ಶಿವಮೊಗ್ಗ: ಬಿಜೆಪಿಯ ೧೦ ಶಾಸಕರನ್ನು ಅಮಾನತುಗೊಳಿಸಿ ಪ್ರಜಾಪ್ರಭುತ್ವಕ್ಕೆ ಅಗೌರವ ತೋರಿ ಕಾಂಗ್ರೆಸ್ ಸರ್ಕಾರ ದರ್ಪ ದೌರ್ಜನ್ಯ ಪ್ರದರ್ಶಿಸಿದ್ದಲ್ಲದೆ ವಿಧಾನಸಭಾಧ್ಯಕ್ಷರು ತಮ್ಮ ಸ್ಥಾನಕ್ಕೆ ಅಗೌರವ ತೋರಿಸಿ ಪಕ್ಷದ ಕಾರ್ಯಕ್ರಮದಲ್ಲಿ ಭಾವಹಿಸಿದ್ದು, ಸಭಾಧ್ಯಕ್ಷರ ನಡೆ ಖಂಡಿಸಿ ಇಂದು ಶಿವಮೊಗ್ಗ ಜಿಲ್ಲಾ ಬಿಜೆಪಿ ವತಿಯಿಂದ ನಗರದ ಶಿವಪ್ಪನಾಯಕ ವೃತ್ತದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ವಿಧಾನ ಪರಿಷತ್ ಮಾಜಿ ಶಾಸಕ ಆರ್.ಕೆ. ಸಿದ್ರಾಮಣ್ಣ ಬಿಜೆಪಿಯವರು ಮಾನ ಮರ್ಯಾದೆ ಬಿಟ್ಟವರು ಎಂದು ಸಿದ್ದರಾಮಯ್ಯ ಹೇಳುತ್ತಿದ್ದಾರೆ. ಕೊತ್ವಾಲನಂತಹ ರೌಡಿಗೆ ಬೀಡಿ ಸಿಗರೇಟು ಸಪ್ಲೈ ಮಾಡುತ್ತಿದ್ದ, ಶಂಕರ ಬಿದರಿಯಂತ ಐಪಿಎಸ್ ಅಧಿಕಾರಿ ಕರ್ತವ್ಯದಲ್ಲಿದ್ದಾಗ ಕೊರಳಪಟ್ಟಿ ಹಿಡಿದು ತಳ್ಳಾಡಿದ ಭದ್ರಾವತಿ ಶಾಸಕ ಸಂಗಮೇಶ್ ಪ್ರಜಾಪ್ರಭುತ್ವದ ದೇಗುಲದ ಬಾಗಿಲನ್ನು ಕಾಲಿನಿಂದ ಒದ್ದಾಗ ಸುಮ್ಮನಿದ್ದ ನಾಯಕರು ಈಗ ಬಿಜೆಪಿಯ ಶಾಸಕರಿಗೆ ಮರ್ಯಾದೆ ಪಾಠ ಮಾಡುತ್ತಿದ್ದಾರೆ ಎಂದರು.
ಅಮಾನತು ಮಾಡುವ ಬದಲು ಸಭಾಧ್ಯಕ್ಷರು ಕರೆದು ಮಾತನಾಡಬೇಕಿತ್ತು. ಕಾಂಗ್ರೆಸ್ ಗೆ ಪ್ರಜಾಪ್ರಭುತ್ವದಲ್ಲಿ ವಿಶ್ವಾಸವಿಲ್ಲ. ಗ್ಯಾರಂಟಿಗಳಿಗೆ ನಮ್ಮ ವಿರೋಧವಿಲ್ಲ. ಆದರೆ, ಪೊಳ್ಳು ಗ್ಯಾರಂಟಿಗಳಿಗೆ ವಿರೋಧವಿದೆ ಎಂದರು.
ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗ, ದರ್ಪ ದೌರ್ಜನ್ಯ ಮಾಡುವುದು ಅವರ ಪರಂಪರೆಯಾಗಿದೆ. ಶಾಸಕರ ಅಮಾನತು ಎರಡು ದಿನವೆಂದು ಸಭಾಧ್ಯಕ್ಷರು ಹೇಳುತ್ತಿದ್ದಾರೆ. ಆದರೆ, ಎರಡು ನಿಮಿಷವಾದರೂ ಕೂಡ ಅದು ಪ್ರಜಾಪ್ರಭುತ್ವಕ್ಕೆ ಮಾಡಿದ ಅವಮಾನವೇ ಎಂದರು.
ಶಾಸಕರ ಎಸ್.ಎನ್. ಚನ್ನಬಸಪ್ಪ ಮಾತನಾಡಿ, ಇಂದಿರಾಗಾಂಧಿ ಕೂಡ ಪ್ರಜಾಪ್ರಭುತ್ವ ದಮನಕ್ಕೆ ಕೈಹಾಕಿದ್ದರು. ವಿಚಿತ್ರ ಪರಿಸ್ಥಿತಿಯಲ್ಲಿ ಅಧಿವೇಶನ ನಡೆಯುತ್ತಿದ್ದು, ಸ್ಪೀಕರ್ ಪಾರ್ಟಿಯ ಕೈಗೊಂಬೆಯಂತೆ ನಡೆದುಕೊಂಡಿದ್ದು, ಪೀಠಕ್ಕೆ ಅವಮಾನ ಎಂದರು.
