ಸಾಗರ : ಮಣಿಪುರದಲ್ಲಿ ಮಹಿಳೆಯರ ಮೇಲೆ ನಡೆದಿರುವ ಲೈಂಗಿಕ ದೌರ್ಜನ್ಯ ಮತ್ತು ಹಿಂಸೆಯ ವಿರುದ್ದ ಸೂಕ್ತ ಕ್ರಮ ಜರುಗಿಸುವಂತೆ ಒತ್ತಾಯಿಸಿ ಸೋಮವಾರ ಬ್ಲಾಕ್ ಕಾಂಗ್ರೇಸ್ ವತಿಯಿಂದ ಉಪವಿಭಾಗಾಧಿಕಾರಿಗಳ ಕಚೇರಿ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಾಯಿತು.
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಬಿ.ಆರ್.ಜಯಂತ್, ಮಣಿಪುರದಲ್ಲಿ ನಡೆದಿರುವುದು ಅತ್ಯಂತ ಅಮಾನವೀಯ ಘಟನೆ, ಆಡಳಿತರೂಢ ಬಿಜೆಪಿ ಸರ್ಕಾರ ಹಿಂಸೆಯನ್ನು, ಮಹಿಳೆಯರ ಮೇಲಿನ ಅತ್ಯಾಚಾರ ದೌರ್ಜನ್ಯ ತಡೆಗಟ್ಟುವಲ್ಲಿ ಸಂಪೂರ್ಣ ವಿಫಲವಾಗಿದೆ. ಇಡೀ ದೇಶವೇ ತಲೆತಗ್ಗಿಸುವಂತಹ ಘಟನೆ ನಡೆದಾಗ್ಯೂ ಪ್ರಧಾನ ಮಂತ್ರಿಗಳು ಮೌನವಾಗಿರುವುದನ್ನು ಕಾಂಗ್ರೇಸ್ ಪಕ್ಷ ತೀವೃವಾಗಿ ಖಂಡಿಸುತ್ತದೆ. ತಕ್ಷಣ ಘಟನೆಯ ನೈತಿಕ ಹೊಣೆ ಹೊತ್ತು ಮಣಿಪುರ ಮುಖ್ಯಮಂತ್ರಿಗಳು ರಾಜಿನಾಮೆ ನೀಡಬೇಕು. ಪ್ರಧಾನಿ ನರೇಂದ್ರ ಮೋದಿ ದೇಶದ ಜನರ ಕ್ಷಮೆಯಾಚನೆ ಮಾಡಬೇಕು ಎಂದು ಒತ್ತಾಯಿಸಿದರು.
ಮಹಿಳಾ ಕಾಂಗ್ರೇಸ್ ಅಧ್ಯಕ್ಷೆ ಸುಮಂಗಲ ರಾಮಕೃಷ್ಣ ಮಾತನಾಡಿ, ಬಿಜೆಪಿ ಸರ್ಕಾರದ ಅವಧಿಯಲ್ಲಿ ದೇಶಾದ್ಯಂತ ಅಹಿಂಸೆ ತಾಂಡವವಾಡುತ್ತಿದೆ. ಬಿಜೆಪಿ ಸರ್ಕಾರಕ್ಕೆ ಮಹಿಳೆಯರನ್ನು ರಕ್ಷಣೆ ಮಾಡುವುದು ಬೇಕಿಲ್ಲ. ಕೇಂದ್ರ ಸರ್ಕಾರಕ್ಕೆ ಮಣಿಪುರ ಹಿಂಸೆಯನ್ನು ತಡೆಗಟ್ಟಲು ಸಾಧ್ಯವಾಗದೆ ಹೋದರೆ ಸೈನ್ಯಕ್ಕೆ ಜವಾಬ್ದಾರಿಯನ್ನು ನೀಡಲಿ. ಕೇಂದ್ರದ ಬಿಜೆಪಿ ಸರ್ಕಾರಕ್ಕೆ ದೇಶದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಸಾಧ್ಯವಾಗದೆ ಹೋದಲ್ಲಿ ರಾಜಿನಾಮೆ ಕೊಟ್ಟು ಕೆಳಗೆ ಇಳಿಯಲಿ ಎಂದು ಒತ್ತಾಯಿಸಿದ ಅವರು ರಾಷ್ಟ್ರಪತಿಗಳು ಮಧ್ಯಪ್ರವೇಶ ಮಾಡಿ ಮಣಿಪುರದಲ್ಲಿ ಮಹಿಳೆಯರ ಮೇಲೆ ನಡೆದಿರುವ ದೌರ್ಜನ್ಯದ ವಿರುದ್ದ ಕೇಂದ್ರಕ್ಕೆ ಸೂಕ್ತ ನಿರ್ದೇಶನ ನೀಡಬೇಕು ಎಂದರು.
ಪ್ರತಿಭಟನೆಯಲ್ಲಿ ಸುರೇಶಬಾಬು, ಮಕ್ಬೂಲ್ ಅಹ್ಮದ್, ಮರಿಯಾ ಲೀಮಾ, ಗ್ರೇಸಿ ಡಯಾಸ್, ಮೈಕೆಲ್ ಡಿಸೋಜ, ರಫೀಕ್ ಬಾಬಾಜಾನ್, ವಿಲ್ಸನ್ ಗೋನ್ಸಾಲ್ವಿಸ್, ಗಣಪತಿ ಮಂಡಗಳಲೆ, ಚೇತನರಾಜ್ ಕಣ್ಣೂರು, ಡಿ.ದಿನೇಶ್, ಸೋಮಶೇಖರ್ ಲ್ಯಾವಿಗೆರೆ, ಮಹಾಬಲ ಕೌತಿ, ಉಷಾ, ಪಾರ್ವತಿ ಇನ್ನಿತರರು ಹಾಜರಿದ್ದರು.