Site icon TUNGATARANGA

ಜಲಪಾತ ವೀಕ್ಷಿಸುತ್ತಿದ್ದ ಭದ್ರಾವತಿ ಯುವಕ ಕಾಲುಜಾರಿ ಬಿದ್ದು ನೀರು ಪಾಲು | ವೀಡಿಯೋದಲ್ಲಿ ದಾಖಲಾಯ್ತು ಘೋರ ದೃಶ್ಯ


ಕುಂದಾಪುರ: ದುಮ್ಮಿಕ್ಕಿ ಹರಿಯುತ್ತಿದ್ದ ಜಲಪಾತವನ್ನು ವೀಕ್ಷಿಸುತ್ತಾ ನಿಂತಿದ್ದ ಭದ್ರಾವತಿ ಮೂಲದ ಯುವನೋರ್ವ ಕಾಲುಜಾರಿ ಬಿದ್ದು ಸಾವನ್ನಪ್ಪಿರುವ ಘಟನೆ ಉಡುಪಿ ಜಿಲ್ಲೆಯಲ್ಲಿ ನಡೆದಿದೆ.

ಬೈಂದೂರು ತಾಲೂಕಿನ ಕೊಲ್ಲೂರು ಸಮೀಪವಿರುವ ಅರಿಶಿನಗುಂಡಿ ಜಲಪಾತದಲ್ಲಿ ಘಟನೆ ನಡೆದಿದ್ದು, ಮೃತ ಯುವಕನನ್ನು ಭದ್ರಾವತಿ ಮೂಲದ ಶರತ್ ಕುಮಾರ್(23) ಎಂದು ಗುರುತಿಸಲಾಗಿದೆ.

ಘಟನೆ ಹಿನ್ನೆಲೆ:
ಕಾರಿನಲ್ಲಿ ಕೊಲ್ಲೂರಿಗೆ ಬಂದಿದ್ದ ಈತ ಜಲಪಾತ ವೀಕ್ಷಣೆಗೆ ತೆರಳಿದ್ದಾನೆ. ಬಂಡೆಕಲ್ಲಿನ ಮೇಲೆ ನಿಂತು ಜಲಪಾತ ವೀಕ್ಷಣೆ ಮಾಡುತ್ತಿದ್ದ ವೇಳೆಯಲ್ಲಿ ಕಾಲು ಜಾರಿ ನೀರಿಗೆ ಬಿದ್ದಿದ್ದು, ನೀರಿನ ರಭಸಕ್ಕೆ ಆತ ಕೊಚ್ಚಿ ಹೋಗಿದ್ದಾನೆ.
ಯುವಕ ಜಲಪಾತದಲ್ಲಿ ಬೀಳುತ್ತಿರುವ ದೃಶ್ಯವನ್ನು ಮತ್ತೋರ್ವ ಯುವಕ ಸೆರೆ ಹಿಡಿದಿದ್ದು, ಸದ್ಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.


ಘಟನೆ ಹಿನ್ನೆಲೆಯಲ್ಲಿ ಸ್ಥಳಕ್ಕೆ ಕೊಲ್ಲೂರು ಪಿಎಸ್’ಐ ಜಯಲಕ್ಷ್ಮಿ ಹಾಗೂ ಸಿಬ್ಬಂದಿಗಳು ಭೇಟಿ ನೀಡಿದ್ದು ಪರಿಶೀಲನೆ ನಡೆಸುತ್ತಿದ್ದಾರೆ. ಯುವಕನ ಮೃತದೇಹದ ಪತ್ತೆಗಾಗಿ ಅಗ್ನಿಶಾಮಕ ದಳದ ಸಿಬ್ಬಂದಿ ಶೋಧ ಕಾರ್ಯವನ್ನು ನಡೆಸುತ್ತಿದ್ದಾರೆ. ಈ ಕುರಿತು ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ.

ಕಳೆದ ಮೂರು ದಿನಗಳಿಂದಲೂ ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನಲ್ಲಿ ಭಾರೀ ಪ್ರಮಾಣದಲ್ಲಿ ಮಳೆ ಸುರಿಯುತ್ತಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಉಡುಪಿ ಜಿ ಶಾಲಾ, ಪದವಿ ಪೂರ್ವ ಕಾಲೇಜುಗಳಿಗೆ ರಜೆಯನ್ನು ಘೋಷಣೆ ಮಾಡಲಾಗಿದೆ.

ಹವಮಾನ ಇಲಾಖೆ ಮಾಹಿತಿಯಂತೆ ಜಿಲ್ಲೆಯಲ್ಲಿ ಇನ್ನೂ ಹೆಚ್ಚಿನ ಮಳೆಯಾಗುವ ಎಚ್ಚರಿಕೆ ನೀಡಲಾಗಿದೆ.

Exit mobile version