ನೂತನ ಶಾಸಕರಿಗೆ ಸ್ಪೀಕರ್ ನಡೆಸಿದ ಕಾರ್ಯಾಗಾರ ಚೆನ್ನಾಗಿತ್ತು. ಆದರೆ, ಅವರ ನಡೆ ಚೆನ್ನಾಗಿರಲಿಲ್ಲ. ಕಾಂಗ್ರೆಸ್ ಕೈಗೊಂಬೆಯಾಗಿರುವ ಸ್ಪೀಕರ್ ಗೌರವಯುತವಾಗಿ ರಾಜೀನಾಮೆ ನೀಡಲಿ. ಅವರ ವಿರುದ್ಧ ಈಗಾಗಲೇ ಅವಿಶ್ವಾಸ ಮಂಡನೆ ಮಾಡಿದ್ದೇವೆ ಎಂದರು.
ಶಾಸಕ ಆರಗ ಜ್ಞಾನೇಂದ್ರ ಮಾತನಾಡಿ, ಮೊದಲು ಸಭಾಧ್ಯಕ್ಷರ ನಡೆ ಹೇಗೆ ಎಂಬುದನ್ನು ಯು.ಟಿ. ಖಾದರ್ ಅವರಿಗೆ ತರಬೇತಿ ನೀಡಬೇಕು. ವಿವಿಧ ಪಕ್ಷಗಳ ಒಕ್ಕೂಟದ ಖಾಸಗಿ ಕಾರ್ಯಕ್ರಮಕ್ಕೆ ನಾಯಕರನ್ನು ಸ್ವಾಗತಿಸಿಲು ಐಎಎಸ್ ಅಧಿಕಾರಿಗಳನ್ನು ಕಳಿಸಿದ್ದು, ಸಾಂವಿಧಾನಿಕ ಲೋಪ ಆಗಿದೆ. ಯಾರೋ ಒಬ್ಬ ಜೋಸೆಫ್ ಎನ್ನುವವರಿಗೆ ಶಾಸಕನೆಂದು ಪಟ್ಟಿಯಲ್ಲಿ ಹೆಸರಿಸಿ ಅವನ ಸ್ವಾಗತಕ್ಕೂ ಐಎಎಸ್ ಅಧಿಕಾರಿ ಕಳಿಸಿದ್ದಾರೆ. ಈ ಬಗ್ಗೆ ಕೂಲಂಕಷವಾಗಿ ತನಿಖೆ ನಡೆಸಬೇಕು ಎಂದು ಸರ್ಕಾರದ ಲೋಪಗಳ ಬಗ್ಗೆ ಹೇಳಲು ಸದನದ ಬಾವಿಗಿಳಿದಾಗ ಪ್ರಮುಖ ಬಿಲ್ ಅನ್ನು ಅದೇ ಸಂದರ್ಭದಲ್ಲಿ ಮಂಡಿಸಿ ವಿಪಕ್ಷಗಳ ಗೈರು ಹಾಜರಿಯಲ್ಲಿ ಬಿಲ್ ಪಾಸ್ ಮಾಡಿರುವುದು ಪ್ರಜಾಪ್ರಭುತ್ವಕ್ಕೆ ದೊಡ್ಡ ಅಗೌರವವಾಗಿದೆ ಎಂದರು.
ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗ ಮಾಜಿ ಉಪ ಸಭಾಪತಿ ಧರ್ಮೇಗೌಡರ ಮೇಲೆ ದೈಹಿಕ ಹಿಂಸೆ ಮಾಡಿದ್ದರು. ಸಭಾ ಪೀಠದ ಮೇಲೆ ಏರಿ ತಳ್ಳಾಡಿದ್ದರು. ನೊಂದ ಅವರು ರೈಲು ಹಳಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದರು. ದಲಿತರಿಗಾಗಿ ೩೪ ಸಾವಿರ ಕೋಟಿ ರೂ. ಮೀಸಲಿಟ್ಟಿದ್ದೇವೆ ಎಂದು ಹೇಳಿ ಅದರಲ್ಲಿ ೧೭ ಸಾವಿರ ಕೋಟಿ ರೂ.ಗಳನ್ನು ಈಗಾಗಲೇ ಹಲವು ಭಾಗ್ಯಗಳಿಗೆ ವಿನಿಯೋಗ ಮಾಡಿದ್ದಾರೆ. ಇದು ದಲಿತರ ತಟ್ಟೆಯ ಊಟವನ್ನು ತೆಗೆದು ಅವರಿಗೆ ಬಡಿಸಿದಂತೆ. ಕಾಂಗ್ರೆಸ್ ನ ಈ ದಗಲ್ಬಾಜಿ ಬಜೆಟ್ ನ ಬಂಡವಾಳ ರಾಜ್ಯದೆಲ್ಲೆಡೆ ಬಿಜೆಪಿ ಹೋರಾಟದ ಮೂಲಕ ಬಯಲಿಗೆಳೆಯಲಿದೆ ಎಂದರು.
