Site icon TUNGATARANGA

ಸಾಧನೆಗೆ ಮಹಿಳೆ ಪುರುಷರೆಂಬ ಭೇದಭಾವವಿಲ್ಲ | ಪ್ರೊಬೇಷನರಿ ಐಪಿಎಸ್ ಅಧಿಕಾರಿ ಬಿಂದುಮಣಿ ಆರ್.ಎನ್ ಅಭಿಪ್ರಾಯ

ಶಿವಮೊಗ್ಗ : ಯಾವುದೇ ಸಾಧನೆಗಳಿಗೆ ಮಹಿಳೆ ಪುರುಷರೆಂಬ ಭೇದಭಾವವಿಲ್ಲ. ಮಹಿಳೆ ಎಂಬ ಅಂಜಿಕೆ ನಮ್ಮಲ್ಲಿರಬಾರದು. ಆಲೋಚನೆಗಳು ಬದಲಾಗಬೇಕಾಗಿದ್ದು ಎಲ್ಲರೂ ಸಮಾನರು ಎಂಬ ಮನೋಭಾವ ನಿಮ್ಮದಾಗಬೇಕು ಎಂದು ಪ್ರೊಬೇಷನರಿ ಐಪಿಎಸ್ ಅಧಿಕಾರಿ ಬಿಂದುಮಣಿ ಆರ್.ಎನ್ ಅಭಿಪ್ರಾಯಪಟ್ಟರು

.

 ನಗರದ ಕಸ್ತೂರಬಾ ಬಾಲಿಕಾ ಪದವಿಪೂರ್ವ ಕಾಲೇಜಿನ ವತಿಯಿಂದ ಬುಧವಾರ ಅಂಬೇಡ್ಕರ್ ಭವನದಲ್ಲಿ ಈ ಸಾಲಿನ ವಿದ್ಯಾರ್ಥಿನಿ ಸಾಂಸ್ಕೃತಿಕ ವೇದಿಕೆ, ಕ್ರೀಡಾ ವಿಭಾಗ, ಎನ್.ಎಸ್.ಎಸ್ ಘಟಕಗಳ ಉದ್ಘಾಟನಾ ಸಮಾರಂಭ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸಾಧನೆಗೆ ನಿರ್ದಿಷ್ಟ ವ್ಯಾಪ್ತಿಯಿಲ್ಲ. ಒಬ್ಬ ಉತ್ತಮ ನಾಗರೀಕರು ಕೂಡ ಸಮಾಜದ ದೊಡ್ಡ ಸಾಧಕರು. ಕೇವಲ ಇತರರು ಗುರುತಿಸಿದಾಗ ಖ್ಯಾತಿ ಪಡೆದಾಗ ಮಾತ್ರ ನಿಜವಾದ ಸಾಧಕ ಎಂಬ ಭ್ರಮೆ ಬೇಡ. ವಿದ್ಯಾಭ್ಯಾಸದ ಜೊತೆಗೆ ವ್ಯಕ್ತಿತ್ವ ವಿಕಸನವನ್ನು ರೂಡಿಸಿಕೊಳ್ಳಿ. ಒಳ್ಳೆಯ ಪುಸ್ತಕಗಳ ಅಧ್ಯಯನಗಳನ್ನು ಮಾಡಿ. 

ಕೌಶಲ್ಯತೆ ಯಾವುದೇ ಪುಸ್ತಕಗಳಿಂದ ಸಿಗುವುದಿಲ್ಲ. ವಿದ್ಯಾರ್ಥಿ ದೆಸೆಯಲ್ಲಿ ಲಭ್ಯವಿರುವ ಕೌಶಲ್ಯಾಧಾರಿತ ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳಿ. ಇದರಿಂದ ಸಮಯ ನಿರ್ವಹಣೆ, ನಾಯಕತ್ವ ಗುಣಗಳನ್ನು ಬೆಳೆಸಿಕೊಳ್ಳಬಹುದು. ಸಾಮಾಜಿಕ ಜಾಲತಾಣಗಳಿಂದ ಉತ್ತಮ ವಿಚಾರಗಳನ್ನು ಕಲಿಯಬಹುದೆಂಬ ಉದಾಹರಣೆಗಳು ನೀವಾಗಿ.  

ಸಾಮಾಜಿಕ ಜಾಲತಾಣಗಳಿಂದ ಅತಿ ಹೆಚ್ಚು ಅಪರಾಧ ಪ್ರಕರಣಗಳು ದಾಖಲಾಗುತ್ತಿದೆ. ಮಹಿಳಾ ಪೋಲೀಸ್ ಠಾಣೆಗಳ ಮೂಲಕ ಯುವತಿಯರು ಯಾವುದೇ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುವ ಅವಕಾಶವಿದೆ. ಆತ್ಮಹತ್ಯೆಯೊಂದೆ ಎಲ್ಲಾ ಸಮಸ್ಯೆಗಳಿಗೆ ಪರಿಹಾರವಲ್ಲ. ಸಮಸ್ಯೆಗಳನ್ನು ಎದುರಿಸುವ ಆಧಾರದ ಮೇಲೆ ಪರಿಹಾರಗಳು ದೊರೆಯುತ್ತದೆ. ಪೋಲೀಸ್ ಇಲಾಖೆ ಸದಾ ನಾಗರಿಕ ಸ್ನೇಹಿಯಾಗಿ ಜನ ಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸುತ್ತಿದೆ ಎಂದು ಹೇಳಿದರು.

ಡಿಡಿಪಿಯು ಬಿ.ಕೃಷ್ಣಪ್ಪ ಮಾತನಾಡಿ, ಸಾಧಕರ ಮಾತುಗಳು ಯುವಸಮೂಹಕ್ಕೆ ಸಾಧಿಸುವ ಚೈತನ್ಯ ನೀಡುತ್ತದೆ. ಸಮಾಜದಲ್ಲಿನ ಸಾಧಕ ಬಾಧಕಗಳ ಅರಿವು ಪಡೆಯಿರಿ. ನಿರಂತರ ಅಧ್ಯಯನ ಮೂಲಕ ಗುರು ಹಿರಿಯರನ್ನು ಗೌರವಿಸುತ ಉತ್ತಮ ನಾಗರಿಕರಾಗಿ ಹೊರಹೊಮ್ಮಿ ಎಂದು ಹೇಳಿದರು.

ರಾಷ್ಟ್ರೀಯ ಶಿಕ್ಷಣ ಸಮಿತಿ ಸಹ ಕಾರ್ಯದರ್ಶಿ ಡಾ.ಪಿ.ನಾರಾಯಣ್ ಮಾತನಾಡಿದರು. ಪ್ರಾಂಶುಪಾಲರಾದ ಬಿ.ರಂಗಪ್ಪ ಅಧ್ಯಕ್ಷತೆ ವಹಿಸಿದ್ದರು. ಉಪಪ್ರಾಂಶುಪಾಲರಾದ ಕೆ.ಆರ್.ಉಮೇಶ್, ಉಪನ್ಯಾಸಕರಾದ ನಿರಂಜನ್, ವಿದ್ಯಾರ್ಥಿನಿ ಸಂಘದ ನಂದಿತಾ, ಲೀಲಾವತಿ, ಸ್ಪೂರ್ತಿ.ಕೆ.ಪಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. ಇದೇ ವೇಳೆ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ ಪ್ರಥಮ ಮತ್ತು ದ್ವಿತೀಯ ಪಿಯು ವಿದ್ಯಾರ್ಥಿನಿಯರನ್ನು ಅಭಿನಂದಿಸಲಾಯಿತು.

Exit mobile version