ಸಾಗರ : ಕಾಡು ಪ್ರಾಣಿಗಳಿಂದ ಅಡಿಕೆ ತೋಟಕ್ಕೆ ಆಗುತ್ತಿರುವ ನಷ್ಟವನ್ನು ಭರಿಸಿ ಕೊಡುವಂತೆ ಒತ್ತಾಯಿಸಿ ಪ್ರಾಂತ್ಯ ಅಡಿಕೆ ಬೆಳೆಗಾರರ ಸಂಘದ ವತಿಯಿಂದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಸಾಗರ ಪ್ರಾಂತ್ಯದಲ್ಲಿ ಅಡಿಕೆ ಬೆಳೆಗಾರರು ಸಣ್ಣ ಮತ್ತು ಅತಿಸಣ್ಣ ಹಿಡುವಳಿದಾರರಾಗಿದ್ದಾರೆ. ಪದೇಪದೇ ಅಡಿಕೆ ತೋಟಗಳಿಗೆ ಕಾಡುಕೋಣ, ಹಂದಿಗಳು ನುಗ್ಗುತ್ತಿರುವುದರಿಂದ ಅಡಿಕೆ ಸಸಿಗಳು ನಾಶವಾಗುತ್ತಿದೆ. ಜೊತೆಗೆ ಅಡಿಕೆ ಫಸಲನ್ನು ಮಂಗಗಳು ಹಾಳು ಮಾಡುತ್ತಿದ್ದು ಬೆಳೆಗಾರರ ಬದುಕು ತೀವೃ ಸಂಕಷ್ಟಕ್ಕೆ ಸಿಲುಕಿದೆ ಎಂದು ಮನವಿಯಲ್ಲಿ ಹೇಳಲಾಗಿದೆ.
ನಮ್ಮ ಪ್ರಾಂತ್ಯದಲ್ಲಿ ಅರಣ್ಯ ಉಳಿಯಲು ಕಾರಣ ಅಡಿಕೆ ಬೆಳೆಗಾರರು ಎನ್ನುವುದು ದಾಖಲಾರ್ಹ ಸಂಗತಿ. ಅರಣ್ಯವನ್ನು ಸೊಪ್ಪಿನಬೆಟ್ಟ ಹೆಸರಿನಲ್ಲಿ ರಕ್ಷಣೆ ಮಾಡಿಕೊಂಡು ಬರುತ್ತಿದ್ದೇವೆ. ಆದ್ದರಿಂದ ಸೊಪ್ಪಿನಬೆಟ್ಟದ ಸುತ್ತಲೂ ರಕ್ಷಣೆಗಾಗಿ ಬೇಲಿ ನಿರ್ಮಾಣ ಮಾಡುವುದರಿಂದ ಕಾಡು ಪ್ರಾಣಿಗಳ ಹಾವಳಿಯನ್ನು ತಪ್ಪಿಸಬಹುದು. ಜೊತೆಗೆ ಅರಣ್ಯವನ್ನು ಸಹ ಉಳಿಸಲು ಸಾಧ್ಯವಿದೆ. ಕೂಡಲೆ ಅರಣ್ಯ ಇಲಾಖೆಯಿಂದ ಸೊಪ್ಪಿನಬೆಟ್ಟದ ಸುತ್ತಲೂ ಬೇಲಿ ನಿರ್ಮಾಣ ಮಾಡಿ ಅಡಿಕೆ ಬೆಳೆಗಾರರಿಗೆ ಆಗುತ್ತಿರುವ ಸಂಕಷ್ಟವನ್ನು ತಪ್ಪಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಪ್ರಾಂತ್ಯದಲ್ಲಿ ಅಡಿಕೆ ತೋಟಗಳಿಗೆ ಮಂಗಗಳಿಂದ ವಿಪರೀತ ನಷ್ಟ ಉಂಟಾಗುತ್ತಿದೆ. ಕೂಡಲೆ ಮಂಗಗಳನ್ನು ಹಿಡಿಸಿ ದಡ್ಡ ಅರಣ್ಯದಲ್ಲಿ ಬಿಡುವ ಮೂಲಕ ಅಡಿಕೆ ಬೆಳೆಗಾರರನ್ನು ಉಳಿಸಬೇಕು. ಕಾಡು ಪ್ರಾಣಿಗಳಿಂದ ಅಡಿಕೆ ಬೆಳೆಗಾರರಿಗೆ ಆಗಿರುವ ನಷ್ಟಕ್ಕೆ ಇಲಾಖೆಯಿಂದ ಪರಿಹಾರ ಕೊಡಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಸಂಘದ ಅಧ್ಯಕ್ಷ ವ.ಶಂ.ರಾಮಚಂದ್ರ ಭಟ್, ಕಾರ್ಯದರ್ಶಿ ರಾಜೇಂದ್ರ ಕೆ.ಎಸ್., ಪ್ರಮುಖರಾದ ಆರ್.ಎಸ್.ಗಿರಿ, ಯು.ಎಚ್.ರಾಮಪ್ಪ, ತಿಮ್ಮಪ್ಪ ಶ್ರೀಧರ ಪುರ, ದಿನೇಶ್ ಬರದವಳ್ಳಿ, ಚೇತನರಾಜ್ ಕಣ್ಣೂರು, ಬಸವರಾಜ ಗೌಡ, ವೆಂಕಟೇಶ್, ಗಣೇಶ್, ಲಕ್ಷ್ಮೀನಾರಾಯಣ, ತಿರುಮಲ ಮಾವಿನಕುಳಿ, ಲೋಕನಾಥ್ ಬಿಳಿಸಿರಿ ಇನ್ನಿತರರು ಹಾಜರಿದ್ದರು.