Site icon TUNGATARANGA

ಸಾಗರ | ತಹಶೀಲ್ದಾರ್ ಕೊಲೆ ಯತ್ನಕ್ಕೆ ಸಂಬಂಧಿಸಿದ ಪ್ರಕರಣಕ್ಕೆ ಮಾಜಿ ಸಚಿವ ಹಾಲಪ್ಪ ಕಾಗೋಡು ರವರಿಗೆ ಪ್ರಶ್ನೆ ಮಾಡಿದಾದ್ರು ಏನು ?

ಸಾಗರ : ಮಡಸೂರು ಗ್ರಾಮದ ೭ ರೈತರನ್ನು ಜೈಲಿಗೆ ಕಳಿಸಿ ಕೆಲವರು ತಮಾಷೆ ನೋಡುತ್ತಿರುವುದು ಅತ್ಯಂತ ಖೇದಕರ ಸಂಗತಿ. ರೈತರು ಜೈಲಿಗೆ ಹೋಗಿದ್ದರೂ ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅವರು ಮೌನವಾಗಿರುವುದು ಯಾಕೆ ಎಂದು ಮಾಜಿ ಸಚಿವ ಹರತಾಳು ಹಾಲಪ್ಪ ಪ್ರಶ್ನಿಸಿದ್ದಾರೆ.


ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ರೈತರು ಜೈಲಿಗೆ ಹೋಗಿದ್ದರೂ ರಾಜಕೀಯ ಭೀಷ್ಮ, ಭೂಹೀನರಿಗೆ ಭೂಮಿ ಕೊಟ್ಟಿದ್ದಾರೆ ಎಂದು ಕರೆಸಿಕೊಳ್ಳುವ ಕಾಗೋಡು ತಿಮ್ಮಪ್ಪ ಪ್ರತಿಕ್ರಿಯೆ ನೀಡದಿರುವುದು ಅತ್ಯಾಶ್ಚರ್ಯವಾಗಿದೆ ಎಂದು ಹೇಳಿದರು.


ಮಡಸೂರು ಗ್ರಾಮದ ಸ.ನಂ. ೭೧ರಲ್ಲಿ ೯ ರೈತರಿಗೆ ೭೦ರ ದಶಕದಲ್ಲಿ ಜಮೀನು ಮಂಜೂರಾಗಿದೆ. ಕೆಲವು ರೈತರು ಜಮೀನು ಸಾಗುವಳಿ ಮಾಡಿಲ್ಲ. ಈಚೆಗೆ ರೈತರು ಜಮೀನು ಸಾಗುವಳಿಗೆ ಮುಂದಾಗಿದ್ದಾಗ ತಹಶೀಲ್ದಾರ್ ಸ್ಥಳಕ್ಕೆ ಹೋಗಿದ್ದಾರೆ. ಈ ಸಂದರ್ಭದಲ್ಲಿ ರೈತರು ಮತ್ತು ಅಧಿಕಾರಿಗಳ ಜೊತೆ ಮಾತಿನ ಚಕಮಕಿ ನಡೆದಿದೆ. ಆದರೆ ರೈತರು

ತಮ್ಮನ್ನು ಕೊಲೆ ಮಾಡಲು ಪ್ರಯತ್ನ ನಡೆಸಿದ್ದಾರೆ ಎಂದು ತಹಶೀಲ್ದಾರ್ ಪೊಲೀಸರಿಗೆ ದೂರು ನೀಡಿ ರೈತರನ್ನು ಜೈಲಿಗೆ ಕಳಿಸಿರುವುದು ಮಾತ್ರ ದುರದೃಷ್ಟಕರ ಸಂಗತಿ. ಹಲ್ಲೆಯಾಗಿದ್ದರೆ ಸಣ್ಣಪುಟ್ಟ ಗಾಯ ತಹಶೀಲ್ದಾರ್‌ಗಾಗಲೀ, ಇತರೆ ಅಧಿಕಾರಿಗಳಿಗಾಗಲಿ ಆಗಬೇಕಾಗಿತ್ತು. ರೈತರು ಸಹಜವಾಗಿ ಜಮೀನು ಸವರಲು ಕತ್ತಿ, ಕುಡುಗೋಲು ತೆಗೆದುಕೊಂಡು ಹೋಗಿರುತ್ತಾರೆ. ಆದರೆ ತಮ್ಮ ಮೇಲೆ ಮಚ್ಚಿನಿಂದ ಹಲ್ಲೆ ನಡೆಸುವ ಪ್ರಯತ್ನ ಆಗಿದೆ ಎಂದು ತಹಶೀಲ್ದಾರ್ ಹೇಳಿರುವುದು ಸತ್ಯಕ್ಕೆ ದೂರವಾದ ಸಂಗತಿ. ರೈತರ ಮೇಲೆ ಐದಾರು ಕೇಸು ಹಾಕಿ ೧೩ ದಿನಗಳಿಂದ ಜೈಲಿನಲ್ಲಿ ಇರಿಸಲಾಗಿದೆ ಎಂದು ಹೇಳಿದರು.


