Site icon TUNGATARANGA

ಕಾರ್ಗಿಲ್ ವಿಜಯ್ ದಿವಸ್ ಕಾರ್ಯಕ್ರಮವನ್ನು ಉದ್ಘಾಟಿಸಿದ ಶಾಸಕ ಗೋಪಾಲಕೃಷ್ಣ ಬೇಳೂರು ಯುವಶಕ್ತಿ ದೇಶವನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಸಂಕಲ್ಪ ಕೈಗೊಳ್ಳಿ

ಸಾಗರ : ಕಾರ್ಗಿಲ್ ಯುದ್ದದಲ್ಲಿ ಭಾರತೀಯ ಸೈನಿಕರ ಸಾಧನೆ ಯುವ ಸಮೂಹಕ್ಕೆ ಪ್ರೇರಣೆಯಾಗಿದೆ. ಯುವಶಕ್ತಿ ದೇಶವನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಸಂಕಲ್ಪ ಕೈಗೊಳ್ಳಬೇಕು ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಕರೆ ನೀಡಿದರು.


ಇಲ್ಲಿನ ನಗರಸಭೆ ರಂಗಮಂದಿರದಲ್ಲಿ ಬುಧವಾರ ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘ ಹಾಗೂ ಮಾಜಿ ಯೋಧರ ಕಲ್ಯಾಣ ಟ್ರಸ್ಟ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಕಾರ್ಗಿಲ್ ವಿಜಯ್ ದಿವಸ್ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.


ಬಿಸಿಲು ಮಳೆ ಚಳಿಯನ್ನು ಲೆಕ್ಕಿಸದೆ ಗಡಿ ಕಾಯುವ ಯೋಧರು ನಮಗೆಲ್ಲಾ ಸ್ಪೂರ್ತಿಯ ಸೆಲೆ. ಯೋಧರು ಗಡಿಯನ್ನು ಕಾಯುತ್ತಿರುವುದರಿಂದಲೇ ನಾವು ನೆಮ್ಮದಿಯಿಂದ ದೇಶದೊಳಗೆ ಇರಲು ಸಾಧ್ಯವಾಗಿದೆ. ಶಿಕ್ಷಕರು ಬಂದಾಗ ಹೇಗೆ ನಾವು ಕಾಲು ಮುಟ್ಟಿ ನಮಸ್ಕಾರ ಮಾಡುತ್ತೆವೆಯೋ ಯೋಧರು ಬಂದರೂ ಅದೇ ಮಾದರಿ ಅನುಸರಿಸುವುದನ್ನು ಮಕ್ಕಳಿಗೆ ಕಲಿಸಬೇಕು. ಕಾರ್ಗಿಲ್ ಯುದ್ದ ಭಾರತದ ಶೌರ್ಯ ಪರಾಕ್ರಮದ ಸಂಕೇತವಾಗಿದೆ. ಹಿಮಚ್ಛಾದಿತ ಪ್ರದೇಶದಲ್ಲಿ ಯೋಧರು ಪಾಕಿಸ್ತಾನಿ ಸೈನ್ಯವನ್ನು ಮಣ್ಣುಮುಕ್ಕಿಸಿದ್ದು ಸದಾ ದೇಶವಾಸಿಗಳು ನೆನಪಿನಲ್ಲಿ ಇರಿಸಿಕೊಳ್ಳುವ ದಿನವಾಗಿದೆ ಎಂದು ಹೇಳಿದರು.