ಈಗಾಗಲೇ ವರ್ಗಾವಣೆ ದಂಧೆ ಶುರು ಮಾಡಿದ್ದು, ಹಸಿದ ಹುಲಿಗಳಾಗಿದ್ದಾರೆ. ಕಾಮಗಾರಿಯ ಬಿಲ್ ಪಾಸ್ ಮಾಡುವ ಮೊದಲು ಮಂತ್ರಿಯ ಗಮನಕ್ಕೆ ತರಬೇಕೆಂದು ಆದೇಶ ಹೊರಡಿಸಿದ್ದಾರೆ. ಮುಂದಿನ ದಿನಗಳಲ್ಲಿ ಈ ಎಲ್ಲಾ ಅಂಶಗಳ ಬಗ್ಗೆ ಬಿಜೆಪಿ ಬೀದಿ ಬೀದಿಗಳಲ್ಲಿ ಹೋರಾಟ ಮಾಡಲಿದೆ ಎಂದರು.
ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಮಾತನಾಡಿ, ಮಾತೆತ್ತಿದರೆ ಕಾಂಗ್ರೆಸ್ ನವರು ಅಂಬೇಡ್ಕರ್ ಮತ್ತು ಸಂವಿಧಾನ ಎಂದು ಹೇಳುತ್ತಾರೆ. ಐಎಎಸ್ ಅಧಿಕಾರಿಗಳನ್ನು ಯಾವ ಲೆಕ್ಕಾಚಾರದಲ್ಲಿ ಸಂವಿಧಾನಕ್ಕೆ ವಿರೋಧವಾಗಿ ಸ್ವಾಗತ ಮಾಡಲು ಕಳಿಸಿದರು ಎಂದು ಅವರು ಮೊದಲು ಉತ್ತರ ನೀಡಬೇಕು. ಮತ್ತು ಇದಕ್ಕೆ ಕಾರಣರಾದ ಹಿರಿಯ ಅಧಿಕಾರಿಗಳು ಅವರೇ ಈ ಖರ್ಚು ಭರಿಸಬೇಕು ಎಂದರು.
ಸಭಾಧ್ಯಕ್ಷ ಯು.ಟಿ. ಖಾದರ್ ಅವರು ಗೊತ್ತಿಲ್ಲದೇ ನಾನು ಪಕ್ಷದ ಸಭೆಗೆ ಹೋಗಿದ್ದೆ ಎಂದರೆ ಕ್ಷಮಿಸಬಹುದಿತ್ತು. ಅವರು ಪೀಠಕ್ಕೆ ಯೋಗ್ಯರಲ್ಲ, ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಜನ ತಕ್ಕ ಪಾಠ ಕಲಿಸುತ್ತಾರೆ. ನಾವು ಬಿಜೆಪಿಯ ೬೪ ಪ್ಲಸ್ ೩೪ ಶಾಸಕರಿದ್ದೇವೆ. ಎರಡೂ ಸದನದಲ್ಲಿ ಹೋರಾಟ ಮುಂದುವರೆಸುತ್ತೇವೆ. ಕಾಂಗ್ರೆಸ್ ನಾಯಕ ಹರಿಪ್ರಸಾದ್ ಅವರೇ ಇವತ್ತು ಮುಖ್ಯಮಂತ್ರಿ ಸರಿ ಇಲ್ಲ ಎಂದು ಟೀಕೆ ಮಾಡಿದ್ದಾರೆ. ಗ್ಯಾರಂಟಿಯ ಆಸೆಗೆ ಮುಗ್ಧ ಜನ ಮತ ಹಾಕಿದ್ದಾರೆ. ಆಕಸ್ಮಿಕವಾಗಿ ಈ ಸರ್ಕಾರ ಬಂದಿದೆ. ಇದೇ ಜನ ಕಾಂಗ್ರೆಸ್ ಗೆ ಪಾಠ ಕಲಿಸಲು ಕಾಯುತ್ತಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಶಾಸಕ ಡಿ.ಎಸ್. ಅರುಣ್, ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ. ಮೇಘರಾಜ್, ಮೇಯರ್ ಶಿವಕುಮಾರ್, ಉಪಮೇಯರ್ ಲಕ್ಷ್ಮಿ ಶಂಕರನಾಯ್ಕ್, ಬಿಜೆಪಿ ನಗರಾಧ್ಯಕ್ಷ ಟಿ.ಬಿ. ಜಗದೀಶ್, ಪ್ರಮುಖರಾದ ಎಸ್.ದತ್ತಾತ್ರಿ, ಇ. ವಿಶ್ವಾಸ್, ಎಸ್. ಜ್ಞಾನೇಶ್ವರ್, ಮೋಹನ್ ರೆಡ್ಡಿ, ಶ್ರೀನಾಥ್ ಮೊದಲಾದವರಿದ್ದರು.