ಮಲೆನಾಡಿನಲ್ಲಿ ಯಾವ ರೈತರು ಅಧಿಕಾರಿಗಳನ್ನು ಕೊಲೆ ಮಾಡುವ ಹಂತಕ್ಕೆ ಹೋಗಿದ್ದು, ಜೀವ ಬೆದರಿಕೆ ಹಾಕಿದ ಉದಾಹರಣೆ ಇಲ್ಲ. ತಮ್ಮ ಸ್ವಾಧೀನದಲ್ಲಿರುವ ಜಮೀನು ಉಳಿಸಿಕೊಳ್ಳಲು ಸಣ್ಣಪುಟ್ಟ ಮಾತುಕತೆ ಆಡಿರಬಹುದು. ಮಡಸೂರು ರೈತರನ್ನು ಜೈಲಿಗೆ ಕಳಿಸುವುದರ ಹಿಂದೆ ರಾಜಕೀಯ ದುರುದ್ದೇಶ ಇರುವುದು ಎದ್ದು ಕಾಣುತ್ತಿದೆ. ರೈತರನ್ನು ಜೈಲಿಗೆ ಕಳಿಸಿ ಮಜಾ ನೋಡುವ ಪ್ರವೃತ್ತಿ ಯಾವ ರಾಜಕಾರಣಿಗಳು ಶೋಭೆ ತರುವುದಿಲ್ಲ. ಕ್ಷೇತ್ರದ ಶಾಸಕರ ಗೆಲುವಿನ ಹಿಂದೆ ನಿಂತು ತಾವು ರಾಜಕೀಯ ಭೀಷ್ಮ ಎಂದು

ಹೇಳಿಕೊಳ್ಳುತ್ತಿದ್ದ ಕಾಗೋಡು ತಿಮ್ಮಪ್ಪನವರು ರೈತರು ಜೈಲಿಗೆ ಹೋಗಿರುವುದು ಗೊತ್ತಿದ್ದು ಮೌನವಾಗಿ ಬಿಲ ಸೇರಿಕೊಂಡಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದ ಅವರು, ರೈತರನ್ನು ಜೈಲಿಗೆ ಕಳಿಸಿರುವುದರ ಹಿಂದೆ ಅವರ ಆಶೀರ್ವಾದ ಇದೆಯಾ ಎನ್ನುವ ಅನುಮಾನ ಕಾಡುತ್ತಿದೆ ಎಂದು ತಿಳಿಸಿದರು.
ಜಿಲ್ಲಾ ಉಸ್ತುವಾರಿ ಸಚಿವರು ತಾವು ರೈತರ ಪರವಾಗಿ ಹೋರಾಟ ಮಾಡಿದ್ದೇವೆ ಎಂದು ಹೇಳುತ್ತಿದ್ದಾರೆ. ಅವರಿಗೆ ೭ ಜನ ರೈತರು ೧೩ ದಿನಗಳಿಂದ ಜೈಲಿನಲ್ಲಿರುವುದು ಗೊತ್ತಿಲ್ಲವೇ. ಸಚಿವರು ಇದರ ಬಗ್ಗೆ ಗಮನ ಹರಿಸಬೇಕು. ಜೈಲಿಗೆ ಹೋಗಿರುವ ಅಮಾಯಕ ರೈತರನ್ನು ಹೊರಗೆ ತರುವ ನಿಟ್ಟಿನಲ್ಲಿ ನಮ್ಮ ಹಂತದಲ್ಲಿ ಪ್ರಯತ್ನ ನಡೆಸುತ್ತಿದ್ದೇವೆ. ಕ್ಷೇತ್ರವ್ಯಾಪ್ತಿಯಲ್ಲಿ ಇಂತಹ ದಬ್ಬಾಳಿಕೆ ರಾಜಕಾರಣ ಪ್ರಾರಂಭವಾಗಿದೆ. ಈ ದ್ವೇಷದ ರಾಜಕಾರಣ ಎಲ್ಲಿಗೆ ಹೋಗಿ ನಿಲ್ಲುತ್ತದೆಯೋ ಗೊತ್ತಿಲ್ಲ. ಜಿಲ್ಲಾಧಿಕಾರಿಗಳು, ಜಿಲ್ಲಾ ರಕ್ಷಣಾಧಿಕಾರಿಗಳು ಸತ್ಯಾಸತ್ಯತೆಯನ್ನು ಅರಿಯುವ ಪ್ರಯತ್ನ ನಡೆಸಬೇಕು ಎಂದು ಹೇಳಿದರು.
ಗೋಷ್ಟಿಯಲ್ಲಿ ದೇವೇಂದ್ರಪ್ಪ ಯಲಕುಂದ್ಲಿ, ಕೊಟ್ರಪ್ಪ ನೇದರವಳ್ಳಿ, ವಿನಾಯಕ ರಾವ್ ಮನೆಘಟ್ಟ, ಬಿ.ಟಿ.ರವೀಂದ್ರ ಹಾಜರಿದ್ದರು.

Exit mobile version