ಭಾರತೀಯ ಸೈನ್ಯದಲ್ಲಿ ದಶಕಗಳ ಕಾಲ ಸೇವೆ ಸಲ್ಲಿಸಿ ಬರುವ ಸೈನಿಕರಿಗೆ ಸಿಗುವ ಸಲವತ್ತುಗಳ ಬಗ್ಗೆ ಸರಿಯಾದ ಕಾನೂನು ರೂಪಿಸುವ ಅಗತ್ಯವಿದೆ. ಸೈನಿಕರ ಭೂಮಿ ಬೇಡಿಕೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ಗಮನ ಹರಿಸಲಾಗುತ್ತದೆ. ಸಾಗರದಲ್ಲಿ ಸೈನಿಕ ಸೌಧ ನಿರ್ಮಿಸಬೇಕು ಎನ್ನುವ ಟ್ರಸ್ಟ್ ಆಶಯಕ್ಕೆ ಪೂರಕವಾಗಿ ಸ್ಪಂದಿಸುತ್ತೇವೆ ಎಂದ ಅವರು, ಚೀನಾ, ಪಾಕಿಸ್ತಾನದಂತಹ ನೆರೆ ರಾಷ್ಟ್ರಗಳು ಭಾರತದ ಜೊತೆ ಕಾಲು ಕೆರೆದು ಜಗಳಕ್ಕೆ ಬರುತ್ತಿರುವ ಹೊತ್ತಿನಲ್ಲಿ ದೇಶ ಕಾಯುವ ಸೈನ್ಯದ ಪಾತ್ರ ಅವಿಸ್ಮರಣೀಯವಾದದ್ದು ಎಂದು ತಿಳಿಸಿದರು.


ಪೊಲೀಸ್ ಉಪಾಧೀಕ್ಷಕ ರೋಹನ್ ಜಗದೀಶ್ ಮಾತನಾಡಿ, ೧೯೯೯ರಲ್ಲಿ ನಡೆದ ಆಪರೇಶನ್ ವಿಜಯ್ ಭಾರತೀಯ ಸೈನಿಕರ ಸಾಹಸಕ್ಕೆ ಸಾಕ್ಷಿಯಾಗಿದೆ. ಈ ದಿನ ಭಾರತದ ಇತಿಹಾಸದಲ್ಲಿ ಸುವರ್ಣಾಕ್ಷರದಲ್ಲಿ ಬರೆದಿಡುವಂತಹದ್ದಾಗಿದೆ. ಕಾರ್ಗಿಲ್ ವಿಜಯ್ ದಿವಸ್ ನಮ್ಮಲ್ಲಿರುವ ದೇಶಭಕ್ತಿಯನ್ನು ಇನ್ನಷ್ಟು ಹೆಚ್ಚಿಸುತ್ತದೆ. ಯುವಜನರು ಭಾರತೀಯ ಸೈನ್ಯ ಸೇರಿ ದೇಶಸೇವೆ ಮಾಡುವತ್ತ ಆಸಕ್ತಿ ಬೆಳೆಸಿಕೊಳ್ಳಬೇಕು ಎಂದರು.


ಟ್ರಸ್ಟ್ ಅಧ್ಯಕ್ಷ ಅಣ್ಣಪ್ಪ ಡಿ.ಕೆ. ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಜಿ.ಪರಮೇಶ್ವರಪ್ಪ, ನಾರಾಯಣಪ್ಪ ಸೂರನಗದ್ದೆ, ಸುಭಾಷ್ ಕೆ., ಬಿ.ಟಿ.ಸೋಮನ್, ರಂಗರಾಜ ಬಾಳೆಗುಂಡಿ, ಸುಭಾಷ್ಚಂದ್ರ ತೇಜಸ್ವಿ ಇನ್ನಿತರರು ಹಾಜರಿದ್ದರು. ಶೃತಿ ಶ್ರೀನಾಥ್ ಪ್ರಾರ್ಥಿಸಿದರು. ಚಂದ್ರಪ್ಪ ಬಿ. ಸ್ವಾಗತಿಸಿದರು. ವೆಂಕಟೇಶ್ ಜಿ.ಎಸ್. ಪ್ರಾಸ್ತಾವಿಕ ಮಾತನಾಡಿದರು. ಶ್ವೇತಾ ಕಾರ್ಯಕ್ರಮ ನಿರೂಪಿಸಿದರು. ನಂತರ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

Exit mobile version