ಬಗ್ಗೆ ತಿಳಿದುಕೊಳ್ಳಲಿ, ಅಧ್ಯಯನ ಮಾಡಲಿ. ನಂತರ ತೀರ್ಮಾನ ತೆಗೆದುಕೊಳ್ಳಲಿ. ಅವರ ಬಗ್ಗೆ ನಾನು ಟೀಕೆ ಮಾಡುವುದಿಲ್ಲ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಶಾಸಕ ಎಸ್.ಎನ್. ಚನ್ನಬಸಪ್ಪ, ಪ್ರಮುಖರಾದ ಜಗದೀಶ್, ಶಿವರಾಜ್, ನಾಗರಾಜ್, ಚಂದ್ರಶೇಖರ್, ಕೆ.ವಿ. ಅಣ್ಣಪ್ಪ ಉಪಸ್ಥಿತರಿದ್ದರು.

Exit mobile version