Site icon TUNGATARANGA

ಧರ್ಮಸ್ಥಳ ಸೌಜನ್ಯ ಪ್ರಕರಣ ತನಿಖೆ ನಡೆಸಿ ಅಪರಾಧಿಗಳಿಗೆ ತಕ್ಕ ಶಿಕ್ಷೆ ವಿಧಿಸಲು ಮನವಿ

ಶಿವಮೊಗ್ಗ: ಧರ್ಮಸ್ಥಳ ಸೌಜನ್ಯ ಪ್ರಕರಣವನ್ನು ನಿಷ್ಪಕ್ಷಪಾತ ತನಿಖೆ ನಡೆಸಿ ಅಪರಾಧಿಗಳಿಗೆ ತಕ್ಕ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿ ವಿವೇಕ ಶಿವಮೊಗ್ಗ, ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟದ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಲಾಯಿತು.


ಈ ಘಟನೆ ನಡೆದು ಹನ್ನೊಂದು ವರ್ಷಗಳಾಗಿವೆ. ಸೌಜನ್ಯಳ ಪ್ರಕರಣದ ಘಟನೆಗೆ ಸಂಬಂಧಿಸಿದಂತೆ ಆರೋಪಿ ಎಂದು ಬಿಂಬಿಸಲ್ಪಟ್ಟಿದ್ದ ಸಂತೋಷ್ ರಾವ್ ಎಂಬ ಯುವಕನನ್ನು ನಿರ್ದೋಷಿ ಎಂದು ಬಿಡುಗಡೆ ಮಾಡಿರುವುದು ಸ್ವಾಗತವೇ. ಆದರೆ ನಿಜವಾದ ಆರೋಪಿ ಯಾರು ಎಂದು ಇದುವರೆಗೂ ತಿಳಿದುಬಂದಿಲ್ಲ. ಆದ್ದರಿಂದ ನಿಜವಾದ ಆರೋಪಿಯನ್ನು ಪತ್ತೆಹಚ್ಚಿ ಕಠಿಣ ಶಿಕ್ಷೆ ನೀಡಬೇಕು ಎಂದು ಪ್ರತಿಭಟನಕಾರರು ಆಗ್ರಹಿಸಿದರು.


ನ್ಯಾಯಾಲಯದ ತೀರ್ಪಿನಲ್ಲಿ ಕರ್ತವ್ಯಲೋಪ ಎಸಗಿರುವ ಅಧಿಕಾರಿಗಳನ್ನು ತನಿಖೆಗೆ ಒಳಪಡಿಸಬೇಕೆಂದು ಸ್ಪಷ್ಟವಾಗಿ ಆದೇಶಿಸಲಾಗಿದೆ. ಆದ್ದರಿಂದ ಸರ್ಕಾರವೇ ಈ ಪ್ರಕರಣಕ್ಕೆ ನ್ಯಾಯ ಒದಗಿಸಬೇಕು. ಕಾನೂನಿ ಚೌಕಟ್ಟಿಗೆ ತಂದು ತನಿಖೆ ನಡೆಸಿ ಆರೋಪಿಗಳಿಗೆ ಶಿಕ್ಷೆ ನೀಡುವ ಮೂಲಕ ಕಾನೂನಿನ ವ್ಯವಸ್ಥೆಯನ್ನು ಗಟ್ಟಿಗೊಳಿಸಬೇಕು ಎಂದು ಒತ್ತಾಯಿಸಿದರು.


ಧರ್ಮಸ್ಥಳದಲ್ಲಿ ಇದುವರೆಗೂ ಸುಮಾರು ೪೬೨ ಅಸಹಜ ಸಾವಿನ ಪ್ರಕರಣಗಳು ದಾಖಲಾಗಿವೆ.ಅದರಲ್ಲಿ ೯೦ಕ್ಕೂ ಹೆಚ್ಚು ಪ್ರಕರಣಗಳು ಮಹಿಳೆಯರದ್ದೇ ಆಗಿವೆ. ಇದನ್ನು ಗಂಭಿರವಾಗಿ ಪರಿಗಣಿಸಬೇಕು. ಪ್ರಕರಣವನ್ನು ಮಕ್ಕಳ ಹಕ್ಕುಗಳ ಆಯೋಗ ಮತ್ತು ಮಾನವ ಹಕ್ಕುಗಳ ಆಯೋಗ ಕಾರ್ಯತತ್ಪರರಾಗಿ ತಕ್ಷಣ ಕ್ರಮ ಕೈಗೊಳ್ಳಬೇಕು. ಪೊಲೀಸ್ ದೌರ್ಜನ್ಯಕ್ಕೆ ತುತ್ತಾದ ಕುಟುಂಬಕ್ಕೆ ಪರಿಹಾರ ನೀಡಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.


ಈ ಸಂದರ್ಭದಲ್ಲಿ ಪ್ರಮುಖರಾದ ಕೆ.ಪಿ. ಶ್ರೀಪಾಲ್, ಕೆ.ಎಲ್.ಅಶೋಕ್, ಅನನ್ಯ ಶಿವು, ಆರ್.ಕೆ. ಕುಮಾರ್ ಕುಮಾರಚಲ್ಯ, ರೇಖಾಂಬ ಸೇರಿದಂತೆ ಹಲವರಿದ್ದರು.

Exit mobile version